ಉದಾತ್ತ ಮೌಲ್ಯಗಳ ಚಿರಂತನ ಸಾಕ್ಷಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್‍

ಈ ಸುದ್ದಿಯನ್ನು ಶೇರ್ ಮಾಡಿ

ಜೀವನದ ಪ್ರತಿಯೊಂದು ಕ್ಷಣವೂ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗಾಗಿಯೇ ಧ್ಯಾನಿಸಿದ ಡಾ.ಎಸ್. ರಾಧಾಕೃಷ್ಣನ್ ಒಬ್ಬ ಆದರ್ಶ ಶಿಕ್ಷಕನಲ್ಲಿಬೇಕಾದ ಶಾಶ್ವತ ತತ್ವಮಲ್ಯಗಳಿಗೆ ಚಿರಂತನ ಸಾಕ್ಷಿಯಾಗಿದ್ದಾರೆ. ಅವರ ಆದರ್ಶ ತತ್ವದ ಅನುಷ್ಠಾನವೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗುರುನಮನ.

ಸೆ.5ರಂದು ನಮ್ಮ ದೇಶದ ಸರ್ವ ಶ್ರೇಷ್ಠ ವ್ಯಕ್ತಿ, ಶಕ್ತಿ, ಡಾ.ಸರ್ವಪಲ್ಲಿ ರಾಧಾಕೃಷ್ಣನ್‍ರವರ ಜನ್ಮದಿನ. ಗೌರವಾನ್ವಿತ ಶಿಕ್ಷಕರಿಗೆ ನಮನ ಸಲ್ಲಿಸುವ ಹಾಗೂ ಶಿಕ್ಷಕರನ್ನು ಸ್ಮರಿಸುವ ಸಂತಸದ ದಿನ. ನಮ್ಮ ಬಾಲ್ಯದಿಂದಲೂ ಪ್ರಭಾವ ಬೀರಿದ ವ್ಯಕ್ತಿ ಎಂದರೆ ಶಿಕ್ಷಕ ಎಂದು ಹೇಳುತ್ತೇವೆ. ಕಾರಣ, ಶಿಕ್ಷಕನಲ್ಲಿ ಅಂತಹ ಮಾಂತ್ರಿಕ ಶಕ್ತಿ ಇತ್ತು.

ಆ ಶಿಕ್ಷಕರ ನಡತೆ, ನುಡಿ, ಶಿಸ್ತು, ವರ್ತನೆ, ಸಮಯ ಪ್ರಜ್ಞಾ ಬೋಧನಾ ಕೌಶಲ್ಯ, ಹಾವ-ಭಾವ, ತಾಳ್ಮೆ, ಚಿಂತನೆ, ಪ್ರಾಮಾಣಿಕತೆ, ತತ್ತ್ವಜ್ಞಾನ ಇವುಗಳು ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿದ್ದವು. ವಿದ್ಯಾರ್ಥಿಗಳು ತಾಯಿಯನ್ನು ಮೊದಲ ಗುರು ಎಂದು ಭಾವಿಸಿದರೆ ಎರಡನೆ ಅತಿ ಮುಖ್ಯ ಸ್ಥಾನ ಶಿಕ್ಷಕನಿಗೆ ಸಲ್ಲುತ್ತದೆ. ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಶಿಕ್ಷಕ ವರ್ಗಕ್ಕೆ ಸಮಾಜದಲ್ಲಿ ಸ್ಥಾನಮಾನ ತಂದಿತ್ತ ಮಹಾನ್ ಶಿಕ್ಷಕ. ರಾಷ್ಟ್ರಪತಿಯಾಗುವುದಕ್ಕಿಂತ ಮೊದಲು ಡಾ.ಎಸ್.ರಾಧಾಕೃಷ್ಣನ್ ಅತ್ಯುತ್ತಮ ಶಿಕ್ಷಕರಾಗಿದ್ದರು. ಈ ದೇಶದ ಉನ್ನತಿಗೆ ಶಿಕ್ಷಣವೇ ಮೂಲ. ಅಂತಹ ಶಿಕ್ಷಣ ನೀಡುವ ಶಿಕ್ಷಕರನ್ನು ಗೌರವಿಸಬೇಕೆಂದು ಹೇಳುತ್ತಿದ್ದರು. ಅವರ ತತ್ವಗಳ ಪಾಲನೆ ಅತ್ಯಂತ ಅವಶ್ಯಕ.

