ಅಧಿಕೃತವಾಗಿ ಐಎಎಫ್‍ ಸೇರಿದ ರಫೇಲ್ ಫೈಟರ್ ಜೆಟ್‍ಗಳು, ಶತ್ರುಗಳಿಗೆ ನಡುಕ..!

ಈ ಸುದ್ದಿಯನ್ನು ಶೇರ್ ಮಾಡಿ

ಅಂಬಾಲಾ (ಹರ್ಯಾಣ), ಸೆ.10-ಭಾರತೀಯ ವಾಯುಪಡೆ ಇತಿಹಾಸದಲ್ಲಿ ಇಂದು ಮಹತ್ವದ ದಿನ. ಫ್ರಾನ್ಸ್ ನ ಐದು ಅತ್ಯಂತ ಪ್ರಬಲ ರಫೇಲ್ ಫೈಟರ್ ಜೆಟ್‍ಗಳು ಇಂದು ಐಎಎಫ್‍ಗೆ ಅಧಿಕೃತವಾಗಿ ಸೇರ್ಪಡೆಯಾಗಿದೆ.

ಗಡಿ ಭಾಗಗಳಲ್ಲಿ ಚೀನಾ ಮತ್ತು ಪಾಕಿಸ್ತಾನ ಸೇನೆ ಉಪಟಳ ಆತಂಕಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿರುವ ಸಂದರ್ಭದಲ್ಲೇ ಭಾರತೀಯ ವಾಯು ಪಡೆಗೆ ರಫೇಲ್ ಯುದ್ದ ವಿಮಾನಗಳು ಸೇರ್ಪಡೆಯಾಗಿರುವುದು ಅತ್ಯಂತ ಮಹತ್ವದ ಸಂಗತಿಯಾಗಿದೆ.

ಹರ್ಯಾಣದ ಅಂಬಾಲ ವಾಯು ನೆಲೆಯಲ್ಲಿ ಇಂದು ಬೆಳಗ್ಗೆ 10 ಗಂಟೆಗೆ ನಡೆದ ವಿಶೇಷ ಸಮಾರಂಭದಲ್ಲಿ ಐದು ರಫೇಲ್ ಸಮರ ವಿಮಾನಗಳು ಐಎಎಫ್‍ಗೆ ವಿಧ್ಯುಕ್ತವಾಗಿ ಸೇರ್ಪಡೆಗೊಂಡವು. ಇದರೊಂದಿಗೆ ಭಾರತ ರಕ್ಷಣಾ ಸಾಮಥ್ರ್ಯಕ್ಕೆ ನೂರು ಆನೆಗಳ ಬಲ ಲಭಿಸಿದಂತಾಗಿದೆ.

ಅಂಬಾಲಾ ವಾಯು ನೆಲೆಯಲ್ಲಿ ಇಂದು ನಡೆದ ಸಮಾರಂಭದಲ್ಲಿ ರಫೇಲ್ ಫೈಟರ್ ಜೆಟ್‍ಗಳನ್ನು ವಿದ್ಯುಕ್ತವಾಗಿ ಅನಾವರಣಗೊಳಿಸಲಾಯಿತು. ಬಳಿಕ ಈ ಯುದ್ಧ ವಿಮಾನಗಳಿಗೆ ಸರ್ವ ಧರ್ಮ ವಿಶೇಷ ಪೂಜೆ ನೆರವೇರಿಸಲಾಯಿತು.

ತರುವಾಯ 17 ಸ್ಕ್ವಾರ್ಡನ್‍ಗೆ ರಫೇಲ್‍ಗಳ ವಿದ್ಯುಕ್ತ ಸೇರ್ಪಡೆಯನ್ನು ಅಧಿಕೃತವಾಗಿ ಘೋಷಿಸಲಾಯಿತು. ಫ್ರಾನ್ಸ್‍ನ ರಫೇಲ್ ಮತ್ತು ಭಾರತದ ತೇಜಸ್ ಸಮರ ವಿಮಾನಗಳು ಬಾನಂಗಳದಲ್ಲಿ ರೋಚಕ ಹಾರಾಟ ಪ್ರದರ್ಶನ ನಡೆಸಿದವು.

