“ರಾಹುಲ್ ಗಾಂಧಿ ಡ್ರಗ್ ಪೆಡ್ಲರ್” ಹೇಳಿಕೆಯನ್ನು ಮತ್ತೆ ಸಮರ್ಥಿಸಿಕೊಂಡ ಬಿಜೆಪಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.20- ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಡ್ರಗ್ ಪೆಡ್ಲರ್ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಹೇಳಿಕೆಯನ್ನು ಪಕ್ಷದ ಮುಖಂಡರು ಮತ್ತೆ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. 2001ರಲ್ಲಿ ರಾಹುಲ್ ಗಾಂಧಿ ಬಳಿ 1.60 ಲಕ್ಷ ಡಾಲರ್ ಮೌಲ್ಯದ ಡ್ರಗ್ಸ್ ಪತ್ತೆಯಾಗಿತ್ತು. ನಮ್ಮ ಪಕ್ಷದ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಹಿಂದೆ ನಡೆದ ಘಟನೆಯನ್ನು ಉಲ್ಲೇಖಿಸಿದ್ದಾರೆ. ಅವರ ಹೇಳಿಕೆಯಲ್ಲಿ ಸತ್ಯಾಂಶವಿದೆ ಎಂದು ಪಕ್ಷದ ವಕ್ತಾರರಾದ ಗಣೇಶ್ ಕಾರ್ನಿಕ್ ಮತ್ತು ಅಶ್ವಥ್ ನಾರಾಯಣ ಸಮರ್ಥಿಸಿದರು.

ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಉಭಯ ನಾಯಕರು, ಇದ್ದುದ್ದನ್ನು ಇದ್ದಂಗೆ ಹೇಳಿದರೆ ಎದ್ದು ಬಂದು ಎದೆಗೆ ಒದ್ದರಂತೆ ಎಂಬ ಗಾದೆಯಂತೆ ಕಾಂಗ್ರೆಸ್ ಕಥೆಯಾಗಿದೆ. 2001ರಲ್ಲಿ ನಡೆದ ಘಟನೆಯನ್ನು ನಮ್ಮ ಅಧ್ಯಕ್ಷರು ಹೇಳಿದ್ದಾರೆ. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.

ಪುನಃ 2016ರಲ್ಲೂ ಇದೇ ವಿಷಯ ಪ್ರಸ್ತಾಪವಾಗಿತ್ತು. ಈಗಿನ ರಾಜ್ಯಸಭಾ ಸದಸ್ಯರಾದ ಸುಬ್ರಹ್ಮಣ್ಯ ಸ್ವಾಮಿ ಅವರು, ಖಾಸಗಿ ಚಾನಲ್‍ನಲ್ಲಿ ರಾಹುಲ್ ಗಾಂಧಿಯವರ ಮಾದಕವಸ್ತುಗಳ ಬಗ್ಗೆ ಪ್ರಸ್ತಾಪ ಮಾಡಿದ್ದರು. ಇದು ಮಾಧ್ಯಮಗಳಲ್ಲಿ ವರದಿಯಾಗಿತ್ತೆಂದು ಗಣೇಶ್ ಕಾರ್ನಿಕ್ ಹೇಳಿದರು.

ಇದರ ಬಗ್ಗೆ ಅಧ್ಯಕ್ಷರು ಪ್ರಸ್ತಾಪಿಸಿದ್ದಕ್ಕೆ ಕಾಂಗ್ರೆಸಿಗರು ಏಕೆ ವಿರೋಧಿಸುತ್ತಾರೆ ಗೊತ್ತಿಲ್ಲ. ಖುದ್ದು ಸೋನಿಯಾ ಗಾಂಧಿಯವರೇ ಇದನ್ನು ವಿರೋಧಿಸಲಿಲ್ಲ. ಈ ಆರೋಪ ನಿಜ ಇದ್ದರೂ ಇರಬಹುದೆಂದು ಅವರೇ ಭಾವಿಸಿರಬಹುದು. ಕಟೀಲ್ ಹೇಳಿಕೆ ಸುಳ್ಳೆಂದು ಯಾರೂ ಹೇಳದಿರುವಾಗ ಕಾಂಗ್ರೆಸಿಗರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಪ್ರತಿಪಕ್ಷದ ಸ್ಥಾನದಲ್ಲಿರಲು ಕಾಂಗ್ರೆಸ್ ಅನರ್ಹವಾಗಿದೆ. ಇತ್ತೀಚೆಗೆ ಆರ್‍ಎಸ್‍ಎಸ್ ವಿರುದ್ದ ಸುಳ್ಳು ಆರೋಪ ಮಾಡುತ್ತಿದೆ. ಕಾಂಗ್ರೆಸ್ ಅಧ್ಯಕ್ಷರಾಗಲು ತಾಯಿ-ಮಗನ ನಡುವೆಯೇ ಸ್ಪರ್ಧೆಯಿದೆ. ನಮ್ಮಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಚುನಾವಣೆ ನಡೆಯುತ್ತದೆ ಎಂದು ಹೇಳಿದರು. ನಮ್ಮಲ್ಲಿ ಆತಂರಿಕ ಪ್ರಜಾಪ್ರಭುತ್ವವಿದೆ. ಕೊನೆ ಪಕ್ಷ ಕಾಂಗ್ರೆಸ್, ಬಿಜೆಪಿಯನ್ನು ನೋಡಿಯಾದರೂ ಕಲಿಯಲಿ ಎಂದು ವ್ಯಂಗ್ಯವಾಡಿದರು.

