17 ಮಂದಿಗೂ ಸಚಿವ ಸ್ಥಾನ ಸಿಗಲಿ: ಶಂಕರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.24-ಕಾಂಗ್ರೆಸ್-ಜೆಡಿಎಸ್‍ಗೆ ರಾಜೀನಾಮೆ ಕೊಟ್ಟು ಹೊರಬಂದಿರುವ 17 ಶಾಸಕರನ್ನೂ ಸಂಪುಟಕ್ಕೆ ತೆಗೆದುಕೊಳ್ಳಬೇಕು. ಒಬ್ಬರಿಗೆ ಕೊಟ್ಟು ಮತ್ತೊಬ್ಬರನ್ನು ಬಿಟ್ಟರೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಮಾಜಿ ಸಚಿವ ಆರ್.ಶಂಕರ್ ಹೇಳಿದ್ದಾರೆ.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಯಡಿಯೂರಪ್ಪನವರು ಕೊಟ್ಟ ಮಾತಿನಂತೆ ಎಲ್ಲರನ್ನೂ ಸಂಪುಟಕ್ಕೆ ತೆಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿಯವರಿಗೆ ಆಜ್ಞಾಪೂರ್ವಕ ಮನವಿ ಮಾಡಿದ್ದಾರೆ.

ಸಮ್ಮಿಶ್ರ ಸರ್ಕಾರದಿಂದ ಹೊರಬಂದು ಬಿಜೆಪಿ ಸರ್ಕಾರ ಬರಲು ಕಾರಣರಾದ ಎಲ್ಲ 17 ಮಂದಿಗೂ ಸಚಿವ ಸ್ಥಾನ ನೀಡಬೇಕು. ಈ 17 ಮಂದಿ ರಾಜೀನಾಮೆ ನೀಡಿ ನಂತರ ಬಿಜೆಪಿ ಸೇರಿ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಈ ಪೈಕಿ 11 ಮಂದಿ ಗೆದ್ದಿದ್ದಾರೆ. ಇನ್ನು ಎರಡು ಕ್ಷೇತ್ರದ ಚುನಾವಣೆ ಬಾಕಿ ಇದೆ. ನಾನು ಸೇರಿದಂತೆ ಎಲ್ಲರಿಗೂ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಇದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಈ ಹಿಂದೆ ಸಹಮತ ವ್ಯಕ್ತಪಡಿಸಿದ್ದಾರೆ. ಆದರೆ ಈಗ ಕೇಳಿಬರುತ್ತಿರುವ ಏಳು ಅಥವಾ 9 ಶಾಸಕರಿಗೆ ಮಾತ್ರ ಮಂತ್ರಿ ಸ್ಥಾನ ಎಂಬ ಮಾತು ಸಮಂಜಸವಲ್ಲ. ಎಲ್ಲರಿಗೂ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.  ನಾವು ಸದ್ಯ ಕಾದು ನೋಡುವ ತಂತ್ರಕ್ಕೆ ಅನುಸರಿಸುತ್ತೇವೆ. ಮುಖ್ಯಮಂತ್ರಿಗಳು ತೆಗೆದುಕೊಳ್ಳುವ ನಿರ್ಧಾರವನ್ನು ಎದುರು ನೋಡುತ್ತಿದ್ದೇವೆ ಎಂದು ಶಂಕರ್ ತಿಳಿಸಿದ್ದಾರೆ.

Facebook Comments