ಪ್ರಯಾಣಿಕರಿಗೆ ಸರತಿ ಸಾಲಲ್ಲಿ ನಿಲ್ಲುವ ಸಂಕಷ್ಟ ತಪ್ಪಿಸಲು 5 ನಿಮಿಷದಲ್ಲಿ ರೈಲು ಟಿಕೆಟ್ ವ್ಯವಸ್ಥೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.29-ರೈಲು ನಿಲ್ದಾಣದಲ್ಲಿ ಟಿಕೆಟ್‍ಗಾಗಿ ಸರತಿ ಸಾಲಿನಲ್ಲಿ ನಿಲ್ಲುವ ಸಂಕಷ್ಟ ತಪ್ಪಿಸಿ ಪ್ರತಿ ಪ್ರಯಾಣಿಕರಿಗೂ ಐದು ನಿಮಿಷದಲ್ಲಿ ಟಿಕೆಟ್ ನೀಡುವಂತಹ ವ್ಯವಸ್ಥೆ ರೂಪಿಸಬೇಕು ಎಂದು ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ನಗರದ ಸಂಗೊಳ್ಳಿರಾಯಣ್ಣ ರೈಲ್ವೆ ನಿಲ್ದಾಣದಲ್ಲಿ 3ನೇ ಪ್ರವೇಶದ್ವಾರ ಉದ್ಘಾಟಿಸಿ ಮಾತನಾಡಿದ ಅವರು, ಪಿಯೂಷ್ ಗೋಯಲ್ ಮತ್ತು ನಾನು ರೈಲ್ವೆ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ 100 ದಿನದ ಗುರಿಯನ್ನು ನಿಗದಿಪಡಿಸಿಕೊಂಡಿದ್ದು, ಅದರಲ್ಲಿ ಮೊದಲನೆಯದಾಗಿ ರೈಲ್ವೆ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ. ಎಲ್ಲಾ ರೈಲುಗಳು ನಿಗದಿತ ಸಮಯದಲ್ಲೇ ಸಂಚರಿಸಬೇಕು, ಸಮಯಪಾಲನೆ ಕರಾರುವಕ್ಕಾಗಿರಬೇಕು.

ಇದೇ ನಮ್ಮ ಆದ್ಯತೆ. ಹಿಂದೆ ಯುಪಿಎ ಸರ್ಕಾರದಲ್ಲಿ ಒಂದು ದಿನ ತಡವಾಗಿ ರೈಲುಗಳು ಸಂಚರಿಸುತ್ತಿದ್ದವು. ಆದರೆ ಕಳೆದ ಐದಾರು ವರ್ಷಗಳಿಂದ ಸಮಯಪಾಲನೆ ಸರಿಯಾಗಿ ನಡೆಯುತ್ತಿದೆ. ನಾನು ಸಚಿವನಾದ ನಂತರ ಎ.ಸಿ. ಕೋಚ್‍ಗಳಿಗೆ ಭೇಟಿ ನೀಡದೆ, ಜನಸಾಮಾನ್ಯರ ಬೋಗಿಗಳಿಗೆ ಹೋಗಿದ್ದೆ. ಅಲ್ಲಿ ಅನೈರ್ಮಲ್ಯ ವಾತಾವರಣ ಇತ್ತು. ಅದನ್ನು ಸರಿಪಡಿಸಲು ಅಧಿಕಾರಿಗಳಿಗೆ ಸೂಚನೆ ಕೊಟ್ಟೆ. ಜನಸಾಮಾನ್ಯರು ರೈಲು ಸೇವೆಗಾಗಿ ಹಣ ಕೊಡಲು ಸಿದ್ಧರಿದ್ದಾರೆ.

ನಾವು ಸುರಕ್ಷಿತ ಮತ್ತು ಶುಚಿತ್ವದ ಸೇವೆ ಒದಗಿಸಬೇಕು. ಟಿಕೆಟ್‍ಗಾಗಿ ಸರತಿ ಸಾಲಿನಲ್ಲಿ ನಿಲ್ಲುವ ಕಷ್ಟ ಇರಬಾರದು, ಐದು ನಿಮಿಷದಲ್ಲೇ ಪ್ರಯಾಣಿಕ ಟಿಕೆಟ್ ಪಡೆದುಕೊಳ್ಳಬೇಕು ಎಂದು ಸೂಚನೆ ನೀಡಿದರು. ಹಂತ ಹಂತವಾಗಿ ದೇಶದ ಎಲ್ಲಾ ರೈಲುಗಳನ್ನು ವಿದ್ಯುದೀಕರಣ ಮಾಡಲು ಕ್ರಮಕೈಗೊಳ್ಳಲಾಗಿದೆ. ಹಿಂದೆ ವಾಜಪೇಯಿ ಸರ್ಕಾರ ಸುವರ್ಣ ಚತುಷ್ಪಥ ರಸ್ತೆ ನಿರ್ಮಿಸಿ ದೇಶದ ಎಲ್ಲಾ ದಿಕ್ಕುಗಳಿಗೂ ಸಂಪರ್ಕ ಕಲ್ಪಿಸಿದ್ದರು.

