ಇದೇ 19 ರಂದು ವಯನಾಡಿಗೆ ರಾಹುಲ್ ಭೇಟಿ, ಸರ್ಕಾರಿ ಅತಿಥಿಗೃಹದಲ್ಲೇ ವಾಸ್ತವ್ಯ

ಈ ಸುದ್ದಿಯನ್ನು ಶೇರ್ ಮಾಡಿ

ತಿರುವನಂತಪುರಂ,ಅ.17- ಸಾಂಕ್ರಾಮಿಕ ಮಹಾಮಾರಿ ಕೋವಿಡ್ ಹಿನ್ನೆಲೆಯಲ್ಲಿ ತಮ್ಮ ಕ್ಷೇತ್ರದ ಸ್ಥಿತಿಗತಿಗಳ ಕುರಿತು ಪರಿಶೀಲನೆ ನಡೆಸಲು ಕಾಂಗ್ರೆಸ್ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ ಕೇರಳದ ವಯನಾಡಿಗೆ ಇದೇ 19ರಿಂದ ಅ.21ರವರೆಗೆ ಪ್ರವಾಸ ಕೈಗೊಂಡಿದ್ದಾರೆ.

ತಮ್ಮ ಮೂರು ದಿನಗಳ ಭೇಟಿ ಅವಧಿಯಲ್ಲಿ ವಯನಾಡಿನ ವಿವಿಧ ಕ್ಷೇತ್ರಗಳಲ್ಲಿನ ಕೋವಿಡ್ ಪರಿಸ್ಥಿತಿಯನ್ನು ಪರಿಶೀಲಿಸಲಿದ್ದು, ಕೈಗೊಳ್ಳಬೇಕಾದ ಅಗತ್ಯ ಕ್ರಮಗಳು ಮತ್ತು ಸುಧಾರಿತ ಕ್ರಮಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ರಾಹುಲ್ ಸಮಾಲೊಚನೆ ನಡೆಸಲಿದ್ದಾರೆ.

ವಯನಾಡು ಪ್ರವಾಸದ ವೇಳೆ ರಾಹುಲ್ ಗಾಂಧಿಯವರು ತಮ್ಮೆಲ್ಲ ಕಾರ್ಯಕ್ರಮಗಳ ನಂತರ ಮರಳಿ ರಾತ್ರಿ ಕಲ್ಪೆಟ್ಟದಲ್ಲಿರುವ ಸರ್ಕಾರಿ ಅತಿಥಿಗೃಹದಲ್ಲೇ ಮೂರು ದಿನಗಳು ತಂಗಲಿದ್ದಾರೆ.

ಅಕ್ಟೋಬರ್ 19ರ ಮೊದಲ ದಿನದಂದು ದೆಹಲಿಯಿಂದ ಕೋಝಿಕೋಡ್‍ಗೆ ವಿಶೇಷ ವಿಮಾನದಲ್ಲಿ ಪ್ರಯಾಣ ಬೆಳೆಸಲಿದ್ದಾರೆ. ಅಲ್ಲಿಂದ ಮಲ್ಲಪ್ಪುರಂಗೆ ಭೇಟಿ ನೀಡಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಕೋವಿಡ್-19ರ ಬಗ್ಗೆ ಪರಿಶೀಲನಾ ಸಭೆ ನಡೆಸಲಿದ್ದಾರೆ. ಆನಂತರ ಕಲ್ಪೆಟ್ಟದಲ್ಲಿರುವ ಸರ್ಕಾರಿ ಅತಿಥಿಗೃಹದಲ್ಲೇ ರಾತ್ರಿ ತಂಗಲಿದ್ದಾರೆ.

ಅಕ್ಟೋಬರ್ 20ರಂದು ಕುರಿತು ವಯನಾಡ್ ಕಲೆಕ್ಟರೇಟ್‍ನಲ್ಲಿ ಪರಿಶೀಲನಾ ಸಭೆ ನಡೆಸಲಿದ್ದು, ಅ.21ರಂದು ಮನಂತವಾಡಿಗೆ ಭೇಟಿ ನೀಡಿ ಅಲ್ಲಿನ ಜಿಲ್ಲಾ ಆಸ್ಪತ್ರೆಗೆ ತೆರಳಿ ಅಲ್ಲಿನ ದೊರೆಯುತ್ತಿರುವ ಸೌಲಭ್ಯಗಳು ಪರಿಶೀಲನೆ ನಡೆಸಲಿದ್ದಾರೆ. ನಂತರ ಕಣ್ಣೂರು ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ವಿಶೇಷ ವಿಮಾನದ ಮೂಲಕ ದೆಹಲಿಗೆ ವಾಪಸ್ಸಾಗಲಿದ್ದಾರೆ.

Facebook Comments