‘ನಿಮ್ಮ ಆಹ್ವಾನವನ್ನು ಸ್ವೀಕರಿಸಿದ್ದೇನೆ, ಯಾವಾಗ ಬರಲಿ..? ಜಮ್ಮ-ಕಾಶ್ಮೀರದ ರಾಜ್ಯಪಾಲರಿಗೆ ರಾಹುಲ್‍ಗಾಂಧಿ ಟ್ವಿಟ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಆ.14- ನಾನು ಜಮ್ಮು-ಕಾಶ್ಮೀರಕ್ಕೆ ಯಾವಾಗ ಬರಲಿ ಎಂದು ಪ್ರಶ್ನಿಸುವ ಮೂಲಕ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‍ಗಾಂಧಿ ಜಮ್ಮು-ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.

ಇಂದು ಮತ್ತೊಮ್ಮೆ ಟ್ವಿಟ್ ಮಾಡಿರುವ ರಾಹುಲ್‍ಗಾಂಧಿ, ನಾನು ನಿಮ್ಮ ದುರ್ಬಲ ಪ್ರತ್ಯುತ್ತರವನ್ನು ನೋಡಿದ್ದೇನೆ. ನಿಮ್ಮ ಆಹ್ವಾನವನ್ನು ಸ್ವೀಕರಿಸಿದ್ದೇನೆ. ಯಾವುದೇ ಷರತ್ತುಗಳು ಇಲ್ಲದೆ ಜಮ್ಮು-ಕಾಶ್ಮೀರಕ್ಕೆ ಬರಲು ಸಿದ್ದನಿದ್ದೇನೆ. ಯಾವಾಗ ಬರಬೇಕೆಂದು ಪ್ರಶ್ನಿಸಿದ್ದಾರೆ.

ಜಮ್ಮು-ಕಾಶ್ಮೀರದ ರಾಜ್ಯಪಾಲರಾದ ಸತ್ಯಪಾಲ್ ಮಲ್ಲಿಕ್ ಅವರು ಇತ್ತೀಚೆಗೆ ಖಾಸಗಿ ಮಾಧ್ಯಮದವರ ಸಂದರ್ಶನವೊಂದರಲ್ಲಿ ರಾಹುಲ್‍ಗಾಂಧಿ ಕುರಿತು ಹೇಳಿಕೆ ನೀಡಿದ್ದು, ನಾನು ಅವರಿಗಾಗಿ ವಿಮಾನ ಕಳುಹಿಸುತ್ತೇನೆ. ವಿರೋಧ ಪಕ್ಷದ ನಾಯಕರು ಅದರಲ್ಲಿ ಬರಲಿ. ಇಲ್ಲಿನ ವಾಸ್ತವ ಸ್ಥಿತಿಗತಿಗಳನ್ನು ಅಧ್ಯಯನ ಮಾಡಲಿ ಎಂದು ಸವಾಲು ಎಸೆದಿದ್ದರು.

ಅದಕ್ಕೆ ನಿನ್ನೆ ಟ್ವಿಟ್ ಮಾಡಿದ್ದ ರಾಹುಲ್‍ಗಾಂಧಿ ಅವರು, ಪ್ರೀತಿಯ ಗೌರ್ನರ್ ಮಲ್ಲಿಕ್ ಅವರೇ, ನಿಮ್ಮ ಆಹ್ವಾನವನ್ನು ಸ್ವೀಕರಿಸಿ ಪ್ರತಿಪಕ್ಷದ ನಾಯಕರ ನಿಯೋಗ ಜಮ್ಮು-ಕಾಶ್ಮೀರ ಮತ್ತು ಲಡಾಖ್‍ಗೆ ಭೇಟಿ ನೀಡಲು ಸಿದ್ದವಿದೆ.

ನಮಗೆ ನಿಮ್ಮ ವಿಮಾನ ಬೇಡ. ಆದರೆ, ಜಮ್ಮು-ಕಾಶ್ಮೀರದಲ್ಲಿ ಸಂಚರಿಸಲು ಮುಕ್ತ ಸ್ವಾತಂತ್ರ್ಯ ಬೇಕು. ಮುಖ್ಯವಾಹಿನಿಯ ನಾಯಕರು ಮತ್ತು ಗೃಹ ಬಂಧನದಲ್ಲಿರುವ ಮುಖಂಡರನ್ನು ಭೇಟಿ ಮಾಡಲು ಹಾಗೂ ನಮ್ಮ ಸೈನಿಕರನ್ನು ಮಾತನಾಡಿಸಲು ಅವಕಾಶ ನೀಡಬೇಕೆಂದು ಷರತ್ತು ವಿಧಿಸಿದ್ದರು.

ಇದಕ್ಕೆ ಪ್ರತ್ಯುತ್ತರಿಸಿದ ಗೌರ್ನರ್ ಮಲ್ಲಿಕ್ ಅವರು, ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಲು ರಾಹುಲ್‍ಗಾಂಧಿ ಷರತ್ತು ವಿಧಿಸುತ್ತಿದ್ದಾರೆ ಎಂದು ಹೇಳಿಕೆ ನೀಡಿ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದರು. ಅದಕ್ಕಾಗಿ ಇಂದು ಮತ್ತೊಮ್ಮೆ ಟ್ವಿಟರ್ ಮೂಲಕ ತಮ್ಮ ಹೇಳಿಕೆ ನೀಡಿರುವ ರಾಹುಲ್‍ಗಾಂಧಿ, ಯಾವುದೇ ಷರತ್ತುಗಳಿಲ್ಲದೆ ನಾನು ಬರಲು ಸಿದ್ಧನಿದ್ದೇನೆ. ಯಾವಾಗ ಬರಬೇಕೆಂದು ಪ್ರಶ್ನಿಸಿದ್ದಾರೆ.

Facebook Comments