ಇದೇ 30ರಂದು ರಾಜ್ಯಾದ್ಯಂತ ರೈಲ್ ರುಖೋ ಚಳವಳಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.28- ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಉದ್ಧಟತನದ ಹೇಳಿಕೆ ಖಂಡಿಸಿ ಎಂಇಎಸ್ ಸಂಘಟನೆಯನ್ನು ನಿಷೇಧಿಸಬೇಕು ಹಾಗೂ ಮರಾಠ ಅಭಿವೃದ್ಧಿ ನಿಗಮ ರದ್ದುಪಡಿಸಬೇಕೆಂದು ಒತ್ತಾಯಿಸಿ ಇದೇ 30ರಂದು ರಾಜ್ಯಾದ್ಯಂತ ರೈಲ್ ರುಖೋ ಕಾರ್ಯಕ್ರಮವನ್ನು ಕನ್ನಡ ಒಕ್ಕೂಟ ಹಮ್ಮಿಕೊಂಡಿದೆ.  ಈ ಕುರಿತು ಒಕ್ಕೂಟದ ಮುಖಂಡರಾದ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್, ಸಾ.ರಾ.ಗೋವಿಂದು, ಮಂಜುನಾಥ್ ದೇವು,  ಮುಖ್ಯಮಂತ್ರಿ ಚಂದ್ರು, ಗಿರೀಶ್‍ಗೌಡ, ಬಿ.ಟಿ.ಲಲಿತಾನಾಯಕ್ ಸೇರಿದಂತೆ ಅನೇಕ ಮುಖಂಡರು ಸಭೆ ನಡೆಸಿ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಾಟಾಳ್ ನಾಗರಾಜ್ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಹೇಳಿಕೆ ಕರ್ನಾಟಕದಲ್ಲಿ ಶಾಂತಿ-ಸೌಹಾರ್ದತೆಯನ್ನು ಕದಡುವಂತಿದೆ. ಇದೇ ಧೋರಣೆ ಮುಂದುವರಿದರೆ ರಾಜ್ಯದಲ್ಲಿರುವ ಎಲ್ಲ ಮರಾಠಿಗರನ್ನು ಮಹಾರಾಷ್ಟ್ರಕ್ಕೆ ರೈಲು ಹತ್ತಿಸಬೇಕಾಗುತ್ತದೆ ಎಚ್ಚರ. ರಾಜ್ಯದಲ್ಲಿರುವ ಕಿಡಿಗೇಡಿ ಕೃತ್ಯ ಮಾಡುವ ಎಂಇಎಸ್ ಸಂಘಟನೆಯನ್ನು ಕೂಡಲೇ ನಿಷೇಧ ಮಾಡಬೇಕು.

ಉದ್ಧವ್ ಠಾಕ್ರೆ ಹೇಳಿಕೆಯನ್ನು ರಾಜ್ಯ ಸರ್ಕಾರ ಖಂಡಿಸಬೇಕು. ಮಹಾರಾಷ್ಟ್ರದಲ್ಲಿ ಕರ್ನಾಟಕ ಏಕೀಕರಣ ಸಂಸ್ಥೆಯನ್ನು ಸ್ಥಾಪಿಸಬೇಕು. ರಾಜ್ಯಸರ್ಕಾರ ರಚಿಸಿರುವ ಮರಾಠ ಅಭಿವೃದ್ಧಿ ನಿಗಮವನ್ನು ಕೂಡಲೇ ರದ್ದುಮಾಡಬೇಕು. ಈ ಎಲ್ಲ ಬೇಡಿಕೆಗಳನ್ನೂ ಮುಂದಿಟ್ಟುಕೊಂಡು ರಾಜ್ಯಾದ್ಯಂತ ಇದೇ 30ರಂದು ರೈಲು ತಡೆಯುವ ಚಳವಳಿ ಮಾಡುತ್ತೇವೆ ಎಂದು ಹೇಳಿದರು.

ಸಾ.ರಾ.ಗೋವಿಂದು ಮಾತನಾಡಿ, ಬೆಳಗಾವಿ ನಮ್ಮದು. ಬೆಳಗಾವಿಯ ರಾಜಕಾರಣಿಗಳು ಮರಾಠಿಗರೊಂದಿಗೆ ಒಳ ಒಪ್ಪಂದ ಮಾಡಿಕೊಂಡು ರಾಜ್ಯದಲ್ಲಿ ಅನಗತ್ಯ ಕಿರಿಕಿರಿ ಉಂಟುಮಾಡಲು ಪ್ರೇರಣೆ ನೀಡುತ್ತಿದ್ದಾರೆ. ಸರ್ಕಾರವು ಕೂಡ ಕುಮ್ಮಕ್ಕು ನೀಡುತ್ತಿದೆ. ಕನ್ನಡಪರ ಹೋರಾಟದವರು ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಜವಾಬ್ದಾರಿಯುತ ಸ್ಥಾನದಲ್ಲಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ನೀಡಿರುವ ಹೇಳಿಕೆಯನ್ನು ನಮ್ಮ ಮುಖ್ಯಮಂತ್ರಿ ಖಂಡಿಸಬೇಕು ಎಂದು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಗಡಿ ಅಭಿವೃದ್ಧಿ ಪ್ರಾಧಿಕಾರ ಈ ಬಗ್ಗೆ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಸಾ.ರಾ.ಗೋವಿಂದು ಆಗ್ರಹಿಸಿದರು.

Facebook Comments