`ರಾ’ಫೇಲ್ ಮುರಿದುಬಿದ್ದ ಕಾಂಗ್ರೆಸ್ ಬ್ರಹ್ಮಾಸ್ತ್ರ, ಮುಂದೇನು..?

ಈ ಸುದ್ದಿಯನ್ನು ಶೇರ್ ಮಾಡಿ

rahulರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ನಡೆದಿದೆ ಎನ್ನಲಾದ ಹಗರಣ ರಾಷ್ಟ್ರ ರಾಜಕೀಯ ವಲಯದಲ್ಲಿ ಈ ವರ್ಷ ವಿವಾದದ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿತು. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬಹುತೇಕ ಎಲ್ಲ ಸಭೆ-ಸಮಾರಂಭಗಳಲ್ಲಿ ಅದರಲ್ಲೂ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯ ಪ್ರಚಾರದ ವೇಳೆ ರಫೇಲ್ ವಿಷಯವನ್ನೇ ಮುನ್ನುಡಿಯಾಗಿಟ್ಟು ಭಾಷಣ ಆರಂಭಿಸುತ್ತಿದ್ದರು. ಅನೇಕ ಸಲ ಪ್ರಧಾನಿ ಮೋದಿಯವರನ್ನು ಚೌಕೀ ದಾರ್ ಚೋರ್ ಸೈ ಎಂದು ರಾಗಾ ಜರಿದಿದ್ದರು. ರಫೇಲ್ ಹಗರಣ ಕುರಿತು ತನಿಖೆ ಅಥವಾ ಸುಪ್ರೀಂಕೋರ್ಟ್‍ನಿಂದ ವಿಚಾರಣೆ ನಡೆದರೆ ಪ್ರಧಾನಿ ಮೋದಿ ಅವರಿಗೆ ಖಂಡಿತಾ ಉಳಿಗಾಲವಿಲ್ಲ. ಇದಕ್ಕೆ ನಾನು ಗ್ಯಾರಂಟಿ ನೀಡುತ್ತೇನೆ ಎಂದು ರಾಗಾ ಪ್ರಲಾಪಿಸಿದ್ದು ಸುಳ್ಳಲ್ಲ.

ಅಲ್ಲದೇ ರಫೇಲ್ ಖರೀದಿ ಒಪ್ಪಂದದಲ್ಲಿನ ಅಂಶಗಳು ಮತ್ತು ಅದರ ವ್ಯವಹಾರಗಳ ಕುರಿತು ರಾಹುಲ್ ನಾಲ್ಕಾರು ಬಾರಿ ತಪ್ಪು ಮಾಹಿತಿಗಳನ್ನು ನೀಡಿದ್ದು ಮಾಧ್ಯಮಗಳಲ್ಲಿ ವರದಿಯಾಗಿವೆ. ಐದು ತಿಂಗಳಲ್ಲಿ ನಾಲ್ಕು ಬಾರಿ ವಿಮಾನ ಖರೀದಿ ದರಗಳ ಕುರಿತು ಅವರು ನೀಡಿದ್ದ ಹೇಳಿಕೆಗಳಲ್ಲಿ ವ್ಯತ್ಯಾಸವಿತ್ತು.
58,000 ಕೋಟಿ ರೂ.ಗಳ(7.8 ಶತಕೋಟಿ ಯುರೋಗಳು) ವೆಚ್ಚದಲ್ಲಿ 36 ರಫೇಲ್ ಫೈಟರ್ ಜೆಟ್‍ಗಳನ್ನು ಫ್ರಾನ್ಸ್‍ನಿಂದ ಖರೀದಿಸಲು ಭಾರತ ಒಪ್ಪಂದ ಮಾಡಿಕೊಂಡ ವ್ಯವಹಾರದಲ್ಲಿ 30,000 ಕೋಟಿ ರೂ.ಗಳ ಭಾರೀ ಅವ್ಯವಹಾರ ನಡೆದಿದೆ ಎಂಬುದು ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳ ಗುರುತರ ಆರೋಪವಾಗಿದೆ.

