ರಫೇಲ್ ಜೆಟ್‍ಗಳ ಒಪ್ಪಂದದ ಹಕ್ಕುಬಾಧ್ಯತೆ ಪೂರೈಸದ ಡಸ್ಸೌಲ್ಟ್ ಗೆ ಸಿಎಜಿ ತರಾಟೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಸೆ.24-ಭಾರತೀಯ ವಾಯು ಪಡೆಗೆ ಫ್ರಾನ್ಸ್‍ನ ಅತ್ಯಾಧುನಿಕ ರಫೇಲ್ ಫೈಟರ್ ಜೆಟ್‍ಗಳು ಸೇರ್ಪಡೆಯಾಗಿರುವ ಬೆನ್ನಲ್ಲೇ, ಈ ಒಪ್ಪಂದದ ಹಕ್ಕು ಬಾಧ್ಯತೆಗಳನ್ನು ಪೂರೈಸದ ಫ್ರೆಂಚ್ ಕಂಪನಿ ಡಸ್ಸೌಲ್ಟ್ ಏವಿಯೇಷನ್‍ಗೆ ಭಾರತದ ಲೆಕ್ಕ ಪರಿಶೋಧನಾ ಕಾವಲು ಸಂಸ್ಥೆ ಸಿಎಜಿ ತರಾಟೆಗೆ ತೆಗೆದುಕೊಂಡಿದೆ.

ಭಾರತಕ್ಕೆ 59,000 ಕೋಟಿ ರೂ. ವೆಚ್ಚದಲ್ಲಿ ಒಟ್ಟು 36 ರಫೇಲ್ ಯುದ್ಧ ವಿಮಾನಗಳನ್ನು ಪೂರೈಸಲು ಕೇಂದ್ರ ರಕ್ಷಣಾ ಸಚಿವಾಲಯ ಮತ್ತು ಡಸ್ಸೌಲ್ಟ್ ಏವಿಯೇಷನ್ ಸಂಸ್ಥೆ ನಡುವೆ ಒಪ್ಪಂದವಾಗಿತ್ತು. ಆದರೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ದಿ ಸಂಸ್ಥೆಗೆ (ಡಿಆರ್‍ಡಿಒ) ಒಪ್ಪಂದದ ಕರಾರಿನಲ್ಲಿ ಪೂರೈಸಬೇಕಾದ ಹಕ್ಕುಬಾಧ್ಯತೆಗಳನ್ನು (ಆಫ್‍ಸೆಟ್ ಆಬ್ಲಿಗೇಷನ್ಸ್) ಫ್ರಾನ್ಸ್‍ನ ವಿಮಾನ ತಯಾರಿಕಾ ಕಂಪನಿ ಈವರೆಗೆ ಪೂರೈಸಿಲ್ಲ.

ಈ ಬಗ್ಗೆ ತೀವ್ರ ಅಸಮಾಧಾನ ಲೆಕ್ಕಪರಿಶೋಧನಾ ನಿಯಂತ್ರಕರು ಮತ್ತು ಮಹಾಲೇಖಪಾಲರು (ಕಂಟ್ರೋಲರ್ ಅಂಡ್ ಆಡಿಟರ್ ಜನರಲ್ -ಸಿಎಜಿ), ಡಸ್ಸೌಲ್ಟ್ ಮತ್ತು ಎಂಬಿಡಿಎ ಸಂಸ್ಥೆಗಳನ್ನು ತರಾಟೆಗೆ ತೆಗೆದುಕೊಂಡಿದೆ. ಒಡಂಬಡಿಕೆ ಪ್ರಕಾರ, ವಿದೇಶಿ ಸಂಸ್ಥೆಗಳೊಂದಿಗಿನ ವ್ಯವಹಾರ ಮೊತ್ತದಲ್ಲಿ ಕೆಲವು ಶೇಕಡವಾರು ಪ್ರಮಾಣವು ಭಾರತಕ್ಕೆ ವಿದೇಶಿ ನೇರ ಬಂಡವಾಳ ಹೂಡಿಕೆ ನಿಯಮದಂತೆ ನೀಡಬೇಕು. ಇದು ತಂತ್ರಜ್ಞಾನ ವರ್ಗಾವಣೆ, ಅತ್ಯಾಧುನಿಕ ಬಿಡಿಭಾಗಗಳ ಸ್ಥಳೀಯ ತಯಾರಿಕೆ ಮತ್ತು ಉದ್ಯೋಗ ಸೃಷ್ಟಿ ಇತ್ಯಾದಿಯನ್ನು ಒಳಗೊಂಡಿರುತ್ತದೆ.

36 ಫೈಟರ್ ಜೆಟ್‍ಗಳ (ಮಧ್ಯಮ ಬಹು ಪಾತ್ರದ ಯುದ್ಧ ವಿಮಾಗಳು-ಎಂಎಂಆರ್‍ಸಿಎ) ಸಂಬಂಧ ನಾಲ್ಕು ಒಪ್ಪಂದಗಳ ಪ್ರಕಾರ ಆರಂಭದಲ್ಲಿ (ಸೆಪ್ಟೆಂಬರ್ 2015) ಡಸ್ಸೌಲ್ಟ್ ಮತ್ತು ಎಂಬಿಡಿಎ ಮಾರಾಟ ಸಂಸ್ಥೆಗಳು ಡಿಆರ್‍ಡಿಒಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಪೂರೈಸುವ ಮೂಲಕ ತನ್ನ ಹಕ್ಕುಬಾಧ್ಯತೆಯಲ್ಲಿ ಶೇಕಡ 30ರಷ್ಟು ಪಾಲನ್ನು ಪೂರೈಸಬೇಕಿತ್ತು. ಆದರೆ ಈವರೆಗೆ ಇದು ಆಗಿಲ್ಲ ಎಂದು ಸಿಎಜಿ ವರದಿಯಲ್ಲಿ ತಿಳಿಸಿದೆ.

ಈ ಕುರಿತು ಸಂಸತ್ತಿನಲ್ಲಿ ವರದಿಯೊಂದನ್ನು ಮಂಡಿಸಲಾಗಿದ್ದು, ರಕ್ಷಣಾ ಸಚಿವಾಲಯ ನೀತಿಯನ್ನೂ ಸಹ ಟೀಕಿಸಿದೆ. ಹಗುರ ಲಘು ಯುದ್ದ ವಿಮಾನಗಳಿಗಾಗಿ ದೇಶೀಯ ಎಂಜಿನ್‍ಗಳ (ಕಾವೇರಿ) ತಯಾರಿಕೆಗಾಗಿ ತಂತ್ರಜ್ಞಾನ ನೆರವನ್ನು ಡಿಆರ್‍ಡಿಒ ಕೋರಿತ್ತು. ಆದರೆ ಫ್ರೆಂಚ್ ಕಂಪನಿಗಳು ಈತನಕ ಇದನ್ನು ಪೂರೈಸಿಲ್ಲ ಎಂದು ಸಿಎಜಿ ಅಸಮಾಧಾನ್ಯ ವ್ಯಕ್ತಪಡಿಸಿದೆ.

Facebook Comments