‘ತಿಂಗಳಿಗೆ 2 ಲಕ್ಷ ಕೊಡಿ ಸರಿಪಡಿಸುತ್ತೇನೆ’: ಭಾರತೀಯ ರೈಲ್ವೆಗೆ ಸವಾಲ್ ಹಾಕಿದ ಮಾಸ್ಟರ್ ಮೈಂಡ್ ಹ್ಯಾಕರ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜ.24-ಭಾರತೀಯ ರೈಲ್ವೆಯ ಬಹುಕೋಟಿ ರೂ.ಗಳ ಇ-ಟಿಕೆಟಿಂಗ್ ವಂಚನೆಯ ವ್ಯವಸ್ಥಿತ ಜಾಲವೊಂದನ್ನು ರೈಲ್ವೆ ರಕ್ಷಣಾ ದಳ (ಆರ್‍ಎಎಫ್) ಭೇದಿಸಿದ್ದು, ಈ ಸಂಬಂಧ 22 ಜನರನ್ನು ಬಂಧಿಸಿದ ಬೆನ್ನಲೇ ಈ ಪ್ರಕರಣಕ್ಕೆ ಹೊಸ ತಿರುವು ಲಭಿಸಿದೆ.  ದುಬೈನಲ್ಲಿರುವ ಈ ಪ್ರಕರಣದ ಮಾಸ್ಟರ್ ಮೈಂಡ್ ಹಮೀದ್ ಅಶ್ರಫ್ ಆರ್‍ಎಎಫ್‍ಗೆ ನೀಡಿರುವ ಬೇಡಿಕೆಯೊಂದು ಆತಂಕ ಮತ್ತು ಅಚ್ಚರಿ ಮೂಡಿಸಿದೆ.

ರೈಲ್ವೆ ಇಲಾಖೆಯಲ್ಲಿನ ಐಆರ್‍ಸಿಟಿಸಿ ಸಿಸ್ಟಮ್‍ನಲ್ಲಿ ತುಂಬಾ ಲೋಪದೋಷಗಳಿವೆ. ಇದನ್ನು ಸರಿಪಡಿಸುವುದು ಅಷ್ಟು ಸುಲಭವಲ್ಲ. ಹ್ಯಾಕ್ ಆಗಿರುವ ರೈಲ್ವೆಯ ಸಾಫ್ಟ್‍ವೇರ್ ಮತ್ತು ಇತರ ಸಿಸ್ಟಮ್‍ಗಳನ್ನು ನಾನು ಸರಿಪಡಿಸಿ ಸಂಪೂರ್ಣ ಭದ್ರತೆ ಒದಗಿಸುತ್ತೇನೆ. ಇದಕ್ಕಾಗಿ ನೀವು ನನಗೆ ತಿಂಗಳಿಗೆ 2 ಲಕ್ಷ ರೂ.ಗಳ ಶುಲ್ಕವನ್ನು ಪಾವತಿಸಬೇಕೆಂದು ಆಗ್ರಹಿಸಿದ್ದಾನೆ.

ಈ ಕುರಿತು ವಾಟ್ಸಾಪ್ ಬ್ರಾಡ್‍ಕಾಸ್ಟರ್‍ನಲ್ಲಿ ಸರಣಿ ಸಂದೇಶಗಳನ್ನು ಕಳುಹಿಸಿರುವ ಆಶ್ರಫ್, ನನ್ನನ್ನು ಅಥವಾ ಇನ್ನೂ ಕೆಲವರನ್ನು ನೀವು ಬಂಧಿಸಬಹುದು. ಆದರೆ ಇದು ಇಷ್ಟಕ್ಕೆ ನಿಲ್ಲುವುದಿಲ್ಲ. ನಿಮ್ಮ ಇಲಾಖೆಯಲ್ಲಿರುವ ಸಾಕಷ್ಟು ಲೋಪದೋಷಗಳನ್ನು ದುರುಪಯೋಗ ಮಾಡಿಕೊಂಡು ಬೇರೆ ಮಂದಿ ಹ್ಯಾಕ್ ಮಾಡುವ ಸಾಧ್ಯತೆ ಇದೆ ಎಂದು ಆತ ದುಬೈನಿಂದಲೇ ಎಚ್ಚರಿಕೆ ನೀಡಿದ್ದಾನೆ.

