ಭಾರೀ ಮಳೆಗೆ ಮಲೆನಾಡು ತತ್ತರ, ಕೆಸರಿನಲ್ಲಿ ಸಿಲುಕಿದ ಬಸ್, ಗುಡ್ಡ ಕುಸಿತ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.13- ಮಲೆನಾಡಿನಾದ್ಯಂತ ಮಳೆ ಮುಂದುವರೆದಿದ್ದು, ಕೆಲವೆಡೆ ದಿಬ್ಬ ಕುಸಿತ, ತಗ್ಗುಪ್ರದೇಶಗಳು ಜಲಾವೃತಗೊಂಡಿರುವ ನಡುವೆ ಕೆಸರುಗದ್ದೆಯಾದ ರಸ್ತೆಯಲ್ಲಿ ಶಾಲಾ ಬಸ್ ಸಿಲುಕಿ ವಿದ್ಯಾರ್ಥಿಗಳು ಪರದಾಡಿದ ಪರಿಸ್ಥಿತಿಯೂ ಎದುರಾಯಿತು.

ಕಳಸಾದ ಎಸ್‍ಕೆಮೇರು ಗ್ರಾಮದ ಬಳಿ ಶಾಲೆಗೆ ತೆರಳುತ್ತಿದ್ದ ಬಸ್ಸೊಂದು ಕೆಸರು ತುಂಬಿದ್ದ ರಸ್ತೆಯಲ್ಲಿ ಹೂತಿಕೊಂಡಿದ್ದರಿಂದ ಶಾಲೆಗೆ ತೆರಳಲಾಗದೆ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ತೊಂದರೆಗೆ ಸಿಲುಕಿದರು.

ಪ್ರತಿನಿತ್ಯ ಕೆಸರು ತುಂಬಿದ ರಸ್ತೆಯಲ್ಲಿ ಚಲಿಸಬೇಕಾದ ಬಸ್‍ಗಳು ಭಾರೀ ಮಳೆಯಿಂದಾಗಿ ಮತ್ತಷ್ಟು ಹದಗೆಟ್ಟಿರುವುದರಿಂದ ರಸ್ತೆ ಮಧ್ಯೆಯೇ ಸಿಲುಕಿಕೊಂಡಿತ್ತು.
ವಿದ್ಯಾರ್ಥಿಗಳು ಇತ್ತ ಶಾಲೆಗೂ ತೆರಳಲಾಗದೆ ತೊಂದರೆ ಅನುಭವಿಸುವಂತಾಯಿತು.

ಗುಡ್ಡ ಕುಸಿತ: ಮಂಗಳೂರಿನಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಮಣ್ಣು ದಿಬ್ಬವೊಂದು ಕುಸಿದು ಸಮೀಪದ ತಗ್ಗುಪ್ರದೇಶಗಳು ಜಲಾವೃತಗೊಂಡಿವೆ. ಬಲ್ಮಠ ಸಮೀಪದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಬಳಿ ಬೃಹತ್ ಮಣ್ಣು ಗುಡ್ಡವೊಂದು ಕುಸಿದುಬಿದ್ದಿದೆ.

ಅದೃಷ್ಟವಶಾತ್ ಯಾವುದೇ ಅಪಾಯವಾಗಿಲ್ಲ. ಸಮೀಪದ ಮನೆಯ ಕಾಂಪೌಂಡ್ ಗುಡ್ಡದಡಿ ಸಿಲುಕಿದ್ದು, ಮನೆಗೆ ಯಾವುದೇ ಹಾನಿಯಾಗಿಲ್ಲ.
ಗುಡ್ಡ ಕುಸಿದಿರುವ ಹಿನ್ನೆಲೆಯಲ್ಲಿ ಮಳೆಯ ನೀರು ಪ್ರವಾಹದಂತೆ ತಗ್ಗುಪ್ರದೇಶಗಳಿಗೆ ನುಗ್ಗುತ್ತಿದ್ದು, ಸುತ್ತಮುತ್ತಲ ಪ್ರದೇಶಗಳೆಲ್ಲ ಜಲಾವೃತಗೊಂಡಿವೆ.ಹಲವು ಮನೆಗಳಿಗೂ ಸಹ ನೀರು ನುಗ್ಗಿದ್ದರಿಂದ ಜನ ಆತಂಕದಲ್ಲಿ ದಿನ ದೂಡುವಂತಾಗಿದೆ. ಬಿರು ಬೇಸಿಗೆಯಿಂದ ತಲ್ಲಣಿಸಿದ್ದ ಜನ ವರ್ಷಧಾರೆಯಿಂದ ಹರ್ಷ ಪಡುವಷ್ಟರಲ್ಲಿ ಮಳೆಯ ಅಬ್ಬರಕ್ಕೆ ಸಿಲುಕಿ ತತ್ತರಿಸುವಂತಾಗಿದೆ.

Facebook Comments