ಶಿಕ್ಷಕ ದಿನಾಚರಣೆಯಂದು ಅವರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನ ಮಾಡಬೇಕು. ಅವರ ಮËಲಿಕ ಕೃತಿಗಳನ್ನೋದಿ ಅರ್ಥೈಸಿಕೊಂಡು ಆ ತತ್ವಗಳನ್ನು ಪಾಲಿಸಿ ಬದುಕನ್ನು ಸಾರ್ಥಕಗೊಳಿಸಿಕೊಳ್ಳಬೇಕು. ಸರ್ವ ಶಿಕ್ಷಕರಿಗೆ ಅವರ ಬದುಕು ಮಾದರಿಯಾಗಬೇಕು. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂದು ಪುರಂದರದಾಸರು ಸಾರಿದ್ದಾರೆ. ಬದುಕಿನಲ್ಲಿ ವಿದ್ಯಾದಾನಕ್ಕಿಂತ ಶ್ರೇಷ್ಠವಾದ ದಾನ ಮತ್ತೊಂದಿಲ್ಲ ಎಂದಿದ್ದಾರೆ. ಇತ್ತೀಚೆಗೆ ಗುರು-ಶಿಷ್ಯರ ಸಂಬಂಧವೂ ಕೂಡ ಬದಲಾಗುತ್ತಿದೆ. ಗುರುವೇ ನಮಃ! ಬದಲಾಗಿ ಗುರುವೇನು ಮಹಾ? ಎಂಬ ಭಾವ ಗೋಚರಿಸುತ್ತದೆ.

ಶ್ರದ್ಧಾವಾನ್ ಲಭತೇ ಜ್ಞಾನಂ ಶ್ರದ್ಧೆಯುಳ್ಳವನಿಗೆ ಜ್ಞಾನ ಲಭಿಸುತ್ತದೆ. ಮುಂದೊಂದು ಗುರಿ ಬೇಕು, ಹಿಂದೊಬ್ಬ ಗುರು ಬೇಕು. ಆಗ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಬಹುದು.
ಶಿಕ್ಷಕನ ಪ್ರಾಮುಖ್ಯತೆ ಮತ್ತು ಅಸ್ತಿತ್ವವನ್ನು ಎಂದಿಗೂ ಅಲ್ಲಗಳೆಯಲಾಗದು. ಆದ್ದರಿಂದ ಶಿಕ್ಷಕ ಜಾಗೃತನಾಗಿ ಶಿಕ್ಷಣ ವ್ಯವಸ್ಥೆಯನ್ನೇ ಅರ್ಥಪೂರ್ಣ ಮಾಡಬೇಕಾಗಿದೆ. ಶಿಕ್ಷಕನಾದವನಿಗೆ ಮಗು, ಶಾಲೆ, ಸಮಾಜ, ಪರಿಸರಗಳ ಬಗ್ಗೆ ಸರಿಯಾದ ಅರಿವು ಇರಬೇಕು. ಬದುಕಿನ ಬದುಕುವ ದಾರಿಯ ಮಾರ್ಗದರ್ಶನವೇ ಶಿಕ್ಷಣ.

