‘ಬಿಗ್ ಬಾಸ್’ ಮನೆಗೆ ಹೋಗುವ ಕುರಿತು ರಾಗಿಣಿ ಹೇಳಿದ್ದೇನು ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.26- ಪ್ರತಿಯೊಬ್ಬ ತಂದೆ-ತಾಯಿಗೂ ತಮ್ಮ ಮಕ್ಕಳು ಏನೆಂಬುದು ಗೊತ್ತಿರುತ್ತದೆ. ಹಾಗಾಗಿ ಸಂಕಷ್ಟದ ಸಮಯದಲ್ಲಿ ಪೋಷಕರು ನನ್ನ ಬೆಂಬಲಕ್ಕೆ ನಿಂತಿದ್ದರು. ಶೀಘ್ರವಾಗಿ ನಾನು ಮಾದಕ ವ್ಯಸನದ ಪ್ರಕರಣದಿಂದ ಹೊರ ಬರುತ್ತೇನೆಂದು ನಟಿ ರಾಗಿಣಿ ದ್ವಿವೇದಿ ಹೇಳಿದ್ದಾರೆ.ಮಾದಕ ವ್ಯಸನದ ಪ್ರಕರಣದಲ್ಲಿ ಬಂಧಿತರಾಗಿ 103 ದಿನ ಸೆರೆವಾಸ ಅನುಭವಿಸಿದ ರಾಗಿಣಿ ದ್ವಿವೇದಿ ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.

ಪ್ರಕರಣದ ಬಳಿಕ ಅವರು ಕುಗ್ಗಿಹೋಗಿದ್ದಾರೆ ಎಂಬ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿ ಮತ್ತೆ ಸಕ್ರಿಯವಾಗಿ ಸಾಮಾಜಿಕ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ವಿಕಲಚೇತನರಿಗಾಗಿ ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕ ರಾಜ್ಯ ವಿಶೇಷ ಚೇತನರ ಕ್ರಿಕೆಟ್ ಸಂಸ್ಥೆ ಆಯೋಜಿಸಿರುವ ಟಿ10 ಪಂದ್ಯಾವಳಿಗೆ ರಾಯಭಾರಿಯಾಗಿ ಬೆಂಬಲ ನೀಡಲು ಪ್ರೆಸ್‍ಕ್ಲಬ್‍ಗೆ ಆಗಮಿಸಿದ್ದ ರಾಗಿಣಿ ಸುದ್ದಿಗಾರರ ಜೊತೆ ಮಾತನಾಡಿದರು.

ನನ್ನ ವಿರುದ್ಧ ಸಿಸಿಬಿಯಲ್ಲಿ ದಾಖಲಾಗಿರುವ ಪ್ರಕರಣವನ್ನು ನಾನು ಸಾಕಾರಾತ್ಮಕವಾಗಿ ತೆಗೆದುಕೊಂಡಿದ್ದೇನೆ. ನಾನು ಏನು ಎಂಬುದು ನನ್ನ ತಂದೆ-ತಾಯಿಗೆ ಗೊತ್ತು. ಅದಕ್ಕಾಗಿ ಅವರು ಕಷ್ಟದ ದಿನಗಳಲ್ಲೂ ನನ್ನ ಜತೆ ನಿಂತರು. ಮುಂದಿನ ದಿನಗಳಲ್ಲಿ ನಾನು ಈ ಪ್ರಕರಣದಿಂದ ಹೊರ ಬರುತ್ತೇನೆ ಎಂದು ಹೇಳಿದರು.

ಬಿಗ್ ಬಾಸ್ ಸೀಸನ್ 8ರಲ್ಲಿ ನಾನು ಭಾಗವಹಿಸುತ್ತಿಲ್ಲ. ಈ ಕುರಿತಂತೆ ಹರಿದಾಡುತ್ತಿರುವ ಸುದ್ದಿಗಳು ಕೇವಲ ವದಂತಿಗಳು ಮಾತ್ರ ಎಂದರು. ಭಾರತದಲ್ಲಿ ಕ್ರಿಕೆಟ್‍ಗೆ ಹೆಚ್ಚು ಅಭಿಮಾನಿಗಳಿದ್ದಾರೆ. ಹೀಗಾಗಿ ತಾವು ವಿಕಲಚೇತನರ ಕ್ರಿಕೆಟ್ ಪಂದ್ಯಾವಳಿಗೆ ಬೆಂಬಲ ನೀಡುತ್ತಿರುವುದಾಗಿ ಹೇಳಿದರು.

ಟಿ10 ಲೀಗ್ ಪಂದ್ಯಾವಳಿ ನೊಯಿಡಾದಲ್ಲಿ ಮಾರ್ಚ್ 11ರಿಂದ 18ರವರೆಗೆ ನಡೆಯಲಿದೆ. ಪ್ರತಿ ದಿನ ಮೂರರಿಂದ ನಾಲ್ಕು ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ. ವಿವಿಧ ರಾಜ್ಯಗಳ ಸುಮಾರು 28 ತಂಡಗಳು ಇದರಲ್ಲಿ ಭಾಗವಹಿಸುತ್ತಿದ್ದು , ಎರಡು ಮಹಿಳಾ ವಿಕಲಚೇತನರ ತಂಡಗಳು ಕೂಡ ಭಾಗವಹಿಸಲಿವೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ವಿಶೇಷ ಚೇತನರ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಜಿ.ಶ್ರೀಧರ್, ಕ್ರೀಡಾಪಟು ಸಿ.ಕೆ.ಗಿರೀಶ್, ಮಹೇಶ್‍ಗೌಡ, ಮನೋಜ್, ಜೀವನ್ ಮತ್ತಿತರರಿದ್ದರು.

Facebook Comments

Sri Raghav

Admin