ಮೋದಿ ಕ್ಷಮೆ ಕೇಳಬೇಕು ನಾನಲ್ಲ : ರಾಹುಲ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಡಿ.13-ರಾಹುಲ್‍ಗಾಂಧಿ ಕ್ಷಮೆ ಕೇಳಬೇಕು ಎಂದು ಸಂಸತ್‍ನಲ್ಲಿ ನಡೆದ ಭಾರೀ ಪ್ರತಿಭಟನೆ ಬಗ್ಗೆ ಟ್ವೀಟರ್‍ನಲ್ಲಿ ಪ್ರತಿಕ್ರಿಯಿಸಿರುವ ರಾಹುಲ್‍ಗಾಂಧಿ, ಈ ಹಿಂದೆ ನರೇಂದ್ರ ಮೋದಿಯವರು ದೆಹಲಿಯನ್ನು ಅತ್ಯಾಚಾರದ ರಾಜಧಾನಿ ಎಂದು ಟೀಕಿಸಿದ್ದ ವಿಡಿಯೋವನ್ನು ಹರಿಯಬಿಟ್ಟಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕ್ಷಮೆ ಕೇಳಬೇಕು. ಏಕೆಂದರೆ ಈಶಾನ್ಯ ರಾಜ್ಯಗಳಲ್ಲಿ ಹೊತ್ತಿಉರಿಯುವಂತೆ ಮಾಡಿದ್ದಕ್ಕಾಗಿ, ಭಾರತದ ಆರ್ಥಿಕತೆಯನ್ನು ನಾಶ ಮಾಡಿದ್ದಕ್ಕಾಗಿ ಅವರು ಕ್ಷಮೆ ಕೇಳಬೇಕು ಎಂದಿದ್ದಾರೆ. ನಾನು ಲಗತ್ತಿಸಿರುವ ಈ ವಿಡಿಯೋ ತುಣುಕನ್ನು ದಯವಿಟ್ಟು ನೋಡಿ. ಮೋದಿಯವರ ಭಾಷಣ ಕೇಳಿ ಎಂದು ರಾಹುಲ್ ಕಟುಕಿದ್ದಾರೆ.

ಆ ವಿಡಿಯೋ ತುಣುಕಿನಲ್ಲಿ ನರೇಂದ್ರ ಮೋದಿಯವರು ಈ ಹಿಂದೆ ನಿರ್ಭಯಾ ಪ್ರಕರಣವನ್ನು ಪ್ರಸ್ತಾಪಿಸಿ ಭಾಷಣ ಮಾಡುವಾಗ ದೆಹಲಿಯನ್ನು ರೇಪ್ ಕ್ಯಾಪಿಟಲ್ ಮಾಡಲಾಗಿದೆ. ಇದರಿಂದಾಗಿ ಜಗತ್ತಿನಲ್ಲಿ ಭಾರತದ ಮರ್ಯಾದೆ ಹಾಳಾಗಿದೆ ಎಂದು ಟೀಕಿಸಿದರು. ನಿಮ್ಮ ಬಳಿ ತಾಯಿ ಮತ್ತು ಸಹೋದರಿಯರ ರಕ್ಷಣೆಗೆ ಯಾವುದೇ ಯೋಜನೆಗಳಿಲ್ಲ.

ಧಮ್ ಕೂಡ ಇಲ್ಲ. ಮಹಿಳೆಯರ ರಕ್ಷಣೆಗಾಗಿ ನಿಮ್ಮಿಂದ ಏನೂ ಮಾಡಲಾಗುತ್ತಿಲ್ಲ. ಬದಲಾಗಿ ವಿರೋಧ ಪಕ್ಷಗಳ ಮೇಲೆ ಜವಾಬ್ದಾರಿ ವಹಿಸುತ್ತೀರ. ಸುಳ್ಳು ಆರೋಪಗಳನ್ನು ಮಾಡುತ್ತೀರ ಎಂದು ಮೋದಿಯವರು ಆಗಿನ ಯುಪಿಎ ಹಾಗೂ ದೆಹಲಿ ಸರ್ಕಾರವನ್ನು ಟೀಕಿಸಿದ್ದರು.

ಆ ವಿಡಿಯೋವನ್ನು ರಾಹುಲ್‍ಗಾಂಧಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಭಾರತದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಹೇಳುವ ಸಂದರ್ಭದಲ್ಲಿ ರಾಹುಲ್‍ಗಾಂಧಿಯವರು ಮೇಕ್ ಇನ್ ಇಂಡಿಯಾ ಬದಲಾಗಿ ರೇಪ್ ಇನ್ ಇಂಡಿಯಾ ಆಗುತ್ತಿದೆ ಎಂದು ಚುನಾವಣಾ ಪ್ರಚಾರದ ವೇಳೆ ಆರೋಪಿಸಿದ್ದರು.

ಇದರಿಂದಾಗಿ ವಿಶ್ವದಲ್ಲಿ ಭಾರತದ ಮರ್ಯಾದೆ ಹೋಗುತ್ತಿದೆ. ರಾಹುಲ್‍ಗಾಂಧಿ ತಮ್ಮ ಹೇಳಿಕೆಗಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿರುವ ಬಿಜೆಪಿ ಸಂಸತ್‍ನಲ್ಲಿ ಭಾರೀ ಪ್ರತಿಭಟನೆ ನಡೆಸಿತ್ತು. ಅದಕ್ಕೆ ಮೋದಿಯವರ ವಿಡಿಯೋ ಮೂಲಕವೇ ರಾಹುಲ್‍ಗಾಂಧಿ ತಿರುಗೇಟು ನೀಡಿದ್ದಾರೆ.

Facebook Comments