ಸರ್ವೋಚ್ಚ ನ್ಯಾಯಾಲಯದ ಮೆಟ್ಟಲೇರಿದ್ದ ರಫೇಲ್ ಹಗರಣಕ್ಕೆ ಸುಪ್ರೀಂಕೋರ್ಟ್ ಡಿ.14ರಂದು ತೆರೆ ಎಳೆದಿದೆ. ಈ ವ್ಯವಹಾರದ ಒಪ್ಪಂದ ಕುರಿತ ವಿಚಾರಣೆಯ ಎಲ್ಲ ಅರ್ಜಿಗಳನ್ನು ವಜಾಗೊಳಿಸಿದ ಸುಪ್ರೀಂಕೋರ್ಟ್ ಈ ಪ್ರಕ್ರಿಯೆಯಲ್ಲಿ ಯಾವುದೇ ಅಕ್ರಮ ಅಥವಾ ಪಕ್ಷಪಾತ ನಡೆದಿದೆ ಎಂಬುದರಲ್ಲಿ ಸಾಕ್ಷ್ಯಾಧಾರಗಳಿಲ್ಲ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿ ಮೋದಿ ಸರ್ಕಾರಕ್ಕೆ ಕ್ಲೀನ್ ಚೀಟ್ ನೀಡಿದೆ. ಇದರಿಂದ ರಾಹುಲ್ ಗಾಂಧಿಗೆ ಮುಖಭಂಗವಾಗಿರುವುದು ಸಹಜವೇ ಆಗಿದೆ. ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಈ ವಿಷಯದಲ್ಲಿ ಈಗ ವಿಫಲವಾಗಿರುವುದು ಮಧ್ಯಪ್ರದೇಶ, ರಾಜಸ್ತಾನ ಮತ್ತು ಛತ್ತೀಸ್‍ಗಢದಲ್ಲಿ ಅಧಿಕಾರಕ್ಕೆ ಬಂದಿರುವ ಸಂತಸದ ನಡುವೆ ಕಾನೂನು ಸಮರದ ಸೋಲಿನ ಯಾತನೆ ಅನುಭವಿಸುವಂತೆ ಮಾಡಿದೆ. ರಫೇಲ್ ವಿರುದ್ದದ ಹೋರಾಟದಲ್ಲಿ ರಾಹುಲ್ ಗಾಂಧಿ ವಿಫಲರಾಗಿದ್ದಾರೆ(ರಾಫೇಲ್) ಎಂದು ಬಿಜೆಪಿ ವ್ಯಂಗ್ಯವಾಡುತ್ತಿದೆ.

