ರಾಜ್ಯದಲ್ಲಿ ಇನ್ನು ಮೂರು ದಿನ ಮುಂದುವರೆಯಲಿದೆ ಮಳೆ..!
ಬೆಂಗಳೂರು,ಅ.24- ಕಳೆದ ಎರಡು ವಾರಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆ ನಿನ್ನೆಯೂ ಮುಂದುವರೆದಿದ್ದು, ಚಿಕ್ಕಬಳ್ಳಾಪುರ, ತುಮಕೂರು ಸೇರಿದಂತೆ ಹಲವು ಕಡೆಗಳಲ್ಲಿ ಭಾರೀ ಮಳೆಯಾಗಿದೆ.ಹವಾ ಮುನ್ಸೂಚನೆ ಪ್ರಕಾರ ಇನ್ನು ಮೂರು ದಿನಗಳ ಕಾಲ ಮಳೆ ಮುಂದುವರೆಯುವ ಮುನ್ಸೂಚನೆಗಳಿವೆ. ಬಂಗಾಳಕೊಲ್ಲಿ ಹಾಗೂ ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿನಿಂದ ಮೋಡಗಳ ಸಾಂದ್ರತೆ ಹೆಚ್ಚಾಗಿದ್ದು, ರಾಜ್ಯದ ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಮಳೆ ಮುಂದುವರೆದಿದೆ ಎಂದು ಕರ್ನಾಟಕ ರಾಜ್ಯ ವಿಕೋಪ ಉಸ್ತುವಾರಿ ಕೇಂದ್ರದ ನಿವೃತ್ತ ನಿರ್ದೇಶಕ ಡಾ.ಜಿ.ಎಸ್. ಶ್ರೀನಿವಾಸ್ ರೆಡ್ಡಿ ತಿಳಿಸಿದರು.
ನೈರುತ್ಯ ಮುಂಗಾರು ಮರಳುವಿಕೆ ಹಾಗೂ ಈಶಾನ್ಯ ಹಿಂಗಾರು ಪ್ರಾರಂಭದ ಪ್ರಕ್ರಿಯೆಗಳಿಂದಾಗಿ ಕಳೆದ ಎಂಟತ್ತು ದಿನಗಳಿಂದ ಉತ್ತಮ ಮಳೆಯಾಗಿದೆ. ನಿನ್ನೆ ಹಾಗೂ ಕಳೆದ ರಾತ್ರಿ ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಗದಗ, ಬಾಗಲಕೋಟೆ, ಬಳ್ಳಾರಿ, ವಿಜಯನಗರ, ಕೊಪ್ಪಳ, ಮೈಸೂರು, ಚಾಮರಾಜನಗರ, ಬೆಂಗಳೂರು, ಬೆಂಗಳೂರು ಗ್ರಾಮಾಂತರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯಾಗಿದೆ.
ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳ ಹಲವು ಕಡೆಗಳಲ್ಲಿ ಭಾರೀ ಮಳೆಯಾಗಿದೆ. ಚಿಕ್ಕಬಳ್ಳಾಪುರ, ಗೌರಿಬಿದನೂರು, ಕೊಲಾರ, ಶಿರಾ, ತಿಪಟೂರು, ಕೂಡ್ಲಗಿ, ತೀನರಸಿಪುರ, ಮೈಸೂರು, ಎಳಂದೂರು, ತುಮಕೂರು ಮಧುಗಿರಿ, ಚಿತ್ರದುರ್ಗ, ನಾಗಮಂಗಲ, ಗುಬ್ಬಿ, ಬೆಂಗಳೂರು ಉತ್ತರ ಮತ್ತು ಪೂರ್ವ ತಾಲ್ಲೂಕಿನಲ್ಲಿ ಉತ್ತಮ ಮಳೆಯಾದ ವರದಿಯಾಗಿದೆ.
ಮೇಲ್ಮೈ ಸುಳಿ ಗಾಳಿ ಉಂಟಾಗಿರುವ ಪರಿಣಾಮ ಮೋಡಗಳ ಚಲನೆ ಹೆಚ್ಚಾಗಿದೆ. ಅಲ್ಲದೆ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿದ್ದು, ಸಂಜೆ ಹಾಗೂ ರಾತ್ರಿ ವೇಳೆ ಮಳೆಯಾಗಲಿದೆ.ಕೆಲವೆಡೆ ಗುಡುವು ಮಿಂಚಿನ ಕೂಡಿದ ಸುರಿ ಮಳೆಯಾಗಲಿದೆ. ನೈರುತ್ಯ ಮುಂಗಾರು ಮರಳುವಿಕೆ ಈ ಬಾರಿ ಸಾಕಷ್ಟು ವಿಳಂಬವಾಯಿತು. ಆದರೂ ಈ ಅವಯಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗಿದೆ. ಅಕ್ಟೋಬರ್ನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ.
ಇನ್ನೆರಡು ದಿನಗಳಲ್ಲಿ ಮುಂಗಾರು ಮರಳುವಿಕೆ ಪ್ರಕ್ರಿಯೆ ಪೂರ್ಣಗೊಂಡು ಈಶಾನ್ಯ ಹಿಂಗಾರು ಆರಂಭವಾಗಲಿದೆ. ಈಗಾಗಲೇ ಹಿಂಗಾರು ಮಳೆಯ ಆರಂಭಕ್ಕೆ ಬೇಕಾದ ಪೂರಕ ವಾತಾವರಣ ಸೃಷ್ಟಿಯಾಗುತ್ತಿದೆ. ಹಿಂಗಾರು ಆರಂಭದಲ್ಲೇ ಹೆಚ್ಚು ಮಳೆಯಾಗುವ ಮುನ್ಸೂಚನೆಗಳು ಕಂಡುಬರುತ್ತಿವೆ ಎಂದು ಶ್ರೀನಿವಾಸ್ ರೆಡ್ಡಿ ತಿಳಿಸಿದರು.