ಮಾನಹಾನಿ ಪ್ರಕರಣ : ನಾನು ತಪ್ಪಿತಸ್ಥನಲ್ಲ ಎಂದ ರಾಹುಲ್

ಈ ಸುದ್ದಿಯನ್ನು ಶೇರ್ ಮಾಡಿ

ಸೂರತ್,ಅ.9- ದೊಡ್ಡ ಕಳ್ಳರು ತಮ್ಮ ಹೆಸರಿನ ಕೊನೆಯಲ್ಲಿ ಮೋದಿ ಹೆಸರನ್ನು ಇಟ್ಟುಕೊಳ್ಳುತ್ತಾರೆ ಎಂಬ ಹೇಳಿಕೆ ವಿರುದ್ಧ ಬಿಜೆಪಿ ಹೂಡಿರುವ ಮಾನಹಾನಿ ಪ್ರಕರಣ ಕುರಿತು ವಿಚಾರಣೆಗೆ ಸೂರತ್‍ನ ನ್ಯಾಯಾಲಯವೊಂದರ ಮುಂದೆ ಇಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹಾಜರಾದರು.  ನಾನು ತಪ್ಪಿತಸ್ಥನಲ್ಲ ಎಂದು ಎಐಸಿಸಿ ಮಾಜಿ ಅಧ್ಯಕ್ಷರು ಹಾಗೂ ವಯನಾಡು ಸಂಸದ ರಾಹುಲ್‍ಗಾಂಧಿಯವರು ಮುಖ್ಯ ದಂಡಾಧಿಕಾರಿ ಬಿ.ಎಚ್.ಕಪಾಡಿಯ ಅವರ ನ್ಯಾಯಾಲಯದ ಮುಂದೆ ಸ್ಪಷ್ಟಪಡಿಸಿದರು.

ಈ ಕುರಿತ ವಾದ ಪ್ರತಿವಾದಗಳನ್ನು ಆಲಿಸಿದ ಕೋರ್ಟ್ ಪ್ರಕರಣದ ಮುಂದಿನ ವಿಚಾರಣೆಯನ್ನು ಡಿಸೆಂಬರ್ 10ಕ್ಕೆ ಮುಂದೂಡಿದೆ.  ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಎಲ್ಲ ಕಳ್ಳರು ಮೋದಿ ಸರ್‍ನೇಮ್‍ನ್ನು ಏಕೆ ಬಳಸಿಕೊಂಡಿದ್ದಾರೆ ಎಂದು ದೇಶ ಭ್ರಷ್ಟ ಆರ್ಥಿಕ ಅಪರಾಧಿ ಮತ್ತು ಕಳಂಕಿತ ವಜ್ರೋದ್ಯಮಿ ನೀರವ್ ಮೋದಿ ಹೆಸರನ್ನು ಉಲ್ಲೇಖಿಸಿ ರಾಹುಲ್ ಗಾಂಧಿ ಪ್ರಶ್ನಿಸಿದ್ದರು.

ಈ ಹೇಳಿಕೆಯನ್ನು ವಿರೋಧಿಸಿ ಸೂರತ್ ವೆಸ್ಟ್ ಶಾಸಕ ಪೂರ್ಣೇಶ್ ಮೋದಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಈ ಸಂಬಂಧ ಚೀಫ್ ಮ್ಯಾಜಿಸ್ಟ್ರೇಟ್ ಬಿ.ಎಚ್.ಕಪಾಡಿಯಾ ಮೇ ತಿಂಗಳಲ್ಲಿ ರಾಹುಲ್‍ಗೆ ಸಮನ್ಸ್ ಜಾರಿಗೊಳಿಸಿದ್ದರು. ಇಂದು ವಿಚಾರಣೆ ನಡೆಸಿದ ನ್ಯಾಯಾಲಯ ರಾಹುಲ್ ಮತ್ತು ಪೂರ್ಣೇಶ್ ವಕೀಲರ ವಾದ ಮತ್ತು ಪ್ರತಿವಾದಗಳನ್ನು ಆಲಿಸಿತು.

ಮುಂದಿನ ವಿಚಾರಣೆ ಸಂದರ್ಭದಲ್ಲಿ ರಾಹುಲ್ ಅವರ ಖುದ್ದು ಹಾಜರಿಯಿಂದ ವಿನಾಯ್ತಿ ನೀಡಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಿದರು. ಆದರೆ ಇದಕ್ಕೆ ಪೂರ್ಣೇಶ್ ಪರ ವಕಾಲತು ವಹಿಸಿದ್ದ ನ್ಯಾಯವಾದಿ ಆಕ್ಷೇಪಿಸಿದರು.  ವಿಚಾರಣೆ ಮುಂದುವರೆಸಿದ ನ್ಯಾಯಾಲಯ ಡಿ.10ಕ್ಕೆ ಈ ಪ್ರಕರಣದ ವಿಚಾರಣೆಯನ್ನು ಮುಂದೂಡಿ ಅಂದು ರಾಹುಲ್ ಖುದ್ದು ಹಾಜರಾತಿಯಿಂದ ವಿನಾಯ್ತಿ ನೀಡಿತು.


ರಾಜಕೀಯ ಸೇಡು ಆರೋಪ: ನ್ಯಾಯಾಲಯ ವಿಚಾರಣೆ ನಂತರ ಟ್ವೀಟ್ ಮಾಡಿರುವ ರಾಹುಲ್, ಇದು ರಾಜಕೀಯ ಸೇಡಿನ ಕ್ರಮ. ನನ್ನನ್ನು ಮೌನವಾಗಿಸಲು ಬಿಜೆಪಿ ಹೂಡಿರುವ ತಂತ್ರಗಳಲ್ಲಿ ಇದು ಒಂದು ಎಂದು ತಿಳಿಸಿದರು.

ನ್ಯಾಯಾಲಯದಲ್ಲಿ ಈ ಪ್ರಕರಣದಲ್ಲಿ ನೀವು ತಪ್ಪಿತಸ್ಥರು ಎಂದು ಒಪ್ಪಿಕೊಳ್ಳುವಿರಾ ಎಂದು ನನ್ನನ್ನು ಕೇಳಲಾಯಿತು. ನಾನು ತಪ್ಪಿತಸ್ಥನಲ್ಲ ಮತ್ತು ಯಾವುದೇ ತಪ್ಪು ಎಸಗಿಲ್ಲ ಎಂದು ಸ್ಪಷ್ಟಪಡಿಸಿದ್ದೇನೆ ಎಂದು ಟ್ವಿಟರ್‍ನಲ್ಲಿ ರಾಹುಲ್ ವಿವರಿಸಿದ್ದಾರೆ.

ಸೂರತ್‍ಗೆ ಆಗಮಿಸಿದ ತಮಗೆ ಕಾಂಗ್ರೆಸ್ ಮುಖಂಡರು ಕೋರಿದ ಅದ್ಧೂರಿ ಸ್ವಾಗತ ಮತ್ತು ನ್ಯಾಯಾಲಯದ ಹೊರಗೆ ಅಸಂಖ್ಯಾತ ಕಾರ್ಯಕರ್ತರು ಜಮಾಯಿಸಿ ನನಗೆ ನೈತಿಕ ಬೆಂಬಲ ವ್ಯಕ್ತಪಡಿಸಿದ್ದಕ್ಕಾಗಿ ನಾನು ಎಲ್ಲಿರಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.

Facebook Comments