ಸಾವಿದ್ಯಾ ಯಾ ವಿಮುಕ್ತಯೇ ಎಂಬ ಮಾತಿನಂತೆ ನಿಜವಾದ ವಿದ್ಯೆ ವ್ಯಕ್ತಿಯನ್ನು ಅಜ್ಞಾನದ ಅಂಧಕಾರದಿಂದ ಜ್ಞಾನದ ಬೆಳಕಿನತ್ತ ಕೊಂಡೊಯ್ಯುತ್ತದೆ. ಗಾಂಧೀಜಿ
ಶಿಕ್ಷಣವು ಎ ಮ್ಯಾನ್ ಮೇಕಿಂಗ್ ಪ್ರೋಸಸ್ ಎಂದಿದ್ದಾರೆ. ಸಮಾಜ ಬಯಸುವ ನಿರ್ದಿಷ್ಟ ಬದಲಾವಣೆಯನ್ನು ತರುವುದೇ ಶಿಕ್ಷಣ.

ಯಾವುದೇ ಒಂದು ದೇಶದ ಪ್ರಗತಿ ಮತ್ತು ವಿಕಾಸ ಆ ದೇಶದ ಶಿಕ್ಷಣದ ಗುಣಮಟ್ಟವನ್ನು ಅವಲಂಬಿಸಿದೆ. ತರಗತಿಯಲ್ಲಿ ಪಾಠದ ವಿಷಯವನ್ನು ಒಪ್ಪಿಸಿದವನು ಮಾತ್ರವೇ ಗುರುವಲ್ಲ, ವ್ಯಕ್ತಿಗಳಲ್ಲಿ ಅಪೇಕ್ಷಿತ ವರ್ತನೆಯಲ್ಲಿ ಬದಲಾವಣೆ ತಂದವರನ್ನು ನಾವು ಗುರುಗಳ ಸ್ಥಾನದಲ್ಲಿ ಕಾಣುತ್ತೇವೆ, ಸಮಾಜಕ್ಕೂ ಕೊಡುಗೆ ನೀಡಿದವರನ್ನು ಸಾಧು-ಸನ್ಯಾಸಿಗಳು, ಸಂತರನ್ನು ನಾವು ಗುರುಗಳ ಸ್ಥಾನದಲ್ಲಿ ಇರಿಸುತ್ತೇವೆ.

ಗ್ರೀಕ್ ದೇಶದ ದೊರೆ ಅಲೆಗ್ಸಾಂಡರ್ ಹೇಳುವಂತೆ ನನ್ನ ತಂದೆ-ತಾಯಿಗಳಿಗೆ ಜನ್ಮ ನೀಡಿದ್ದಕ್ಕೆ ಕೃತಜ್ಞತೆಗಳು, ನನ್ನ ಬದುಕನ್ನು ರೂಪಿಸಿರುವ ಗುರುವಿನ ನಾನು ಚಿರರುಣಿ ಎಂದಿದ್ದಾರೆ. ಏಕಲವ್ಯ ತನ್ನ ಗುರುವಿಗೆ (ದ್ರೋಣಾಚಾರ್ಯರ) ಮೂರ್ತಿಯನ್ನು ಪೂಜಿಸಿ ಬಿಲ್ವವಿದ್ಯೆಯಲ್ಲಿ ಪರಿಣಿತನಾಗಿದ್ದನು, ಸ್ವಾಮಿ ವಿವೇಕಾನಂದರು ಶ್ರೀ ರಾಮಕೃಷ್ಣ ಪರಮಹಂಸರಿಂದ ಪ್ರಭಾವಿತರಾದರು.

