ಪತ್ನಿ, ಪುತ್ರನ ಜೊತೆ ಸಿಎಂ ನಿವಾಸಕ್ಕೆ ಆರ್.ಶಂಕರ್ ಭೇಟಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.4- ಸಚಿವ ಸಂಪುಟ ವಿಸ್ತರಣೆಗೆ ದಿನಗಣನೆ ಸಮೀಪಿಸಿರುವಂತೆ ಸಂಪುಟಕ್ಕೆ ಸೇರ್ಪಡೆಯಾಗಲು ಆಕಾಂಕ್ಷಿಗಳ ದಂಡು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಮೇಲೆ ಒತ್ತಡದ ತಂತ್ರ ಅನುಸರಿಸುತ್ತಿದ್ದಾರೆ. ಡಾಲರ್ಸ್ ಕಾಲೋನಿಯ ದವಳಗಿರಿ ನಿವಾಸಕ್ಕೆ ಆಕಾಂಕ್ಷಿಗಳ ದಂಡು ಎಡತಾಕುತ್ತಿದ್ದು, ತಮಗೆ ಈ ಬಾರಿ ಸಂಪುಟದಲ್ಲಿ ಸ್ಥಾನ ನೀಡಬೇಕೆಂದು ಮನವಿ ಮಾಡುತ್ತಿದ್ದಾರೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡದೆ ಹಿಂದೆ ಸರಿದಿದ್ದ ಮಾಜಿ ಶಾಸಕ ಆರ್.ಶಂಕರ್ ಇಂದು ಕುಟುಂಬ ಸಮೇತ ಸಿಎಂ ಬಿಎಸ್‍ವೈ ಅವರನ್ನು ಭೇಟಿಯಾದರು. ಆರ್.ಶಂಕರ್, ಅವರ ಪತ್ನಿ ಹಾಗೂ ಪುತ್ರ ಯಡಿಯೂರಪ್ಪನವರ ನಿವಾಸಕ್ಕೆ ಬಂದು ತಮಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕೆಂದು ಮನವಿ ಮಾಡಿಕೊಂಡರು.
ನೀವು ಹೇಳಿದ್ದಕ್ಕೆ ನಾನು ಮಂತ್ರಿ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ.

ನಮಗೆ ಅನ್ಯಾಯ ಮಾಡಬೇಡಿ. ಗುರುವಾರ ವಿಸ್ತರಣೆಯಾಗಲಿರುವ ಸಂಪುಟಕ್ಕೆ ನಮ್ಮನ್ನು ಪರಿಗಣಿಸಬೇಕು ಎಂದು ಶಂಕರ್ ಕುಟುಂಬದವರು ಮನವಿ ಮಾಡಿದ್ದಾರೆ. ಇದಕ್ಕೆ ಸ್ಪಂದಿಸಿದ ಯಡಿಯೂರಪ್ಪ ನಿಮ್ಮ ತ್ಯಾಗವನ್ನು ನಾನು ಎಂದಿಗೂ ಮರೆಯುವುದಿಲ್ಲ. ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇನೆ. ಜೂನ್‍ನಲ್ಲಿ ಏಳು ವಿಧಾನ ಪರಿಷತ್ ಸ್ಥಾನಗಳು ಖಾಲಿಯಾಗಲಿದ್ದು, ಆ ವೇಳೆ ನಿಮ್ಮನ್ನು ಆಯ್ಕೆ ಮಾಡುತ್ತೇನೆ. ಸ್ವಲ್ಪ ದಿನಗಳವರೆಗೂ ಕಾಯಿರಿ ಎಂದು ಸಲಹೆ ಮಾಡಿದರು.

ಇನ್ನು ಸಂಪುಟಕ್ಕೆ ಸೇರ್ಪಡೆಯಾಗಲು ಹಲವು ದಿನಗಳಿಂದ ಭಾರೀ ಕಸರತ್ತು ನಡೆಸುತ್ತಿರುವ ಮಾಜಿ ಸಚಿವ ಉಮೇಶ್ ಕತ್ತಿ ಇಂದು ಕೂಡ ಸಿಎಂ ನಿವಾಸಕ್ಕೆ ಆಗಮಿಸಿದ್ದರು. ನಿನ್ನೆ ನಿಧನರಾದ ಮಾಜಿ ಸಚಿವ ಡಿ.ಮಂಜುನಾಥ್ ಅವರ ಅಂತಿಮ ದರ್ಶನ ಪಡೆಯಲು ನಿವಾಸಕ್ಕೆ ತೆರಳಿದ್ದ ಮುಖ್ಯಮಂತ್ರಿಯವರ ಜತೆ ಉಮೇಶ್ ಕತ್ತಿಯೂ ತೆರಳಿದ್ದರು. ಹೀಗೆ ಹಲವು ಶಾಸಕರು ಯಡಿಯೂರಪ್ಪನವರ ನಿವಾಸಕ್ಕೆ ಆಗಮಿಸಿ ಸಂಪುಟಕ್ಕೆ ತೆಗೆದುಕೊಳ್ಳುವಂತೆ ಪರೋಕ್ಷವಾಗಿ ಒತ್ತಡ ಹಾಕುತ್ತಿದ್ದಾರೆ.

Facebook Comments