ಹ್ಯಾಕ್ ಆದ ನಂತರ ರೈಲ್ವೆಯ ಕೆಲವು ಸಾಫ್ಟ್‍ವೇರ್‍ಗಳು ಮತ್ತು ಸಿಸ್ಟಮ್‍ಗಳನ್ನು ಸರಿಪಡಿಸಲು ಇಲಾಖೆಯ ಸಿಬ್ಬಂದಿ ಹೆಣಗಾಡುತ್ತಿರುವುದು ಇಲ್ಲಿ ಉಲ್ಲೇಖ.  ಮತ್ತೊಂದು ಆಘಾತಕಾರಿ ಸಂಗತಿ ಎಂದರೆ ಈ ವ್ಯವಸ್ಥಿತ ವಂಚನೆ ಜಾಲದ ಬೇರುಗಳು ದುಬೈ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಬೇರುಬಿಟ್ಟಿರುವುದು ಕಂಡುಬಂದಿದೆ.

ಬಹುಕೋಟಿ ರೂ.ಗಳ ಇ-ಟಿಕೆಟಿಂಗ್ ವಂಚನೆ ಜಾಲದಲ್ಲಿ ಇನ್ನೂ ಅನೇಕರು ಶಾಮೀಲಾಗಿರುವ ಸಾಧ್ಯತೆ ಇದ್ದು, ತನಿಖೆ ಮತ್ತಷ್ಟು ತೀವ್ರಗೊಂಡಿದೆ ರೈಲ್ವೆ ವೆಬ್‍ಸೈಟ್‍ನನ್ನು ಹ್ಯಾಕ್ ಮಾಡಿ ಇಲಾಖೆಯ ಟಕೆಟ್ ಬುಕ್ಕಿಂಗ್ ಸಾಫ್ಟ್‍ವೇರ್‍ನನ್ನು ನಕಲಿ ಮಾಡಿ ಈವರೆಗೆ ಕೋಟ್ಯಂತರ ರೂ.ಗಳನ್ಜು ವಂಚಿಸಲಾಗಿದೆ. ಈ ಜಾಲದ ಬೇರುಗಳು ದುಬೈ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ ಇರುವುದು ದೃಢಪಟ್ಟಿದೆ.

ಇ-ಟಿಕೆಟ್ ರಾಕೆಟ್‍ನ ಕಿಂಗ್‍ಪಿನ್ ಹಮೀದ್ ಅಶ್ರಫ್‍ನನ್ನು ಸಿಬಿಐ ಈ ಹಿಂದೆ ಬಂಧಿಸಿತ್ತು. ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ ನಿವಾಸಿಯಾದ ಈತ ಈಗ ದುಬೈನಲ್ಲಿ ತಲೆಮರೆಸಿಕೊಂಡಿದ್ದಾನೆ. ಈತ ಸಾಫ್ಟ್‍ವೇರ್ ಅಭಿವೃದ್ದಿಯಲ್ಲಿ ಪರಿಣಿತ. 2019ರಲ್ಲಿ ಗೋಂಡಾ ಪ್ರದೇಶದಲ್ಲಿ ನಡೆದ ಬಾಂಬ್ ದಾಳಿಯಲ್ಲಿಯೂ ಹಮೀದ್ ಕೈವಾಡ ಇದೆ ಎಂದು ರೈಲ್ವೆ ಸುರಕ್ಷತಾ ದಳದ ಡಿಜಿ ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಬಂಧಿತನಾದ ಮತ್ತೊಬ್ಬ ಆರೋಪಿ ಗುಲಾಂ ಮುಸ್ತಾಫ(26) ಕೂಡ ಸಾಫ್ಟ್‍ವೇರ್ ಡೆವಲಪರ್. ಈ ಗ್ಯಾಂಗ್‍ನವರು ನಕಲಿ ಸಾಫ್ಟ್‍ವೇರ್ ಅಭಿವೃದ್ದಿ ಮೂಲಕ ತಿಂಗಳಿಗೆ ಅಕ್ರಮವಾಗಿ 15 ಕೋಟಿ ರೂ.ಗಳನ್ನು ಸಂಪಾದಿಸುತ್ತಿದ್ದರು.

Facebook Comments