ಅಶ್ವಥ್ ನಾರಾಯಣ ಮಾತನಾಡಿ, ಸಿಂಧಗಿ ಮತ್ತು ಹಾನಗಲ್ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಬಂದಮೇಲೆ ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮೈಮೇಲೆ ಏನೋ ಬಂದವರಂತೆ ಮಾತನಾಡುತ್ತಾರೆ ಎಂದು ಕುಹುಕವಾಡಿದರು.

ಆರ್‍ಎಸ್‍ಎಸ್ ಬಗ್ಗೆ ಗಂಧ, ಗಾಳಿಯೂ ಗೊತ್ತಿಲ್ಲದೆ ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ಆರ್‍ಎಸ್‍ಎಸ್ ಬಗ್ಗೆ ಮಾತನಾಡುವ ಬದಲು ನೀವು ಶಾಖೆಗೆ ಬನ್ನಿ ಎಂದು ನಮ್ಮ ಅಧ್ಯಕ್ಷರು ಆಹ್ವಾನಿಸಿದ್ದರು. ಕುಮಾರಸ್ವಾಮಿಯವರು ನೀಲಿಚಿತ್ರ ನೀಡಲು ನಾನು ಆರ್‍ಎಸ್‍ಎಸ್ ಶಾಖೆಗೆ ಬರಬೇಕೆ ಎಂದು ಪ್ರಶ್ನಿಸುತ್ತಾರೆ. ನೀವು ಎರಡು ಲೋಕ ನೋಡಿದವರು. ರಾಜಕೀಯ ಮತ್ತು ಸಿನಿಮಾ ಲೋಕ ನೋಡಿಕೊಂಡಿದ್ದೀರಿ ಎಂದು ವಾಗ್ದಾಳಿ ನಡೆಸಿದರು.

ಆರ್‍ಎಸ್‍ಎಸ್ ಬಗ್ಗೆ ಹಗುರವಾಗಿ ಮಾತನಾಡುವುದು ಬೇಡ. ನಿಮ್ಮ ಸಾಧನೆಗಳ ಮೇ¯ ಮತ ಕೇಳಿ. ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್, ಜೆಡಿಎಸ್‍ಗೆ ಜನ ಛೀಮಾರಿ ಹಾಕುತ್ತಿದ್ದಾರೆ ಎಂದು ಕಿಡಿಕಾರಿದರು.

ಬ್ಲೂ ಫಿಲಂಗಳ ಬಗ್ಗೆ ಕುಮಾರಸ್ವಾಮಿಗೆ ಚೆನ್ನಾಗಿ ಗೊತ್ತಿದೆ. ಏಕೆಂದರೆ ಅವರು ಸಿನಿಮಾ ರಂಗದಿಂದ ಬಂದವರು. ಇವೆಲ್ಲವ ಮಾಡಿ ಸಾಕಷ್ಟು ಅನುಭವವಿದೆ. ಆರ್‍ಎಸ್‍ಎಸ್ ಬಗ್ಗೆ ನಿಮ್ಮ ಹೇಳಿಕೆಯನ್ನು ಹಿಂಪಡೆಯಿರಿ. ಅಪ್ರಸ್ತುತವಾಗಿದ್ದ ನೀವು ಮುಂಚೂಣಿಗೆ ಬರಲು ಇಂತಹ ಅಸಂಬಂಧ ಹೇಳಿಕೆಗಳನ್ನು ನೀಡುತ್ತಿದ್ದೀರಿ ಎಂದು ಅಶ್ವಥ್ ನಾರಾಯಣ ಕಿಡಿಕಾರಿದರು.

Facebook Comments