ಸದ್ಯಕ್ಕೆ ರೇಸ್ ಕೋರ್ಸ್ ಸ್ಥಳಾಂತರ ಇಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.23- ಸುಪ್ರೀಂಕೋರ್ಟ್‍ನಲ್ಲಿ ಪ್ರಕರಣ ಬಾಕಿ ಇರುವುದರಿಂದ ನಗರದ ಹೃದಯ ಭಾಗದಲ್ಲಿರುವ ರೇಸ್‍ಕೋರ್ಸ್‍ನ್ನು ಸ್ಥಳಾಂತರ ಮಾಡಿಸಲು ಸಾಧ್ಯವಿಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ವಿಧಾನಪರಿಷತ್‍ನಲ್ಲಿ ಕರ್ನಾಟಕ ರೇಸ್‍ಕೋರ್ಸ್‍ಗಳಿಗೆ ಪರವಾನಗಿ ನೀಡುವ ತಿದ್ದುಪಡಿ ವಿಧೇಯಕ ಮಂಡನೆ ಮಾಡಿ ಅಂಗೀಕಾರ ಕೇಳಿದ ಸಂದರ್ಭದಲ್ಲಿ ಮಾತನಾಡಿದ ಅವರು, ರೇಸ್‍ಕೋರ್ಸ್‍ನ ಕೆಲವು ನಿಯಮಾವಳಿಗಳಿಗೆ ಸಣ್ಣಪುಟ್ಟ ತಿದ್ದುಪಡಿ ತರಲಾಗಿದೆ.

ಸೆಕ್ಷನ್ 4, 5, 6, 7ರ ನಿಯಮಗಳನ್ನು ಉಲ್ಲಂಘನೆ ಮಾಡಿದ ವೇಳೆ 500 ರೂ. ಇದ್ದ ದಂಡದ ಪ್ರಮಾಣವನ್ನು 50 ಸಾವಿರಕ್ಕೆ, ಒಂದು ಸಾವಿರ ಇದ್ದ ದಂಡದ ಪ್ರಮಾಣವನ್ನು ಒಂದು ಲಕ್ಷಕ್ಕೆ ಹೆಚ್ಚಿಸಲಾಗಿದೆ.  ಪರವಾನಗಿ ಇಲ್ಲದೆ ರೇಸ್ ನಡೆಸಿದರೆ , ಪರವಾನಗಿ ಇಲ್ಲದೆ ಮಾಲೀಕರು ರೇಸ್‍ನಲ್ಲಿ ಭಾಗವಹಿಸಿದರೆ ದಂಡ ವಿಧಿಸಲಾಗುತ್ತದೆ.

ದಂಡ ವಿಧಿಸಿ ಅದನ್ನು ವಸೂಲಿ ಮಾಡಲು ನ್ಯಾಯಾಲಯದಲ್ಲಿ ತಗಾದೆಗಳನ್ನು ಎದುರಿಸಲು ಸಕ್ಷಮ ಅಧಿಕಾರಿಯನ್ನು ನಿಯೋಜನೆ ಮಾಡಲಾಗುತ್ತಿದೆ ಎಂದರು. ದಂಡದ ಪ್ರಮಾಣವನ್ನು ಈಗಾಗಲೇ ಒಂದು ಸಾವಿರ ಪಟ್ಟು ಹೆಚ್ಚಿಸಲಾಗಿದೆ. ಅದಕ್ಕಿಂತ ದುಬಾರಿ ಮಾಡಿದರೆ ಟ್ರರ್ಫ್ ಕ್ಲಬ್‍ನವರು ತಡೆಯಾಜ್ಞೆ ತರುವ ಸಾಧ್ಯತೆ ಇದೆ.

ಸದ್ಯಕ್ಕೆ ಇಷ್ಟು ದಂಡದ ಪ್ರಮಾಣ ಇರಲಿ, ಮುಂದಿನ ಅವಧಿಗೆ ಬೇಕಾದರೆ ಮತ್ತಷ್ಟು ಹೆಚ್ಚಿಸೋಣ ಎಂದು ಮಾಧುಸ್ವಾಮಿ ಹೇಳಿದರು. ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್ ಮಾತನಾಡಿ, ರೇಸ್‍ಕೋರ್ಸ್‍ನ್ನು ನಗರದ ಹೃದಯ ಭಾಗದಿಂದ ಹೊರ ವಲಯಕ್ಕೆ ಸ್ಥಳಾಂತರಿಸಬೇಕೆಂದು ಹಲವಾರು ಬಾರಿ ಚರ್ಚೆಯಾಗಿದೆ. ಆದರೆ, ಸಾಧ್ಯವಾಗಿಲ್ಲ.

ಅದರಲ್ಲಿ ಕೇವಲ 300 ಮಂದಿ ಸದಸ್ಯರಿದ್ದಾರೆ. ಅದರ ನಿರ್ದೇಶಕ ಮಂಡಳಿ ಆಯ್ಕೆ ನಡೆಯುವ ಚುನಾವಣೆ ಲೋಕಸಭೆ ಚುನಾವಣೆಗಿಂತಲೂ ಕಡಿಮೆ ಇಲ್ಲ. ಕುದುರೆ ರೇಸ್ ಕ್ರೀಡೆನಾ ಅಥವಾ ಜೂಜಾ ಎಂದೇ ಇನ್ನೂ ನಿರ್ಧಾರವಾಗಿಲ್ಲ.