ಬಿಜೆಪಿ ವಿರುದ್ಧ ಮುಗಿಬೀಳಲು ಕಾಂಗೆಸ್ ಮತ್ತು ಇತರ ಪ್ರತಿಪಕ್ಷಗಳಿಗೆ ಬ್ರಹ್ಮಾಸ್ತ್ರ ಎಂದೇ ಬಣ್ಣಿಸಲಾಗಿದ್ದ ರಫೇಲ್ ತೀರ್ಪು ಬಿಜೆಪಿ ನಿರಾಳವಾಗುವಂತೆ ಮಾಡಿದೆ. ಅಲ್ಲದೇ ಪಂಚ ರಾಜ್ಯಗಳ ಆಘಾತಕಾರಿ ಸೋಲಿನ ಫಲಿತಾಂಶ ಚಿಂತೆಯಿಂದ ಹೊರಬರಲು ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಒಳ್ಳೆಯ ಅವಕಾಶ ದಕ್ಕಿಸಿಕೊಟ್ಟಿದ್ದು ಸುಳ್ಳಲ್ಲ. ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಲು ತುದಿಗಾಲಲ್ಲಿ ನಿಲ್ಲುತ್ತಿದ್ದ ಬಿಜೆಪಿಗೆ ಸುಪ್ರೀಂಕೋರ್ಟ್ ತೀರ್ಪು ಒಂದು ಮಹಾನ್ ಅಸ್ತ್ರವಾಗಿ ಪರಿಣಮಿಸಿದೆ. ಕೈ ಪಕ್ಷ ಮತ್ತು ರಾಹುಲ್ ವಿರುದ್ಧ ಕಟು ಟೀಕೆಗಳ ವ್ಯಂಗೋಕ್ತಿಗಳ ಸುರಿಮಳೆ ಸುರಿಸುತ್ತಿದೆ. ದೇಶದ ಜನರಿಗೆ ತಪ್ಪು ಮಾಹಿತಿ ನೀಡಿದ್ದಕ್ಕಾಗಿ ರಾಹುಲ್ ಕ್ಷಮೆ ಕೋರಬೇಕೆಂದು ಬಿಜೆಪಿ ಸಂಸತ್ತಿನಲ್ಲಿ ಅವರ ವಿರುದ್ಧ ಹಕ್ಕುಚ್ಯುತಿ ಮಂಡಿಸಿ ಮತ್ತೊಂದು ಆಕ್ರಮಣ ನಡೆಸಿದೆ.
ಕಾಂಗ್ರೆಸ್ ಕೊನೆ ಅಸ್ತ್ರ ಜೆಪಿಸಿ ?ಬಿಜೆಪಿಯ ವಾಗ್ದಾಳಿಗಳಿಗೆ ಪ್ರತ್ಯುತ್ತರ ನೀಡುತ್ತಿರುವ ಕಾಂಗ್ರೆಸ್ ರಫೇಲ್ ಬಗ್ಗೆ ಜಂಟಿ ಸಂಸದೀಯ ಸಮಿತಿ(ಜೆಪಿಸಿ-ಜಾಯಿಂಟ್ ಪಾರ್ಲಿಮೆಂಟರಿ ಕಮಿಟಿ) ತನಿಖೆ ನಡೆಯಬೇಕೆಂಬ ತನ್ನ ಬಿಗಿ ಪಟ್ಟು ಮುಂದುವರಿದಿದೆ. ಇದೇ ವಿಚಾರ ಕಳೆದ ಆರು ದಿನಗಳಿಂದಲೂ ಸಂಸತ್ತಿನ ಚಳಿಗಾಲದ ಉಭಯ ಸದನಗಳಲ್ಲೂ ಮಾರ್ದನಿಸಿ ಕಲಾಪಕ್ಕೆ ಅಡ್ಡಿಯಾಗಿದೆ.

