ರಫೇಲ್ ಕಡತಕ್ಕೆ ಅಲೋಕ್ ಕೈಹಾಕಿಲ್ಲ : ಸಿಬಿಐ ಸ್ಪಷ್ಟನೆ

ಈ ಸುದ್ದಿಯನ್ನು ಶೇರ್ ಮಾಡಿ

CBI--01

ನವದೆಹಲಿ, ಅ.26 (ಪಿಟಿಐ)- ಕೇಂದ್ರ ಸರ್ಕಾರದ ವಿವಾದಿತ ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದ ಕಡತಗಳು ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರ ಪರಿಶೀಲನೆಯಲ್ಲಿತ್ತು ಎಂಬ ವರದಿಗಳು ಸುಳ್ಳು ಎಂದು ಸಿಬಿಐ ಹೇಳಿದೆ. ಕೇಂದ್ರ ಸರ್ಕಾರದ ರಾತ್ರೋರಾತ್ರಿ ಎಲ್ಲ ಜವಾಬ್ದಾರಿಯಿಂದ ಅಲೋಕ್ ವರ್ಮಾ ಅವರನ್ನು ಮುಕ್ತಗೊಳಿಸುವ ಸಂದರ್ಭ ರಫೇಲ್ ಯುದ್ಧ ವಿಮಾನ ಒಪ್ಪಂದಕ್ಕೆ ಸಂಬಂಧಿಸಿರುವುದು ಸೇರಿದಂತೆ ಹಲವು ನಿರ್ಣಾಯಕ ಕಡತಗಳು ವರ್ಮಾ ಅವರ ಪರಿಶೀಲನೆಯಲ್ಲಿದ್ದವು ಎಂಬ ಆರೋಪಗಳು ಕೇಳಿ ಬಂದಿದ್ದವು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿಬಿಐ ವಕ್ತಾರ ಅಭಿಷೇಕ್ ದಯಾಳ್ ಅವರು, ಇದು ಸ್ಥಾಪಿತ ಹಿತಾಸಕ್ತಿ ಸೃಷ್ಟಿಸಿದ ಸುಳ್ಳಾಗಿದೆ. ಸಿಬಿಐನಲ್ಲಿರುವ ಪ್ರತಿ ಹಂತದ ಕಡತಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. ಕೆಲವು ಪತ್ರಿಕೆಗಳಲ್ಲಿ ವರದಿಯಾದ ಸುದ್ದಿ ಸಿಬಿಐಯ ವಿಶ್ವಾಸಾರ್ಹತೆ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡುತ್ತದೆ. ಸಿಬಿಐ ಅಂತಾರಾಷ್ಟ್ರೀಯವಾಗಿ ಪ್ರಕರಣಗಳ ತನಿಖೆ ನಡೆಸುತ್ತದೆ. ವಿಶ್ವಾಸಾರ್ಹತೆಗೆ ಧಕ್ಕೆ ಉಂಟು ಮಾಡಬಾರದು ಎಂದು ತಿಳಿಸಿದ್ದಾರೆ.

ದೇಶದ ಅತ್ಯುನ್ನತ ತನಿಖಾ ಸಂಸ್ಥೆಯಾಗಿರುವ ಕೇಂದ್ರೀಯ ತನಿಖಾ ದಳದ ಪ್ರತಿಷ್ಠೆಗೆ ಕುಂದುಂಟಾಗುವಂತೆ ವರ್ತಿಸಿದ ಸಿಬಿಐ ಮುಖ್ಯಸ್ಥ ಅಲೋಕ್ ವರ್ಮಾ ಹಾಗೂ ಉಪಮುಖ್ಯಸ್ಥ ರಾಕೇಶ್ ಅಸ್ಥಾನಾ ಅವರ ಅಧಿಕಾರಕ್ಕೆ ಕೇಂದ್ರ ಸರ್ಕಾರ ಕೆಲ ದಿನಗಳ ಹಿಂದಷ್ಟೇ ಕತ್ತರಿ ಪ್ರಯೋಗ ಮಾಡಿತ್ತು. ಬಹಿರಂಗವಾಗಿ ಕಿತ್ತಾಡುವ ಮೂಲಕ ಸಿಬಿಐನ ಮರ್ಯಾದೆ ಹರಾಜು ಹಾಕಿದ್ದ ಇಬ್ಬರೂ ಉನ್ನತಾಧಿಕಾರಿಗಳನ್ನು ತಡರಾತ್ರಿ ರಜೆ ಮೇಲೆ ಕಳುಹಿಸಿತ್ತು. ಬಳಿಕ ಸಿಬಿಐನ ಜಂಟಿ ನಿರ್ದೇಶಕರಾಗಿರುವ ಒಡಿಶಾ ಕೇಡರ್ ಐಪಿಎಸ್ ಅಧಿಕಾರಿ ಎಂ.ನಾಗೇಶ್ವರ ರಾವ್ ಅವರಿಗೆ ಸಿಬಿಐನ ಹೊಣೆಗಾರಿಕೆಯನ್ನು ಹಂಗಾಮಿಯಾಗಿ ವಹಿಸಿತ್ತು.

ಬಹಿರಂಗವಾಗಿ ಕಿತ್ತಾಟಕ್ಕೆ ಇಳಿದಿದ್ದ ಸಿಬಿಐ ಮುಖ್ಯಸ್ಥ ಹಾಗೂ ಉಪ ಮುಖ್ಯಸ್ಥರನ್ನು ರಾತ್ರೋರಾತ್ರಿ ರಜೆ ಮೇಲೆ ಕಳುಹಿಸಿದ ಕೇಂದ್ರ ಸರ್ಕಾರದ ಕ್ರಮ ಇದೀಗ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಈ ವಿಚಾರವನ್ನು ಕೈಗೆತ್ತಿಕೊಂಡಿರುವ ಕಾಂಗ್ರೆಸ್, ಸಿಬಿಐ ಮುಖ್ಯಸ್ಥರ ವಿರುದ್ಧ ಕೇಂದ್ರ ಸರ್ಕಾರ ನಡೆಸಿದ ರಾತ್ರಿ ಆಪರೇಷನ್‍ಅನ್ನು ರಫೇಲ್ ಯುದ್ಧ ವಿಮಾನ ಖರೀದಿ ವ್ಯವಹಾರದ ಜತೆಗೆ ತಳಕು ಹಾಕಲು ಯತ್ನ ನಡೆಸಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