ಪುಲ್ವಾಮಾ ಉಗ್ರರ ದಾಳಿ ವಿಚಾರದಲ್ಲಿ ರಾಹುಲ್ ಬಿಜೆಪಿ ನಡುವೆ ಜಟಾಪಟಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, -ಫೆ.14-ಪಾಕಿಸ್ತಾನ ಉಗ್ರರ ದಾಳಿಯಲ್ಲಿ ಸಿಆರ್‌ಪಿಎಫ್‌ನ 40 ಯೋಧರು ಹತರಾದ ಪುಲ್ವಾಮಾ ಘಟನೆ ಇಂದು ಒಂದು ವರ್ಷ. ಈ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವಾಕ್ಸಮರ ನಡೆದಿದೆ.  ದಾಳಿ ಕುರಿತಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಬಿಜೆಪಿಗೆ 3 ಪ್ರಶ್ನೆಗಳನ್ನು ಕೇಳಿದ್ದಾರೆ.

ಸಾಮಾಜಿಕ ಜಲತಾಣ ಟ್ವಿಟರ್‍ನಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿಯವರು, ಪುಲ್ವಾಮ ಉಗ್ರರ ದಾಳಿ ಘಟನೆಯಿಂದ ಯಾರಿಗೆ ಹೆಚ್ಚು ಲಾಭವಾಯಿತು ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಘಟನೆಯನ್ನು ತನಿಖೆಗೆ ಒಳಪಡಿಸಲಾಗಿತ್ತು. ಆ ತನಿಖೆಯ ಕಥೆ ಏನಾಯಿತು ಎಂದು ಕೇಳಿದ್ದಾರೆ. ದಾಳಿಗೆ ಕಾರಣವಾದ ಭದ್ರತಾ ಲೋಪವಾಗಲು ಬಿಜೆಪಿ ಸರ್ಕಾರದಲ್ಲಿ ಯಾರು ಹೊಣೆ ಎಂದೂ ಕೂಡ ಪ್ರಶ್ನಿಸಿದ್ದಾರೆ.

ಬಿಜೆಪಿ ವಾಗ್ದಾಳಿ: ರಾಹುಲ್ ಹೇಳಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕರು ಕಾಂಗ್ರೆಸ್ ಮುಖಂಡನ ಈ ಹೇಳಿಕೆ ಹುತಾತ್ಮ ಯೋಧರಿಗೆ ಅಗೌರವ ಉಂಟು ಮಾಡಿದೆ ಎಂದು ಖಂಡಿಸಿದ್ದಾರೆ. ರಾಹುಲ್ ಬಹು ಹಿಂದಿನಿಂದಲೂ ಲಷ್ಕರ್-ಇ-ತೊಯ್ಬಾ, ಜೈಷ್-ಎ-ಮೊಹಮ್ಮದ್ ಮತ್ತು ಇಜ್ಬುಲ್ ಮುಜಾಹಿದ್ದೀನ್ ಉಗ್ರಗಾಮಿ ಸಂಘಟನೆ ಪರ ಅನುಕಂಪ ಹೊಂದಿದ್ದಾರೆ.

ಇದು ಈಗ ಮತ್ತೊಮ್ಮೆ ಸಾಬೀತಾಗಿದೆ ಎಂದು ಟೀಕಿಸಿದೆ.  ರಾಹುಲ್ ಕೇಳಿರುವ ಪ್ರಶ್ನೆಗಳು ಹುತಾತ್ಮರಿಗೆ ಅಪಮಾನ ಮಾಡುವ ಜೊತೆಗೆ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ವಿರುದ್ಧ ವಾಗ್ದಾಳಿ ನಡೆಸಲು ಪಾಕಿಸ್ತಾನಕ್ಕೆ ಅವಕಾಶ ನೀಡಿದಂತಾಗಿದೆ ಎಂದು ಕಟುವಾಗಿ ಟೀಕಿಸಿರುವ ಬಿಜೆಪಿ, ಹುತಾತ್ಮರಿಗೆ ಇಡೀ ದೇಶ ಗೌರವ ನಮನ ಸಲ್ಲಿಸುತ್ತಿರುವ ಈ ಸಂದರ್ಭದಲ್ಲಿ ರಾಹುಲ್ ಅವರ ಈ ಪ್ರಶ್ನೆ ಅತ್ಯಂತ ವಿಷಾದನೀಯ ಎಂದು ಬಿಜೆಪಿ ಪ್ರತಿಕ್ರಿಯಿಸಿದೆ.

Facebook Comments