ರೈಲ್ವೆ ಪ್ರಯಾಣಿಕರ ಬ್ಯಾಗ್ ಎಗರಿಸುತ್ತಿದ್ದ ಆರೋಪಿಗಳ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.20- ರೈಲಿನಲ್ಲಿ ಪ್ರಯಾಣಿಸಿ ಮನೆಗೆ ತಲುಪುವಷ್ಟರಲ್ಲಿ ಪ್ರಯಾಣಿಕರ ಆಭರಣವಿದ್ದ ಬ್ಯಾಗ್ ಎಗರಿಸುತ್ತಿದ್ದ ಜಾಲವನ್ನು ರೈಲ್ವೆ ಪೊಲೀಸರು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. 2020 ಫೆಬ್ರವರಿ 8ರಂದು ಬೆಂಗಳೂರಿನ ನಿವಾಸಿ ಅರವಿಂದ ಎಂಬುವರು ತಮ್ಮ ಕುಟುಂಬದವರೊಂದಿಗೆ ಸಂಪರ್ಕ ಕ್ರಾಂತಿ ಎಕ್ಸ್ ಪ್ರೆಸ್ ರೈಲಿನಲ್ಲಿ ಹುಬ್ಬಳ್ಳಿಯಿಂದ ಯಶವಂತಪುರಕ್ಕೆ ಬಂದಿದ್ದಾರೆ. ವೊಲಾ ಕ್ಯಾಬ್‍ನಲ್ಲಿ ಮನೆಗೆ ತೆರಳಿ ಬ್ಯಾಗ್ ನೋಡಿಕೊಂಡಾಗ ಒಂದು ಬ್ಯಾಗ್ ನಾಪತ್ತೆಯಾಗಿತ್ತು. ಅದರಲ್ಲಿದ್ದ 2.25 ಲಕ್ಷ ಮೌಲ್ಯದ 73 ಗ್ರಾಂ ಆಭರಣ ಕಳ್ಳತನದ ಬಗ್ಗೆ ದೂರು ದಾಖಲಾಗಿತ್ತು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಹುಬ್ಬಳ್ಳಿ ರೈಲ್ವೆ ಪೊಲೀಸರು ತನಿಖೆ ನಡೆಸಿ ಆರೋಪಿ ಸನ್ನಿ ಅಲಿಯಾಸ್ ಸನ್ನಿಸ್ (24) ಎಂಬಾತನನ್ನು ಬಂಧಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಬೆಳಗಾವಿ ಎಕ್ಸ್ ಪ್ರೆಸ್ ರೈಲಿನಲ್ಲಿ ಅರಸೀಕೆರೆಯಿಂದ ದುರ್ಗಮ್ಮ ಎಂಬುವವರು ಪ್ರಯಾಣಿಸಿಕೊಂಡು ಬರುವಾಗ 2.27 ಲಕ್ಷ ರೂ. ಮೌಲ್ಯದ 72 ಗ್ರಾಂ ಆಭರಣ ಮತ್ತು ಮೊಬೈಲ್ ಇದ್ದ ವ್ಯಾನಿಟಿ ಬ್ಯಾಗ್ ಕಳ್ಳತನ ಮಾಡಿದ್ದ ಮಂಡ್ಯ ಮೂಲದ ಆರೋಪಿ ನಾಗರಾಜ್ ಎಂಬಾತನನ್ನು ಬಂಧಿಸಿದ್ದಾರೆ.

ಕಲಬುರಗಿ ರೈಲ್ವೆ ಉಪ ವಿಭಾಗ: ತೆಲಂಗಾಣ ನಿವಾಸಿ ಫರತ್ ಬೇಗಂ ಎಂಬುವರು ವಿಶಾಖಪಟ್ಟಣಂ ರೈಲಿನಲ್ಲಿ ಕಲಬುರಗಿಗೆ ಪ್ರಯಾಣಿಸಿಕೊಂಡು ಬರುವಾಗ ಇವರಿಗೆ ಸೇರಿದ 2.45 ಲಕ್ಷ ಮೌಲ್ಯದ ಆಭರಣವಿದ್ದ ಬ್ಯಾಗ್ ಕಳ್ಳತನ ಮಾಡಿದ್ದ ಮೂವರು ಮಹಿಳೆಯರನ್ನು ರೈಲ್ವೆ ಪೊಲೀಸರು ಬಂಧಿಸಿ ಆಭರಣ ವಶಪಡಿಸಿಕೊಂಡಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಕೌಶಲ್ಯ ಬಡತಿಯ ಎಂಬುವವರು ಕೊನಾರ್ಕ್ ಕೋವಿಡ್-19 ವಿಶೇಷ ರೈಲು ಗಾಡಿಯಲ್ಲಿ ಕಲ್ಯಾಣ ರೈಲ್ವೆ ನಿಲ್ದಾಣದಿಂದ ಬೆಹರಮಪೂರಕ್ಕೆ ಪ್ರಯಾಣ ಮಾಡುತ್ತಿದ್ದಾಗ ಕಲಬುರಗಿ ರೈಲ್ವೆ ನಿಲ್ದಾಣದಲ್ಲಿ ಆಭರಣ ಮತ್ತು ಮೊಬೈಲ್ ಇದ್ದ ಬ್ಯಾಗನ್ನು ಕಳ್ಳನೊಬ್ಬ ಕಿತ್ತುಕೊಂಡು ಹೋಗಿದ್ದ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ವಾಡಿರೈಲ್ವೆ ಪೊಲೀಸ್‍ರ ತಂಡ ಮೋಸಿನ್ ಎಂಬಾತನನ್ನು ಬಂಧಿಸಿ ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

Facebook Comments