ಬಿಜೆಪಿ ಮತ ಕೇಳಲು ಬಂದಾಗ ಲಾಠಿ ಏಟುಗಳನ್ನು ನೆನಪಿಸಿಕೊಳ್ಳಿ : ರಾಹುಲ್ ಗಾಂಧಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಡಿ.5- ಉದ್ಯೋಗ ಕೇಳಿದವರಿಗೆ ಉತ್ತರ ಪ್ರದೇಶ ಸರ್ಕಾರ ಲಾಠಿಯಲ್ಲಿ ಉತ್ತರ ಕೊಟ್ಟಿದೆ. ಮುಂದಿನ ಬಾರಿ ಬಿಜೆಪಿಯವರು ಮತ ಕೇಳಲು ಬಂದಾಗ ಇದನ್ನು ನೆನಸಿಕೊಳ್ಳಿ ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಲಕ್ನೋದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸಹ ಶಿಕ್ಷಕ ಹುದ್ದೆ ಆಕಾಂಕ್ಷಿಗಳ ಮೇಲೆ ಪೊಲೀಸ್‍ರು ಲಾಠಿ ಚಾರ್ಜ್ ನಡೆಸಿರುವ ವಿಡಿಯೋವನ್ನು ಟ್ವಿಟರ್‍ನಲ್ಲಿ ಹಂಚಿಕೊಂಡಿರುವ ರಾಹುಲ್‍ಗಾಂಧಿ, ಬಿಜೆಪಿಯವರು ಮತ ಕೇಳಲು ಬಂದಾಗ ಇದನ್ನು ನೆನಪಿಸಿಕೊಳ್ಳಿ ಎಂದು ಜನರಿಗೆ ಕರೆ ನೀಡಿದ್ದಾರೆ.

ಉತ್ತರ ಪ್ರದೇಶ ಸರ್ಕಾರ 2019ರಲ್ಲಿ 69 ಸಾವಿರ ಸಹಾಯಕ ಶಿಕ್ಷಕರ ನೇಮಕಾತಿಗೆ ಕ್ರಮ ಕೈಗೊಂಡಿತ್ತು. ನೇಮಕಾತಿ ಪ್ರಕ್ರಿಯೆಯಲ್ಲಿ ಭ್ರಷ್ಟಚಾರ ನಡೆದಿದೆ ಎಂದು ಆರೋಪಿಸಿ ಎರಡು ವರ್ಷಗಳಿಂದ ಪ್ರತಿಭಟನೆ ನಡೆಸಲಾಗುತ್ತಿದೆ.

ನೇಮಕಾತಿಯಲ್ಲಿನ ಅಕ್ರಮಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ನಿನ್ನೆ ಸಂಜೆ ಲಕ್ನೋದಲ್ಲಿ ನೂರಾರು ಅಭ್ಯರ್ಥಿಗಳು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರು. ಪಂಜಿನ ಮೆರವಣಿಗೆ ನಡೆಸುತ್ತಿದ್ದ ಉದ್ಯೋಗಾಕಾಂಕ್ಷಿಗಳ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಲಾಠಿ ಪ್ರಹಾರದಿಂದ ಹಲವಾರು ಮಂದಿ ಗಾಯಗೊಂಡಿದ್ದಾರೆ. ರಸ್ತೆಯಲ್ಲಿ ಕೆಳಗೆ ಬಿದ್ದವರನ್ನು ಬಿಡದೆ ಪೊಲೀಸರು ತುಳಿದು, ಲಾಠಿಯಿಂದ ಅಮಾನವೀಯವಾಗಿ ಥಳಿಸಿರುವ ವಿಡಿಯೋವನ್ನು ಸಮಾಜವಾದಿ ಪಕ್ಷದ ಹಂಚಿಕೊಂಡಿದೆ.

ಈ ವಿಡಿಯೋ ಭಾರಿ ಸಂಚಲನ ಮೂಡಿಸಿದೆ. ಸಮಾಜವಾದಿ ಪಕ್ಷದ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಘಟನೆಯನ್ನು ಖಂಡಿಸಿದ್ದಾರೆ. ಭವಿಷ್ಯದ ಶಿಕ್ಷಕರ ಮೇಲೆ ಲಾಠಿ ಬೀಸುವ ಮೂಲಕ ಬಿಜೆಪಿ ಆಡಳಿತ ವಿಶ್ವಗುರುವಾಗುವತ್ತ ಹೆಜ್ಜೆಯಿಟ್ಟಿದೆ ಎಂದು ಲೇವಡಿ ಮಾಡಿದ್ದಾರೆ.

ಬಹುಜನ ಸಮಾಜವಾದಿ ಪಕ್ಷದ ನಾಯಕಿ ಮಾಯಾವತಿ ಅವರು ಘಟನೆಯನ್ನು ಖಂಡಿಸಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ಶಿಕ್ಷಕ ನೇಮಕಾತಿಯಲ್ಲಿ ದಲಿತರಿಗೆ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಮೀಸಲಾತಿಯನ್ನು ನಿರಾಕರಿಸಿದೆ. ಈಗ ಅಕ್ರಮದ ಬಗ್ಗೆ ಧ್ವನಿ ಎತ್ತಿದವರ ವಿರುದ್ಧವೂ ಲಾಠಿ ಪ್ರಹಾರ ನಡೆಸಲಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಆದರೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಲಾಠಿ ಪ್ರಹಾರವನ್ನು ಅಲ್ಲಗಳೆದಿದ್ದಾರೆ. ಆ ರೀತಿಯ ಯಾವ ಘಟನೆಗಳು ನಡೆದೇ ಇಲ್ಲ ಎಂದು ವಾದಿಸಿದ್ದಾರೆ.

Facebook Comments