ದಕ್ಷಿಣ ಭಾರತ ಆಯ್ತು, ಈಗ ಉತ್ತರದತ್ತ ವರುಣನ ವಕ್ರ ದೃಷ್ಟಿ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಆ.16-ಕರ್ನಾಟಕ, ಕೇರಳ ಮತ್ತು ಮಹಾರಾಷ್ಟ್ರದಲ್ಲಿ 250ಕ್ಕೂ ಹೆಚ್ಚು ಜನರನ್ನು ಬಲಿ ಪಡೆದು, ಕೋಟ್ಯಂತರ ರೂ.ಗಳ ಅಪಾಯ ನಷ್ಟಕ್ಕೆ ಕಾರಣವಾದ ಭಾರೀ ಮಳೆ ಮತ್ತು ಭೀಕರ ಪ್ರವಾಹ ಈಗ ಉತ್ತರ ಭಾರತದ ಮೇಲೆ ತನ್ನ ಪ್ರಕೋಪಕ್ಕೆ ಸಜ್ಜಾಗಿದೆ.

ಮುಂದಿನ ಎರಡು ದಿನಗಳಲ್ಲಿ ಉತ್ತರ ಭಾರತದ ಅನೇಕ ರಾಜ್ಯಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಮುನ್ಸೂಚನೆ ನೀಡಿದೆ. ಈ ನ್ನೆಲೆಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದ್ದು, ಜಲ ಗಂಡಾಂತರದ ಪರಿಸ್ಥಿತಿ ಎದುರಿಸಲು ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಆಗಸ್ಟ್ 20ರವರೆಗೆ ರಾಜಸ್ತಾನ, ಮಧ್ಯಪ್ರದೇಶ, ಉತ್ತರಪ್ರದೇಶ, ಪಂಜಾಬ್, ಹರಿಯಾಣ, ಚಂಡೀಗಢ ಮತ್ತು ನವದೆಹಲಿ, ಪೂರ್ವ ಸೇರಿದಂತೆ ಉತ್ತರ ಭಾರತದ ಹಲವೆಡೆ ಮುಂದಿನ ಎರಡು ದಿನಗಳಲ್ಲಿ(48 ರಿಂದ 72 ಗಂಟೆಗಳಲ್ಲಿ) ಭಾರೀ ಮಳೆಯಾಗಲಿದೆ ಎಂದು ಐಎಂಡಿ ಮುನ್ನೆಚ್ಚರಿಕೆ ನೀಡಿದೆ.

ದೇಶದ ಉತ್ತರ ಭಾಗವಲ್ಲದೇ ಈಶಾನ್ಯ ಭಾರತ ಮತ್ತು ಹಿಮಾಲಯ ಪ್ರಾಂತ್ಯಗಳಲ್ಲೂ ಮುಂದಿನ ಎರಡು ಮೂರು ದಿನಗಳಲ್ಲಿ ಧಾರಾಕಾರ ಮಳೆ ಸುರಿಯಲಿದೆ. ಪಶ್ಚಿಮ ಬಂಗಾಳ, ಸಿಕ್ಕಿಂ, ಅಸ್ಸಾಂ ಮತ್ತು ಮೇಘಾಲಯಗಳಲ್ಲಿ ಮಳೆ ಆರ್ಭಟ ಅತ್ಯಂತ ಬಿರುಸಾಗಿರಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.

ಈ ಮಧ್ಯೆ, ಮಧ್ಯಪ್ರದೇಶ, ರಾಜಸ್ತಾನ, ಗೋವಾ, ಕರ್ನಾಟಕ, ಮಹಾರಾಷ್ಟ್ರ, ನಾಗಾಲ್ಯಾಂಡ್, ಮಣಿಪುರ, ಮಿಜೀರಾಂ, ತ್ರಿಪುರ, ಗುಜರಾತ್, ಪಶ್ಚಿಮ ಬಂಗಾಳ. ಸಿಕ್ಕಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಪಂಜಾಬ್, ಉತ್ತರಖಂಡ, ಉತ್ತರಪ್ರದೇಶ, ಬಿಹಾರ, ಅಸ್ಸಾಂ, ಮೇಘಾಲಯ, ಅರುಣಾಚಲ ಪ್ರದೇಶ, ಕೇರಳ ಮತ್ತು ಮಾಚಲ ಪ್ರದೇಶದ ಹಲವೆಡೆ ನಿನ್ನೆ ಗುಡುಗು ಸಹಿತ ಭಾರೀ ಮಳೆಯಾಗಿದೆ.

ಭಾರೀ ಮಳೆ, ಭೀಕರ ಪ್ರವಾಹ ಮತ್ತು ಭೂಕುಸಿತಗಳಿಂದ ಕೇರಳದ ಹಲವಡೆ ಮೃತರ ಸಂಖ್ಯೆ 114ಕ್ಕೇರಿದೆ ಎಂದು ರಾಜ್ಯ ಪತ್ತು ನಿರ್ವಹಣಾ ಪ್ರಾಧಿಕಾರ(ಕೆಎಸ್‍ಡಿಎಂಎ) ತಿಳಿಸಿದೆ.

ಕರ್ನಾಟಕದಲ್ಲಿ ವಿನಾಶಕಾರಿ ಪ್ರಕೃತಿ ವಿಕೋಪದಲ್ಲಿ ಮೃತರ ಸಂಖ್ಯೆ 62ಕ್ಕೇರಿದೆ ಎಂದು ರಾಜ್ಯ ಪತ್ತು ನಿರ್ವಹಣಾ ಪ್ರಾಧಿಕಾರ(ಕೆಎಸ್‍ಡಿಎಂಎ)ಅಂಕಿ ಅಂಶ ನೀಡಿದೆ.  ಇನ್ನು ಮಹಾರಾಷ್ಟ್ರದಲ್ಲಿ ಭಾರೀ ಮಳೆ ಮತ್ತು ನೆರೆ ಹಾವಳಿಯಿಂದ 50ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ.

Facebook Comments

Sri Raghav

Admin