ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ, 3 ದಿನ ರಾಜ್ಯದ ಹಲವೆಡೆ ಮಳೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.20-ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ರಾಜ್ಯದ ಹಲವೆಡೆ ಉತ್ತಮ ಮಳೆಯಾಗುತ್ತಿದ್ದು, ಇನ್ನೂ ಮೂರು ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸರೆಡ್ಡಿ ತಿಳಿಸಿದರು.

ಈ ಸಂಜೆಯೊಂದಿಗೆ ಮಾತನಾಡಿದ ಅವರು, ಕರಾವಳಿ ಭಾಗದಲ್ಲಿ ಹೆಚ್ಚು ಮಳೆಯಾಗುತ್ತಿದೆ. ಆದರೆ ಮಲೆನಾಡು ಭಾಗದಲ್ಲಿ ನಿರೀಕ್ಷಿತ ಮಳೆಯಾಗುತ್ತಿಲ್ಲ. ವಾಯುಭಾರ ಕುಸಿತದ ಜೊತೆಗೆ ಕರಾವಳಿ ಭಾಗದಲ್ಲೂ ಟ್ರಪ್(ದಟ್ಟೈಸಿರುವ ಮೋಡ)ನಿಂದಾಗಿ ಹೆಚ್ಚು ಮಳೆಯಾಗುತ್ತಿದೆ. ಕೊಡಗು ಹಾಗೂ ಮಲೆನಾಡು ಭಾಗದಲ್ಲಿ ನಿರೀಕ್ಷೆಯಂತೆ ಹೆಚ್ಚು ಮಳೆಯಾಗುತ್ತಿಲ್ಲ.

ರಾಜ್ಯದಲ್ಲಿ ಮೋಡದ ಚಲನೆಗಳು ಚೆನ್ನಾಗಿದ್ದು, ಉತ್ತರ ಒಳನಾಡಿನ ಕೆಲವು ಭಾಗಗಳಲ್ಲೂ ಮಳೆಯಾಗುತ್ತಿದೆ. ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಅಲ್ಲಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುತ್ತಿದೆ. ಆದರೆ ಭಾರಿ ಮಳೆಯಾಗುವ ನಿರೀಕ್ಷೆ ಇಲ್ಲ ಎಂದರು.

ಮುಂಗಾರು ಆರಂಭದಿಂದಲೂ ಕಣ್ಣಾ ಮುಚ್ಚಾಲೆ ಆಟ ಆಡುತ್ತಾ ಬಂದಿದ್ದು, ನಿನ್ನೆಯವರೆಗೆ ರಾಜ್ಯದಲ್ಲಿ ಶೇ.22ರಷ್ಟು ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಇಂದು ಮತ್ತು ನಾಳೆ ವಾತಾವರಣದಲ್ಲಿ ಬದಲಾವಣೆ ಯಾಗುವ ಸಾಧ್ಯತೆಗಳಿದ್ದು, ಆ ನಂತರ ಮಳೆ ಹೆಚ್ಚಾಗಲಿದೆಯೇ ಅಥವಾ ಕಡಿಮೆಯಾಗಲಿದೆಯೇ ಎಂಬುದು ಗೊತ್ತಾಗಲಿದೆ ಎಂದು ಅವರು ತಿಳಿಸಿದರು.

Facebook Comments