‘ಮಾದಕ’ ನಟಿ ರಾಗಿಣಿಗೆ ಕೊನೆಗೂ ಸಿಕ್ತು ಜಾಮೀನು..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜ.21-ಮಾದಕ ವಸ್ತು ಸೇವನೆ ಮತ್ತು ಮಾರಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಸಿಬಿ ಪೊಲೀಸರಿಂದ ಬಂಧಿತರಾಗಿದ್ದ ಸ್ಯಾಂಡಲ್‍ವುಡ್‍ನ ನಟಿ ರಾಗಿಣಿ ದ್ವಿವೇದಿ ಅವರಿಗೆ ಸುಪ್ರೀಂಕೋರ್ಟ್ ಜಾಮೀನು ನೀಡಿದೆ. ಈ ಮೂಲಕ ಕಳೆದ ಸೆಪ್ಟೆಂಬರ್ 4ರಿಂದ ಜೈಲಿನಲ್ಲಿದ್ದ ರಾಗಿಣಿ ಅವರಿಗೆ ಕೊನೆಗೂ ಬಿಡುಗಡೆಯ ಭಾಗ್ಯ ಸಿಕ್ಕಿದೆ.  ಸ್ಯಾಂಡಲ್‍ವುಡ್‍ನ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಹಲವಾರು ಮಂದಿಯನ್ನು ಬಂಧಿಸಿದ್ದಾರೆ. ಅವರಲ್ಲಿ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾಣಿ ಸಿನಿಮಾ ನಟಿಯರಾಗಿದ್ದರು.

ಸಂಜನಾ ಗಲ್ರಾಣಿ ಅವರಿಗೆ ಆರೋಗ್ಯದ ಕಾರಣಕ್ಕಾಗಿ ಇತ್ತೀಚೆಗೆ ಜಾಮೀನು ಸಿಕ್ಕಿತ್ತು. ಆದರೆ, ರಾಗಿಣಿ ದ್ವಿವೇದಿ ಅವರಿಗೆ ಹೈಕೋರ್ಟ್ ನವೆಂಬರ್ 3ರಂದು ಜಾಮೀನು ನಿರಾಕರಿಸಿತ್ತು.
ಜಾಮೀನಿಗಾಗಿ ರಾಗಿಣಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ರಾಗಿಣಿ ಪರ ವಲೀಕರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‍ನ ರೋಹಿನ್‍ಟನ್‍ನಾರಿಮನ್ ಅವರ ನೇತೃತ್ವದ ವಿಭಾಗೀಯ ಪೀಠ ರಾಗಿಣಿ ಅವರ ಮೇಲೆ ಎನ್‍ಡಿಪಿಎಸ್ ಕಾಯ್ದೆ ಸೆಕ್ಷನ್ 37ರ ಅಡಿ ಆರೋಪ ದಾಖಲಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ.

ಎನ್‍ಡಿಪಿಎಸ್ ಕಾಯ್ದೆ ಪ್ರಕಾರ ಸೆಕ್ಷನ್ 37 ಅತ್ಯಂತ ಗಂಭೀರ ಸ್ವರೂಪವಾಗಿದ್ದು, ಉದ್ದೇಶ ಪೂರ್ವಕವಾಗಿ ಅಪರಾಧ ಮಾಡಿರುವವರ ಮೇಲೆ ಹೇರುವುದಾಗಿದೆ ಮತ್ತು ಈ ಸೆಕ್ಷನ್ ಜಾಮೀನು ರಹಿತವಾಗಿದೆ. ಆದರೆ, ರಾಗಿಣಿ ದ್ವಿವೇದಿ ಪ್ರಕರಣದಲ್ಲಿ ಅದನ್ನು ಅನಗತ್ಯವಾಗಿ ಬಳಕೆ ಮಾಡಲಾಗಿದೆ ಎಂದು ರಾಗಿಣಿ ಪರ ವಕೀಲರು ವಾದಿಸಿದ್ದರು.

ಪೊಲೀಸರು ನಟಿ ರಾಗಿಣಿ ಮಾದಕ ವಸ್ತುಗಳನ್ನು ಸೇವಿಸುತ್ತಿದ್ದರು ಮತ್ತು ಆಯೋಜನೆಗೊಳ್ಳುತ್ತಿದ್ದ ಪಾರ್ಟಿಗಳಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು ಎಂದು ಆರೋಪಿಸಿದ್ದಾರೆ. ಆದರೆ, ರಾಗಿಣಿ ಮನೆಯಲ್ಲಿ ಶೋಧ ನಡೆಸಿದಾಗ ಯಾವುದೇ ರೀತಿಯ ಮಾದಕ ವಸ್ತು ಪತ್ತೆಯಾಗಿಲ್ಲ ಎಂದು ವಕೀಲರು ವಾದಿಸಿದ್ದರು.

ವಕೀಲರ ವಾದವನ್ನು ಪುರಸ್ಕರಿಸಿರುವ ನ್ಯಾಯಾಲಯ ಸೆಕ್ಷನ್ 37ರ ಅಡಿ ಕೇಸು ದಾಖಲಿಸಿವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದು, ಜಾಮೀನು ಮಂಜೂರು ಮಾಡಿದೆ.
ಈ ಮೂಲಕ ನಾಲ್ಕು ತಿಂಗಳಿನಿಂದ ಪಂಜರದ ಹಕ್ಕಿಯಾಗಿದ್ದ ತುಪ್ಪದ ಹುಡುಗಿಗೆ ಕೊನೆಗೂ ಬಿಡುಗಡೆ ಭಾಗ್ಯ ಕಾಣುವಂತಾಗಿದೆ.

ತಮ್ಮ ಮಗಳಿಗೆ ಜಾಮೀನು ಸಿಕ್ಕಿರುವುದಕ್ಕೆ ರಾಗಿಣಿ ಅವರ ತಾಯಿ ರೋಹಿಣಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ನ್ಯಾಯಾಲಯದ ಆದೇಶದ ಪ್ರತಿ ಕೈ ಸೇರಿದ ಬಳಿಕ ಮುಂದಿನ ಕಾನೂನು ಪ್ರಕ್ರಿಯೆಗಳನ್ನು ಮುಂದುವರೆಸುವುದಾಗಿ ತಿಳಿಸಿದ್ದಾರೆ.

Facebook Comments