ವಿಶ್ವ ಶ್ರೇಷ್ಠ ಗುರು ಗೌತಮ ಬುದ್ಧನ ಪ್ರಕಾರ ಗುರುವಿನ ಸ್ಥಾನ, ಸೇವೆ ಮಾಡಬಲ್ಲ ಸಾಮಥ್ರ್ಯವಾಗಿದೆ ಎಂದಿದ್ದಾರೆ. ಕೊಠಾರಿ ಆಯೋಗದ ವರದಿಯಲ್ಲಿ ಶಿಕ್ಷಕನನ್ನು ರಾಷ್ಟ್ರದ ಭವಿಷ್ಯದ ನಿರ್ಮಾಪಕ ಎಂದಿದ್ದಾರೆ. ಶಿಕ್ಷಕರಿಗೂ ಇದು ಸಂಭ್ರಮದ ದಿನವಾಗಿತ್ತು. ಆದರೆ ಇತ್ತೀಚಿನ ಕೆಲವು ವರ್ಷಗಳಿಂದ ಶಿಕ್ಷಕರಿಗೆ ಶಿಕ್ಷಕ ದಿನದ ಕುರಿತಾದ ಸಂಭ್ರಮ ಹೊರಟು ಹೋಗಿದೆ. ತಮ್ಮ ವೃತ್ತಿಯನ್ನು ಕುರಿತಾದ ಸಂಭ್ರಮ ಹೊರಟು ಬಂದಿದೆ. ವೃತ್ತಿಯಲ್ಲಿ ಭದ್ರತೆಯೇ ಇಲ್ಲ ಎಂಬ ಭಾವನೆ ಅವರಲ್ಲಿ ಬೇರೂರಿದೆ. ಶಿಕ್ಷಣ ಚೈತನ್ಯದಾಯಕವಾದುದು. ಶಿಕ್ಷಣದಿಂದ ವ್ಯಕ್ತಿಯ ಸರ್ವಾಂಗೀಣ ವಿಕಾಸವಾಗುತ್ತದೆ. ಶಿಕ್ಷಣದಿಂದ ಸಂಸ್ಕøತಿಯು, ಸಂಸ್ಕøತಿಯಿಂದ ಶಿಕ್ಷಣವು ಪ್ರಭಾವಿತವಂತಾದಾಗ ಲೋಕಕಲ್ಯಾಣವಾಗುತ್ತದೆ.

“ಅಂಜಿಕೆ-ಅಪನಂಬಿಕೆಗಳು ತುಂಬಿರುವ ಈ ಜಗತ್ತಿನಲ್ಲಿ ಪರಸ್ಪರ ಗೌರವ ಹಾಗೂ ವಿಶ್ವಾಸಾರ್ಹ ಸ್ನೇಹಗಳನ್ನು ಬೆಳೆಸುವುದೇ ಶಿಕ್ಷಣದ ಗುರಿ ಆಗಿರಬೇಕು” ಎಂದು ಹೇಳಿದ್ದಾರೆ ಐಸೆನ್ ಹೋವರ್.

ಡಾ. ಕುವೆಂಪು ಅವರು “ಪ್ರತಿಯೊಂದು ಮಗುವೂ ಹುಟ್ಟುತ್ತಲೇ ವಿಶ್ವಮಾನವ. ಬೆಳೆಯುತ್ತಾ ನಾವು ಅದನ್ನು ಅಲ್ಪಮಾನವನನ್ನಾಗಿ ಮಾಡುತ್ತೇವೆ. ಮತ್ತೆ ಅದನ್ನು ವಿಶ್ವಮಾನವನನ್ನಾಗಿ ಮಾಡುವುದೇ ವಿದ್ಯೆಯ ಕರ್ತವ್ಯವಾಗಬೇಕು” ಎಂದಿದ್ದಾರೆ.

“ಚಿಂತನೆ ಇಲ್ಲದೆ ಕಲಿಯುವುದು ವ್ಯರ್ಥ, ಕಲಿಯದೆ ಚಿಂತನೆ ಮಾಡುವುದು ಅಪಾಯಕರ. ತನ್ನ ಹಳೆಯ ಜ್ಞಾನವನ್ನು ವಿಮರ್ಶಿಸುತ್ತಾ ಹೊಸ ಹೊಸ ಜ್ಞಾನಾನುಭವಗಳನ್ನು ಸಂಪಾದಿಸುತ್ತಿರುವವನು ಮಾತ್ರ ಇತರರಿಗೆ ಗುರುವಾಗಬಲ್ಲ” ಎಂದಿದ್ದಾರೆ ಕನ್ ಫ್ಯೂಷಿಯಸ್.
-ಸುಮ ಚಂದ್ರಶೇಖರ್

Facebook Comments