ಅದೇ ರೀತಿ ನರೇಂದ್ರ ಮೋದಿಯವರು ದೇಶದ ನಾಲ್ಕು ದಿಕ್ಕುಗಳ ರೈಲ್ವೆ ವಿಭಾಗವನ್ನು ಸಂಪರ್ಕಿಸುವ ಉದ್ದೇಶ ಹೊಂದಿದ್ದಾರೆ. ಇದು ಯಶಸ್ವಿಯಾದರೆ ದೇಶದ ಎಲ್ಲಾ ದಿಕ್ಕುಗಳ ಜನರನ್ನು ಒಗ್ಗೂಡಿಸಿದ ಕೀರ್ತಿ ಪ್ರಧಾನಿಯವರಿಗೆ ಸಲ್ಲುತ್ತದೆ ಎಂದು ಹೇಳಿದರು.

ರೈಲ್ವೆ ಇಲಾಖೆ ಇನ್ನಷ್ಟು ವೇಗ ಪಡೆದುಕೊಳ್ಳಬೇಕು. ಜಪಾನ್, ಚೀನಾಗಳಲ್ಲಿ ಗಂಟೆಗೆ 300 ಕಿಲೋ ಮೀಟರ್ ಸಂಚರಿಸುವ ರೈಲುಗಳಿವೆ. ನಾವಿನ್ನೂ 100 ಕಿಲೋ ಮೀಟರ್ ವೇಗವನ್ನು ದಾಟಲಾಗಿಲ್ಲ. ಇದು ಸಂಘಟಿತವಾಗಿ ಮಾಡಬೇಕಾದ ಕೆಲಸ. ಕೇಂದ್ರ ಮತ್ತು ರಾಜ್ಯ ಸರ್ಕಾರ, ಸ್ಥಳೀಯ ಸಂಸ್ಥೆಗಳು ಜಂಟಿಯಾಗಿ ಕೆಲಸ ಮಾಡಬೇಕು. ಕೇವಲ ಕೇಂದ್ರ ಸರ್ಕಾರದ ಮೇಲೆ ಜವಾಬ್ದಾರಿ ಹೊರೆಸಿ ಸುಮ್ಮನಾಗುವುದು ಸರಿಯಲ್ಲ.

ಬೆಂಗಳೂರಿಗೆ ಸಬರ್ಬನ್ ರೈಲು ಯೋಜನೆ ಜಾರಿಗೊಳಿಸಲು ಕೇಂದ್ರ ಸರ್ಕಾರ ಸಿದ್ಧ ಇದೆ. ಇಲ್ಲಿನ ಸಂಚಾರ ದಟ್ಟಣೆಗೆ ಸಬರ್ಬನ್ ರೈಲು ಸೂಕ್ತ ಪರಿಹಾರ. ಈ ಅಧಿವೇಶನದ ಬಳಿಕ ಬೆಂಗಳೂರಿನಲ್ಲಿ ವಿಶೇಷವಾಗಿ ಸಭೆ ನಡೆಸಿ ಯೋಜನೆ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.