ಹೊರ ವಲಯಕ್ಕೆ ಅದನ್ನು ಸ್ಥಳಾಂತರಿಸಬೇಕು ಎಂಬ ಪ್ರಶ್ನೆ ಬಂದಾಗ ಟರ್ಫ್ ಕ್ಲಬ್‍ನವರು ಹೈಕೋರ್ಟ್ ಮೊರೆ ಹೋದರು. ಅಲ್ಲಿಂದ ಸುಪ್ರೀಂಕೋರ್ಟ್‍ವರೆಗೂ ಪ್ರಕರಣ ಹೋಗಿದೆ. ಸುಪ್ರೀಂಕೋರ್ಟ್‍ನಲ್ಲಿ ಸರ್ಕಾರದ ಪರ ವಕೀಲರು ವಿಚಾರಣೆಗೆ ಹಾಜರಾಗದೆ ಶರಣಾಗಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್ ಸದಸ್ಯ ನಾರಾಯಣಸ್ವಾಮಿ ಮಾತನಾಡಿ, 64 ಎಕರೆ ಪ್ರದೇಶವನ್ನು ಟರ್ಫ್ ಕ್ಲಬ್‍ಗೆ ಬಿಟ್ಟುಕೊಡಲಾಗಿದೆ. ಅದಕ್ಕೆ ಅವರು ಕೊಡುತ್ತಿರುವ ಬಾಡಿಗೆ ಕೇವಲ 60 ಸಾವಿರ ರೂ. ಅದನ್ನು ಸ್ಥಳಾಂತರಿಸಬೇಕೆಂದು ಯಾರೇ ಕೈ ಹಾಕಿದರೂ ಆ ಸರ್ಕಾರ ಬಿದ್ದು ಹೋಗುತ್ತಿದೆ ಎಂದಾಗ ಮಧ್ಯ ಪ್ರವೇಶಿಸಿದ ಮಾಧುಸ್ವಾಮಿ ಅವರು, ಕೇವಲ 300 ಜನ ಸದಸ್ಯರಿರುವ ಒಂದು ಕ್ಲಬ್‍ನ ಒತ್ತಡಕ್ಕೆ ಮೂರು ಕೋಟಿ ಜನರನ್ನು ಪ್ರತಿನಿಧಿಸುವ ಸರ್ಕಾರ ಒಳಗಾಗಿದೆ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ. ಸದ್ಯಕ್ಕೆ ಪ್ರಕರಣ ಸುಪ್ರೀಂಕೋರ್ಟ್‍ನಲ್ಲಿ ವಿಚಾರಣೆಯಲ್ಲಿದೆ. ಹೀಗಾಗಿ ಅದನ್ನು ಸ್ಥಳಾಂತರಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

ಸಿ.ಎಂ.ಇಬ್ರಾಹಿಂ ಮಾತನಾಡಿ, ಪ್ರತಿ ಮೂರು ತಿಂಗಳಿಗೊಮ್ಮೆ ಟ್ರರ್ಫ್ ಕ್ಲಬ್‍ನವರು ಪರವಾನಗಿಯನ್ನು ನವೀಕರಣ ಮಾಡಿಕೊಳ್ಳಬೇಕು. ಕೋವಿಡ್ ಕಾರಣದಿಂದಾಗಿ ಈಗ ಅವರು ಪರವಾನಗಿಯನ್ನು ನವೀಕರಿಸಿಕೊಂಡಿಲ್ಲ. ಕುದುರೆ ರೇಸು ಜೂಜು ಎಂದು ತೀರ್ಮಾನಿಸಿ ಸರ್ಕಾರ ಅನುಮತಿಯನ್ನು ನಿರಾಕರಿಸಿದ್ದೇ ಆದರೆ ಟರ್ಫ್ ಕ್ಲಬ್ ಶಾಶ್ವತವಾಗಿ ಮುಚ್ಚಿ ಹೋಗಲಿದೆ. ಆ ಕುರಿತು ರಾಜಕೀಯ ಇಚ್ಚಾಶಕ್ತಿ ಪ್ರದರ್ಶಿಸಬೇಕೆಂದು ಒತ್ತಾಯಿಸಿದರು.

ನಾರಾಯಣಸ್ವಾಮಿ ಅವರು ಹೇಳಿದ ಮಾತನ್ನು ಆಡಳಿತ ಪಕ್ಷದ ಶಾಸಕ ಲೇಹರ್‍ಸಿಂಗ್ ಅನುಮೋದಿಸಿದರು. ತೇಜಸ್ವಿನಿ ರಮೇಶ್, ಸಿ.ಎಂ.ನಾಗರಾಜ್, ಕೆ.ಗೋವಿಂದರಾಜ್ ಮತ್ತಿತರ ಸದಸ್ಯರು ಚರ್ಚೆಯಲ್ಲಿ ಭಾಗವಹಿಸಿ ದಂಡದ ಪ್ರಮಾಣವನ್ನು ಹೆಚ್ಚಿಸುವಂತೆ ಸಲಹೆ ನೀಡಿದರು. ಮುಖ್ಯಮಂತ್ರಿಗಳ ಪರವಾನಗಿ ಸಚಿವ ಮಾಧುಸ್ವಾಮಿ ಮಂಡಿಸಿದ ಕಾಯ್ದೆಗೆ ಸದನ ಧ್ವನಿ ಮತದ ಅಂಗೀಕಾರ ನೀಡಿತು.

Facebook Comments