ವಾಹನ ಸವಾರರಿಗೆ ಯಮ ಪಾಶವಾದ ರಾಗಿ ಒಕ್ಕಣೆ

ಈ ಸುದ್ದಿಯನ್ನು ಶೇರ್ ಮಾಡಿ

ಚನ್ನಪಟ್ಟಣ, ಜ.5- ರಸ್ತೆಯಲ್ಲಿ ರೈತರು ತಮಗಿಷ್ಟ ಬಂದಂತೆ ರಾಗಿ ಹುಲ್ಲು ಒಕ್ಕಣೆ ಕಾರ್ಯದಲ್ಲಿ ತಲ್ಲೀನರಾಗಿದ್ದು, ರಸ್ತೆಯಲ್ಲಿ ಸಂಚರಿಸುವ ವಾಹನ ಹಾಗೂ ಪ್ರಯಾಣಿಕರಿಗೆ ನರಕಯಾತನೆಯಾಗಿದೆ.  ಅಕ್ಕೂರು ಪೊಲೀಸ್ ಠಾಣೆ ವ್ಯಾಪ್ತಿಯ ಸಾತನೂರು ರಸ್ತೆಯ ರಾಮೇಗೌಡನದೊಡ್ಡಿ ಹಾಗೂ ಇತರೆ ಹಳ್ಳಿಗಳ ರಸ್ತೆಗಳಲ್ಲೇ ಒಕ್ಕಣೆ ಕಾರ್ಯ ಮಾಡಿದ್ದು , ದ್ವಿಚಕ್ರ ವಾಹನ ಸವಾರರಿಗೆ ಮೃತ್ಯು ಕೂಪವಾಗಿದೆ.

ರಸ್ತೆಯಲ್ಲಿ ಒಂದು ಅಡಿಯಷ್ಟು ರಾಗಿ ಹುಲ್ಲು ಹರಡಿಕೊಂಡಿದ್ದು ಯಾವುದೇ ರೀತಿಯಲ್ಲಿ ಭಯವಿಲ್ಲದೆ ರಾಗಿ ಒಕ್ಕಣೆ ಕಾರ್ಯದಲ್ಲಿ ತಲ್ಲೀನರಾಗಿರುವ ರೈತಾಪಿವರ್ಗವನ್ನು ಕಂಡರೂ ಕಾಣದ ರೀತಿಯಲ್ಲಿ ಈ ಭಾಗದ ಪೊಲೀಸರು ವರ್ತಿಸುತ್ತಿದ್ದಾರೆ. ರಾಗಿ ಹುಲ್ಲು ರಸ್ತೆಯಲ್ಲಿ ಹರಡಿರುವುದರಿಂದ ಭಾರಿ ವಾಹನಗಳಿಗೆ ಒಂದು ರೀತಿ ತೊಂದರೆಯಾದರೆ, ದ್ವಿಚಕ್ರವಾಹನಗಳಿಗಂತೂ ಊಹಿಸಲಾಗದ ತೊಂದರೆ ಉಂಟಾಗಿದೆ.

ಅಲ್ಲದೆ ರಸ್ತೆ ಬದಿಯಲ್ಲೇ ಮೋಟರ್ ಫ್ಯಾನ್‍ಗಳನ್ನು ಅಳವಡಿಸಿಕೊಂಡು ರಾಗಿ ತೂರುತ್ತಿರುವುದರಿಂದ ರಾಗಿ ಧೂಳು ಪ್ರಯಾಣಿಕರ ಕಣ್ಣಿಗೆ ಬಡಿದು ಈಗಾಗಲೇ ಹಲವಾರು ಅಪಘಾತಗಳು ಸಂಭವಿಸಿವೆ. ರಸ್ತೆಯಲ್ಲಿ ಒಂದು ಅಡಿಯಷ್ಟು ರಾಗಿ ಹುಲ್ಲು ಹಾಕುವುದರಿಂದ ವಾಹನಗಳ ಕೆಳಗೆ ಹುಲ್ಲು ಸಿಕ್ಕಿಕೊಂಡು ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿರುವ ನಿದರ್ಶನಗಳಿವೆ. ಅಲ್ಲದೆ ವಾಹನಗಳ ಕೆಳಗೆ ಹುಲ್ಲು ಮೆತ್ತಿಕೊಂಡು ಬೆಂಕಿ ಕೂಡ ಹೊತ್ತಿಕೊಳ್ಳುವ ಸಂಭವವಿದೆ ಎಂದು ಪ್ರಯಾಣಿಕರು ಆರೋಪ ಮಾಡಿದ್ದಾರೆ.

ಪೊಲೀಸರು ರೈತರೆಂಬ ಮೃದು ಧೋರಣೆಯಿಂದ ಬಾಯಿ ಮಾತಿನಲ್ಲಿ ಎಚ್ಚರಿಕೆ ನೀಡುತ್ತಿರುವುದರಿಂದ, ಪೊಲೀಸರ ಮಾತಿಗೆ ಕವಡೆಕಾಸಿನ ಬೆಲೆ ಕೊಡದ ಕೆಲ ರೈತರು, ರಾಗಿಯನ್ನು ರಸ್ತೆಯಲ್ಲೇ ಒಕ್ಕಣೆ ಮಾಡುತ್ತಿದ್ದಾರೆ. ಖಡಕ್ ಪೊಲೀಸ್ ಅಧಿಕಾರಿ ಎಂದೇ ಬಿಂಬಿತವಾಗಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪ್‍ಎಶಟ್ಟಿರವರು ಇತ್ತ ಕಡೆ ಗಮನ ಹರಿಸಿ, ರಸ್ತೆಯಲ್ಲಿ ರಾಗಿ ಒಕ್ಕಣೆ ಕಾರ್ಯವನ್ನು ನಿರ್ಬಂಧ ಮಾಡಬೇಕೆಂದು ರಸ್ತೆ ಪ್ರಯಾಣಿಕರು ಒತ್ತಾಯ ಮಾಡಿದ್ದಾರೆ.

Facebook Comments