ದೊಡ್ಡ ಹಗರಣವೊಂದರ ತನಿಖೆ ನಡೆಯದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೇ ತಮಗೆ ದೊರೆತ ದೊಡ್ಡ ಜಯ ಎಂದು ಮೋದಿ ಸರ್ಕಾರ ಭಾವಿಸಿದೆ ಎಂಬುದು ಕಾಂಗ್ರೆಸ್ ಪಕ್ಷದ ಟೀಕೆಯಾಗಿದೆ. ರಫೇಲ್ ಒಪ್ಪಂದದ ಬಗ್ಗೆ ನ್ಯಾಯಾಲಯದ ಮೇಲ್ಪಿಚಾರಣೆಯಲ್ಲಿ ತನಿಖೆ ನಡೆಯಬೇಕೆಂಬ ಪ್ರತಿಪಕ್ಷಗಳ ಮನವಿಯನ್ನು ಸುಪ್ರೀಂ ಕೋರ್ಟ್ ತಳ್ಳಿ ಹಾಕಿದೆ. ತಾನು ಈ ವಿವಾದದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಹೇಳುವ ಮೂಲಕ ತನ್ನ ಮಿತಿಯನ್ನು ಸರ್ವೋಚ್ಚ ನ್ಯಾಯಾಲಯ ಸ್ಪಷ್ಟಪಡಿಸಿದೆ. ಆದರೆ ತೀರ್ಪನ್ನೇ ಕಾಂಗ್ರೆಸ್ ಅಲ್ಲಗಳೆಯುತ್ತಿದೆ. ಮತ್ತು ರಾಹುಲ್ ಹೇಳಿದ್ದನ್ನೇ ಸತ್ಯ ಎಂದು ವಾದಿಸುತ್ತಿದೆ.
ರಪೇಲ್ ಒಪ್ಪಂದದ ಬೆಲೆ ನಿಗದಿ ವಿವರಗಳನ್ನು ಮಹಾಲೇಖಪಾಲರ (ಸಿಎಜಿ) ಜೊತೆ ಹಂಚಿಕೊಳ್ಳಲಾಗಿದೆ ಹಾಗೂ ಸಿಎಜಿ ವರದಿಯನ್ನು ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಪರಿಶೀಲಿಸಿದೆ. ಕೇವಲ ವರದಿಯ ಸಂಕ್ಷಿಪ್ತ ಭಾಗವನ್ನು ಮಾತ್ರವೇ ಸಂಸತ್ ಮತ್ತು ಸಾರ್ವಜನಿಕ ಜಾಲತಾಣಗಳಲ್ಲಿ ಪ್ರಕಟಿಸಲಾಗಿದೆ ಎಂದು ಸುಪ್ರೀಂಕೋರ್ಟ್ ತೀರ್ಪಿನಲ್ಲಿ ತಿಳಿಸಲಾಗಿದೆ. ಆದರೆ ಸಿಎಜಿ ವರದಿ ತನ್ನ ಕೈ ಸೇರಿಲ್ಲ ಎಂದು ಪಿಎಸಿ ಈಗಾಗಲೇ ಸ್ಪಷ್ಟಪಡಿಸಿದೆ. ಹೀಗಿರುವಾಗ ಸರ್ಕಾರ ಸುಪ್ರೀಂಕೋರ್ಟ್‍ನನ್ನೇ ತಪ್ಪು ದಾರಿಗೆ ಎಳೆದಿದೆ ಎಂಬುದು ಕಾಂಗ್ರೆಸ್ ಆರೋಪವಾಗಿದೆ.
ರಫೇಲ್ ವಿವಾದ ಘಟನಾವಳಿ ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಅವರು ಅಧಿಕಾರ ದಲ್ಲಿದ್ದಾಗ ಕೇಳಿಬಂದಿದ್ದ ಬಹುಕೋಟಿ ರೂ.ಗಳ ಶವಪೆಟ್ಟಿಗೆ ಹಗರಣವನ್ನು ಹೋಲುತ್ತದೆ.

ವಿಧಾನಸಭೆ ಚುನಾವಣೆ ಅಥವಾ ಲೋಕಸಭೆ ಚುನಾವಣೆಯಾಗಲಿ ಬಿಜೆಪಿ ಇಂಥ ದೊಡ್ಡ ಅಪವಾದ-ವಿವಾದಗಳಿಗೆ ಗುರಿಯಾಗುತ್ತಿರುವುದು ಹೊಸದೇನಲ್ಲ. ಅಟಲ್ ಬಿಹಾರಿ ವಾಜಪೇಯಿ ಅವರ ಕಾಲದಿಂದಲೂ ಮೋದಿ ಅಡಳಿತ ಅವಧಿವರೆಗೆ ಕೋರ್ಟ್‍ಗಳಲ್ಲಿದ್ದ ಪ್ರಕರಣಗಳನ್ನು ಅಸ್ತ್ರವನ್ನಾಗಿಟ್ಟುಕೊಂಡು ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳು ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದ ಹಲವು ನಿದರ್ಶನಗಳಿವೆ. ಅದೇ ರೀತಿ ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ಕೋರ್ಟ್ ತೀರ್ಪು ಬಿಜೆಪಿ ಪರವಾಗಿಯೇ ಹೊರಬಿದ್ದ ಕೆಲವು ಉದಾಹರಣೆಗಳಿವೆ.
1999ರಲ್ಲಿ ನಡೆದ ಭಾರತ-ಪಾಕ್ ನಡುವಣ ಕಾರ್ಗಿಲ್ ಯುದ್ದದಲ್ಲಿ ಹುತಾತ್ಮರಾದ ಯೋಧರ ಅಂತ್ಯಕ್ರಿಯೆಗಾಗಿ ಶವಪೆಟ್ಟಿಗೆಗಳÀ ಖರೀದಿ ಹಗರಣವೂ ಕೂಡ ರಫೇಲ್‍ನಂತೆಯೇ ಭಾರೀ ವಿವಾದದ ಅಲೆ ಎಬ್ಬಿಸಿತ್ತು. ಇದಕ್ಕೆ ಮುಂದಿಟ್ಟುಕೊಂಡು ಕಾಂಗ್ರೆಸ್ ಮತ್ತು ಎಡ ಪಕ್ಷಗಳು ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‍ಡಿಎ ಸರ್ಕಾರದ ವಿರುದ್ಧ ಮುಗಿಬಿದ್ದಿತ್ತು. ಹಗರಣ ಸಂಸತ್ತಿನ ಒಳಗೆ ಮತ್ತು ಹೊರಗೆ ಪ್ರತಿಧ್ವನಿಸಿ ಭಾರೀ ಗದ್ದಲ-ಕೋಲಾಹಲಕ್ಕೆ ಕಾರಣವಾಗಿತ್ತು. ದೇಶ ರಕ್ಷಣೆಗಾಗಿ ಪ್ರಾರ್ಣಾಪಣೆ ಮಾಡಿದ ಹುತಾತ್ಮ ಯೋದರ ಶವಪೆಟ್ಟಿಗೆಗಳ ಖರೀದಿಯಲ್ಲೂ (1.87 ಲಕ್ಷ ಡಾಲರ್ ಮೌಲ್ಯ. ಒಂದು ಶವಪೆಟ್ಟಿಗೆಗೆ 2,500 ಡಾಲರ್‍ಗಳಂತೆ 500 ಶವಪೆಟ್ಟಿಗೆಗಳನ್ನು ಅಮೆರಿಕದ ಕಂಪನಿಯೊಂದರಿಂದ ಖರೀದಿ) ಬಿಜೆಪಿ ಸರ್ಕಾರ ಕಮಿಷನ್ ಪಡೆದು ಭಾರೀ ಭ್ರಷ್ಟಾಚಾರ ನಡೆಸಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು.

