ಯುವ ಆಟಗಾರರು ತಲೆನೋವಾಗಿದ್ದಾರೆ : ದ್ರಾವಿಡ್

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಡಿ.6- ಭಾರತ ತಂಡದಲ್ಲಿ ಯುವ ಆಟಗಾರರು ಕೂಡ ಉತ್ತಮ ಪ್ರದರ್ಶನ ತೋರುತ್ತಿರುವುದರಿಂದ ಆಯ್ಕೆ ಮಾಡುವುದು ದೊಡ್ಡ ತಲೆನೋವಾಗಿದೆ ಎಂದು ಟೀಂ ಇಂಡಿಯಾದ ಕೋಚ್ ರಾಹುಲ್‍ದ್ರಾವಿಡ್ ಅವರು ಹೇಳಿದ್ದಾರೆ.  ನ್ಯೂಜಿಲ್ಯಾಂಡ್ ವಿರುದ್ಧ ಮುಂಬೈನಲ್ಲಿ ನಡೆದ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಎರಡನೇ ಟೆಸ್ಟ್‍ನಲ್ಲಿ 372 ರನ್‍ಗಳ ಅಂತರದಿಂದ ಗೆಲುವು ಸಾಸಿ 1-0 ಯಿಂದ ಸರಣಿ ವಶಪಡಿಸಿಕೊಂಡ ನಂತರ ದ್ರಾವಿಡ್ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಯಲ್ಲಿ ಕೆಲವು ಹಿರಿಯ ಆಟಗಾರರ ಅನುಪಸ್ಥಿತಿಯಲ್ಲೂ ಸರಣಿಯನ್ನು ಗೆದ್ದಿದ್ದೇವೆ ಇದು ಭಾರತವು ತಾಯ್ನಾಡಿನಲ್ಲಿ ಸಾಸಿರುವ 14ನೆ ಗೆಲುವಾಗಿದೆ. ಈ ಟೆಸ್ಟ್‍ನಲ್ಲಿ ಪಾದಾರ್ಪಣೆ ಮಾಡಿದ ಶ್ರೇಯಸ್ ಅಯ್ಯರ್ ಅವರು ಮೊದಲ ಟೆಸ್ಟ್‍ನ ಪ್ರಥಮ ಇನ್ನಿಂಗ್ಸ್‍ನಲ್ಲಿ ಶತಕ ಹಾಗೂ ಎರಡನೇ ಇನ್ನಿಂಗ್ಸ್‍ನಲ್ಲಿ ಅರ್ಧಶತಕ ಗಳಿಸಿದ್ದಾರೆ, ಇನ್ನು ಫಾರ್ಮ್ ಕಳೆದುಕೊಂಡಿದ್ದ ಮಯಾಂಕ್ ಅಗರ್‍ವಾಲ್ ಕೂಡ ಎರಡನೆ ಟೆಸ್ಟ್‍ನ ಮೊದಲ ಇನ್ನಿಂಗ್ಸ್‍ನಲ್ಲಿ 150 ರನ್ ಹಾಗೂ ದ್ವಿತೀಯ ಇನ್ನಿಂಗ್ಸ್‍ನಲ್ಲಿ 62 ರನ್ ಗಳಿಸಿದ್ದಾರೆ, ಶುಭಮನ್ ಗಿಲ್ ಕೂಡ ತಮಗೆ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ ಎಂದು ದ್ರಾವಿಡ್ ಹೇಳಿದರು.

ಹಿರಿಯ ಆಟಗಾರರ ಅನುಪಸ್ಥಿತಿಯನ್ನು ತಂಡವನ್ನು ಗೆಲುವಿನತ್ತ ಕೊಂಡೊಯ್ಯುವ ಚಾಕಚಕ್ಯತೆಯನ್ನು ಯುವ ಆಟಗಾರರು ಹೊಂದಿರುವುದನ್ನು ನೋಡಿದರೆ ಸಂತಸವಾಗುತ್ತದೆ, 2ನೆ ಟೆಸ್ಟ್‍ನಲ್ಲಿ ಸ್ಥಾನ ಪಡೆದ ಜಯಂತ್ ಯಾದವ್ ನಿನ್ನೆ ಬೌಲಿಂಗ್ ಮಾಡಲು ಪರದಾಟ ನಡೆಸಿದ್ದರೂ ಇಂದು ನ್ಯೂಜಿಲ್ಯಾಂಡ್‍ಗಳ ಬ್ಯಾಟ್ಸ್‍ಮನ್‍ಗಳಿಗೆ ಲಗಾಮು ಹಾಕುವಲ್ಲಿ ಯಶಸ್ವಿಯಾದರು.

ಅಕ್ಷರ್‍ಪಟೇಲ್ ಬೌಲಿಂಗ್ ಮಾತ್ರವಲ್ಲದೆ ಬ್ಯಾಟಿಂಗ್‍ನಲ್ಲೂ ಮಿಂಚುತ್ತಿರುವುದು ತಂಡಕ್ಕೆ ಉತ್ತಮ ಬೆಳವಣಿಗೆಯಾಗಿದೆ, ಈ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ಶ್ರೇಯಸ್ ಅಯ್ಯರ್, ಮಯಾಂಕ್ ಅಗರ್‍ವಾಲ್, ಮೊಹಮ್ಮದ್ ಸಿರಾಜ್ ಅವರು ಮತ್ತಷ್ಟು ಅವಕಾಶಗಳು ಸಿಗುವಂತೆ ಮಾಡಿದೆ ಎಂದು ಅವರು ಹೇಳಿದರು.

ಆಟಗಾರರನ್ನು ದೈಹಿಕ ಹಾಗೂ ಮಾನಸಿಕವಾಗಿ ಸದೃಢವಾಗಿಡುವುದು ತುಂಬಾ ದೊಡ್ಡ ಸವಾಲಾಗಿದ್ದು, ಈ ನಡುವೆ ಯುವ ಆಟಗಾರರು ಕೂಡ ಉತ್ತಮ ಪ್ರದರ್ಶನ ತೋರುತ್ತಿರುವುದರಿಂದ ಇನ್ನು ಮುಂದೆ ತಂಡದ ಆಯ್ಕೆಯೂ ಕೂಡ ದೊಡ್ಡ ಸವಾಲೆನಿಸಿದೆ ಎಂದು ದ್ರಾವಿಡ್ ಹೇಳಿದರು.

Facebook Comments