ಮುಂಬೈ, ಪುಣೆ, ಮೀರಜ್, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ದಾವಣಗೆರೆ, ತುಮಕೂರು 3200 ಕೋಟಿ ರೂ. ವೆಚ್ಚದಲ್ಲಿ ರೈಲ್ವೆ ಡಬ್ಲಿಂಗ್ ಕಾಮಗಾರಿ ನಡೆಯುತ್ತಿದೆ. ಇದು ಪೂರ್ಣಗೊಂಡರೆ ಮುಂಬೈ, ಪುಣೆ, ಗೋವಾ, ಬೆಳಗಾವಿ ಮಾರ್ಗಗಳಲ್ಲಿ ರೈಲುಗಳ ಸಂಖ್ಯೆ ಹೆಚ್ಚಿಸಲು ಸಾಧ್ಯವಿದೆ ಎಂದರು.
ಮೇಯರ್ ಗಂಗಾಂಬಿಕೆ ಅವರು ಪ್ರಸ್ತಾಪಿಸಿದ ಸಮಸ್ಯೆಗೆ ಸ್ಪಂದಿಸಿದ ಕೇಂದ್ರ ಸಚಿವರು, ರೈಲ್ವೆ ಕೆಳಸೇತುವೆಗಳಲ್ಲಿ ರೈಲಿನಿಂದ ಕೊಳಚೆ ನೀರು ಬೀಳುವುದನ್ನು ಒಂದು ತಿಂಗಳೊಳಗಾಗಿ ಸರಿಪಡಿಸಬೇಕು. ಇದು ಕ್ಷುಲ್ಲಕ ವಿಷಯ ಎನಿಸಿದರೂ ಗಂಭೀರವಾದ ಸಮಸ್ಯೆಯಾಗಿದೆ.

ಸ್ನಾನ ಮಾಡಿ ದೇವಸ್ಥಾನ, ಕಚೇರಿಗಳಿಗೆ ಹೋಗುವವರ ಮೈ ಮೇಲೆ ರೈಲಿನಿಂದ ಕೊಳಚೆ ನೀರು ಬಿದ್ದರೆ ಅವರ ಮನಸ್ಥಿತಿ ಕೆಡುತ್ತದೆ. ಮುಂದಿನ ತಿಂಗಳು ನಾನು ಮತ್ತೆ ಬರುತ್ತೇನೆ. ಆ ವೇಳೆಗೆ ಈ ಸಮಸ್ಯೆ ಸರಿಹೋಗದೆ ಇದ್ದರೆ ನನ್ನ ಗಮನಕ್ಕೆ ತನ್ನಿ, ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸುತ್ತೇನೆ ಎಂದು ಕೇಂದ್ರ ಸಚಿವರು ಭರವಸೆ ನೀಡಿದರು.

ಸಂಸದರಾದ ಪಿ.ಸಿ.ಮೋಹನ್ ಮಾತನಾಡಿ, ರೈಲ್ವೆ ಕಾಮಗಾರಿಗಳಿಗೆ ರಾಜ್ಯ ಸರ್ಕಾರ ಸಹಕಾರ ನೀಡುತ್ತಿಲ್ಲ ಎಂದು ಆರೋಪಿಸಿದರು. ಬಿಬಿಎಂಪಿ ಮೇಯರ್ ಗಂಗಾಂಬಿಕೆ, ಬಿಬಿಎಂಪಿ ಸದಸ್ಯರಾದ ಶಶಿಕಲಾ, ಶಿವಪ್ರಕಾಶ್, ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಅಜಯ್‍ಕುಮಾರ್‍ಸಿಂಗ್, ವಿಭಾಗೀಯ ವ್ಯವಸ್ಥಾಪಕ ಗೋಪಿನಾಥ್ ಮಲ್ಯ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

1.65 ಕೋಟಿ ರೂ. ವೆಚ್ಚದಲ್ಲಿ ಮೆಜೆಸ್ಟಿಕ್ ಎದುರು ಮತ್ತೊಂದು ಮುಖ್ಯ ದ್ವಾರ ನಿರ್ಮಿಸಲಾಗಿದ್ದು, ಈಗಾಗಲೇ ಎರಡು ದ್ವಾರಗಳಲ್ಲಿ ಹೆಚ್ಚಾಗಿರುವ ಸಂಚಾರ ದಟ್ಟಣೆ ಕಡಿಮೆ ಮಾಡಲು ರೈಲ್ವೆ ಇಲಾಖೆ ಕ್ರಮಕೈಗೊಂಡಿದೆ. ಹೊಸ ದ್ವಾರದಲ್ಲಿ ವಾಹನ ನಿಲುಗಡೆ ಸ್ಥಳ, ಸಾರ್ವಜನಿಕರ ಪಡಸಾಲೆ, ಟಿಕೆಟ್ ಕೌಂಟರ್ ಸೇರಿದಂತೆ ಎಲ್ಲಾ ಸುಸಜ್ಜಿತ ಸೌಲಭ್ಯಗಳಿವೆ.

Facebook Comments