ಸಾರಂಗ್ ಏರೋಬ್ಯಾಟಿಕ್ಸ್ ತಂಡದ ವೈಮಾನಿಕ ಕಸರತ್ತುಗಳು ನೋಡುಗರನ್ನು ವಿಸ್ಮಯಗೊಳಿಸಿತು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಫ್ರಾನ್ಸ್ ಸೇನಾಪಡೆ ಸಚಿವೆ ಫೋರೆನ್ಸ್ ಪರ್ಲಿ ಸಮಾರಂಭದ ಮುಖ್ಯ ಅತಿಥಿಗಳಾಗಿ ಗಮನಸೆಳೆದರು.

ಭಾರತದ ಮೂರು ಸಶಸ್ತ್ರ ಪಡೆಗಳ ಮಹಾ ದಂಡನಾಯಕ (ಸಿಡಿಎಸ್) ಜನರಲ್ ಬಿಪಿನ್ ರಾವ್, ಭಾರತೀಯ ವಾಯು ಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ, ರಕ್ಷಣಾ ಕಾರ್ಯದರ್ಶಿ ಡಾ.ಅಜಯ್ ಕುಮಾರ್, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ದಿ ಸಂಸ್ಥೆ(ಡಿಆರ್‍ಡಿಒ) ಕಾರ್ಯದರ್ಶಿ ಡಾ. ಸತೀಶ್ ರೆಡ್ಡಿ ಮತ್ತು ರಕ್ಷಣಾ ಇಲಾಖೆಯ ಉನ್ನತಾಧಿಕಾರಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.

ಫ್ರೆಂಚ್ ನಿಯೋಗವನ್ನು ಭಾರತದ ಫ್ರಾನ್ಸ್ ರಾಯಭಾರಿ ಎಮ್ಮಾನುಯೆಲ್ ಲೆನೈನ್, ಏರ್ ಜನರಲ್ ಎರಿಕ್ ಅಟಲೆಟ್ ಹಾಗೂ ಫ್ರಾನ್ಸ್ ವಾಯುಪಡೆಯ ಮುಖ್ಯಸ್ಥರು ಮತ್ತು ಉನ್ನತಾಧಿಕಾರಿಗಳು ಪ್ರತಿನಿಧಿಸಿದ್ದರು.

ಫ್ರಾನ್ಸ್‍ನ ರಫೇಲ್ ಫೈಟರ್ ಜೆಟ್‍ಗಳಿಗೆ ಜಲ ಫಿರಂಗಿ ಮೂಲಕ ಗೌರವ ವಂದನೆ ನೀಡಲಾಯಿತು. ನಂತರ ಈ ಐದು ವಿಮಾನಗಳನ್ನು ಐಎಎಫ್‍ಗೆ ವಿದ್ಯುಕ್ತವಾಗಿ ಸೇರ್ಪಡೆಗೊಳಿಸಲಾಯಿತು.

ಈ ಫೈಟರ್ ಜೆಟ್‍ಗಳು ಇಂದಿನಿಂದ ಭಾರತೀಯ ವಾಯುಪಡೆಯ 17 ಸ್ಕ್ವಾಡ್ರನ್ ಗೋಲ್ಡನ್ ಆರೋಸ್‍ನ ಭಾಗವಾಗಿದೆ. ಕಳೆದ ಜುಲೈ 27ರಂದು ಐದು ರಫೇಲ್ ಯುದ್ದ ವಿಮಾನಗಳು ಫ್ರಾನ್ಸ್‍ನಿಂದ ಹರ್ಯಾಣದ ಅಂಬಾಲಾ ಏರ್‍ಬೇಸ್‍ಗೆ ಬಂದಿಳಿದಿದ್ದವು.

Facebook Comments