ಹಾವೇರಿ ಜಿಲ್ಲೆ ಉಸ್ತುವಾರಿ ಕೊಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ : ಸಚಿವ ಶಂಕರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.25-ಹಾವೇರಿ ಜಿಲ್ಲೆ ಉಸ್ತುವಾರಿ ಕೊಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ ಎಂದು ತೋಟಗಾರಿಕೆ ಸಚಿವ ಆರ್.ಶಂಕರ್ ತಿಳಿಸಿದರು. ವಿಧಾನಸೌಧದಲ್ಲಿಂದು ತಮ್ಮ ಕಚೇರಿ ಪೂಜೆ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಹಾವೇರಿ ಜಿಲ್ಲೆ ಉಸ್ತುವಾರಿ ನೀಡುವಂತೆ ಮನವಿ ಮಾಡಿದ್ದೆ. ಅದಕ್ಕೆ ಮುಖ್ಯಮಂತ್ರಿ ಸಮ್ಮತಿಸಿದ್ದಾರೆ ಎಂದರು.

ಖಾತೆ ಬದಲಾವಣೆ ಮಾಡಿದಾಗ ಅಸಮಾಧಾನವಿತ್ತು. ಜನರ ಮಧ್ಯೆ ಕೆಲಸ ಮಾಡುವ ಖಾತೆ ಕೊಡಿ ಎಂದು ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿದ್ದೆ. ಮುಖ್ಯಮಂತ್ರಿಯವರು ಸಮಾಧಾನದಿಂದ ಕೆಲ ದಿನ ಕೆಲಸ ಮಾಡುವಂತೆ ಹೇಳಿದ್ದಾರೆ. ಹಾಗಾಗಿ ನನಗೆ ಯಾವುದೇ ಅಸಮಾಧಾನವಿಲ್ಲ. ಕೊಟ್ಟಿರುವ ಖಾತೆಯನ್ನು ನಿಭಾಯಿಸುತ್ತೇನೆ ಎಂದು ಹೇಳಿದರು.

ರೈತರ ಸಮಸ್ಯೆ ಪರಿಹಾರಕ್ಕೆ ನಾನು ಮತ್ತು ಕೃಷಿ ಸಚಿವರು ಒಟ್ಟಾಗಿ ಕೆಲಸ ಮಾಡುತ್ತೇವೆ. ನಾಳಿನ ಹೋರಾಟವನ್ನು ರೈತರು ಕೈ ಬಿಡಬೇಕು. ತೋಟಗಾರಿಕೆ ಅವಲಂಬಿತ ರೈತರ ಅಭಿವೃದ್ಧಿಗೆ ಕೆಲಸ ಮಾಡುತ್ತೇನೆ. ರೈತರ ಮತ್ತು ಸರ್ಕಾರದ ನಡುವೆ ಉತ್ತಮ ಬಾಂಧವ್ಯ ಇರುವಂತೆ ಕೆಲಸ ಮಾಡಲಾಗುವುದು.

ತೋಟಗಾರಿಕೆ ಬೆಳೆಗಳ ಫಸಲಿನ ಮಾರಾಟ, ಸಂಗ್ರಹಣೆ ಸೇರಿದಂತೆ ಎಲ್ಲ ವಿಚಾರಗಳ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ಮಾಡಲಾಗಿದೆ. ರೇಷ್ಮೆ ಬೆಳೆಗಾರರ ಸಮಸ್ಯೆ ಬಗ್ಗೆಯೂ ಮಾಹಿತಿ ಪಡೆದಿದ್ದು, ರೈತರ ಜೀವನ ಜೊತೆ ಚೆಲ್ಲಾಟವಾಡದೆ ಅಭಿವೃದ್ದಿ ಕೆಲಸವನ್ನು ಮಾಡುತ್ತೇನೆ ಎಂದರು.  ಕೃಷಿ ದೇವೋಭವ ಆಗುವಂತೆ ಕೆಲಸ ಮಾಡುತ್ತೇನೆ. ರೈತರ ಆದಾಯ ದ್ವಿಗುಣ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತೇನೆ. ರೈತರ ಆತ್ಮಹತ್ಯೆಗೆ ಕಾರಣ ತಿಳಿದು ಪರಿಹಾರಕ್ಕೆ ಪ್ರಯತ್ನ ಮಾಡುತ್ತೇವೆ.ಕೊರೊನಾ ಹಿನ್ನೆಲೆಯಲ್ಲಿ ಸಾಫ್ಟ್‍ವೇರ್ ಇಂಜಿನಿಯರ್‍ಗಳು ತೋಟಗಾರಿಕೆ ಕಡೆ ಮುಖ ಮಾಡಿದ್ದು, ಉತ್ತೇಜನ ನೀಡುವ ಕೆಲಸವನ್ನು ಸರ್ಕಾರ ಮಾಡಲಿದೆ ಎಂದರು.

ವಿಶ್ವನಾಥ್ ನನ್ನ ಗುರುಗಳು:  ಮಾಜಿ ಸಚಿವ ಎಚ್.ವಿಶ್ವನಾಥ್ ನನ್ನ ರಾಜಕೀಯ ಗುರುಗಳಾಗಿದ್ದು, ಅವರ ಬಗ್ಗೆ ಗೌರವವಿದೆ. ಮುಂದಿನ ದಿನಗಳಲ್ಲಿ ಅವರಿಗೂ ಒಳ್ಳೆಯದಾಗಲಿದೆ. ನಾವೆಲ್ಲ ಒಟ್ಟಾಗೇ ಇದ್ದೇವೆ ಎಂದರು.

ರಾಜಕೀಯವಾಗಿ ಈ ಮಟ್ಟಕ್ಕೆ ಬೆಳೆಯಲು ವಿಶ್ವನಾಥ್ ಕಾರಣ. ಅವರು ಮಾರ್ಗದರ್ಶನ ಆರ್ಶೀವಾದ ಮಾಡಿದ್ದಾರೆ. ಅವರ ಬೆಂಬಲಕ್ಕೆ ನಾವಿದ್ದೇವೆ. ನಾವು ಯಾರಿಗೂ ಡೈವರ್ಸ್ ಕೊಟ್ಟಿಲ್ಲ, ಯಾರನ್ನೂ ಲವ್ ಮಾಡಿಲ್ಲ ಎಂದು ಹೇಳಿದರು.

Facebook Comments