2004ರ ಲೋಕಸಭಾ ಚುನಾವಣೆಯಲ್ಲಿ ಶವಪೆಟ್ಟಿಗೆ ವಿಚಾರವನ್ನೇ ಪ್ರಮುಖ ವಿಷಯವನ್ನಾಗಿ ಇಟ್ಟುಕೊಂಡು ಸ್ಪರ್ಧಾ ಕಣಕ್ಕೆ ಇಳಿದಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಮತ್ತು ವಾಮರಂಗಗಳು ಎನ್‍ಡಿಎ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುವುದನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದ್ದವು.
ಶವಪೆಟ್ಟಿಗೆ ಹಗರಣದ ನಂತರ ನಡೆದ ಎರಡು ಸಾರ್ವತ್ರಿಕ ಚುನಾವಣೆಗಳ ಬಳಿಕ ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಸುಪ್ರೀಂ ಕೋರ್ಟ್‍ನಿಂದ ಎನ್‍ಡಿಎ, ವಾಜಪೇಯಿ ಮತ್ತು ಕಾರ್ಗಿಲ್ ಯುದ್ದದ ವೇಳೆ ರಕ್ಷಣಾ ಸಚಿವರಾಗಿದ್ದ ಜಾರ್ಜ್ ಫರ್ನಾಂಡಿಸ್ ಅವರಿಗೆ ಕ್ಲೀನ್ ಚಿಟ್ ನೀಡಲಾಯಿತು.
ಈಗ ಸರ್ಕಾರಕ್ಕೆ ದೊಡ್ಡ ಕಂಟಕವಾಗಿದ್ದ ರಫೇಲ್ ಹಗರಣದಿಂದ ಪ್ರಧಾನಿ ಮೋದಿ ನಿರಾಳವಾಗಿದ್ದಾರೆ. 2019ರ ಚುನಾವಣೆಗೂ ಬಿಜೆಪಿ ಸಜ್ಜಾಗುತ್ತಿದೆ. ಈ ಪ್ರಕರಣದಿಂದ ಕ್ಲೀನ್‍ಚಿಟ್ ದೊರೆತಿರುವುದು ಮೋದಿಗೆ ಲೋಕಸಭಾ ಸಮರವನ್ನು ಎದುರಿಸಲು ಭಾರೀ ಹುಮ್ಮಸ್ಸು ಲಭಿಸಿದೆ.

Facebook Comments