ಬೆಂಗಳೂರಲ್ಲೂ ವರುಣನ ಆರ್ಭಟ, ಕೆಲ ತಗ್ಗುಪ್ರದೇಶಗಳಿಗೆ ನುಗ್ಗಿದ ನೀರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.19-ಮುತ್ತಿನ ನಗರಿ ಹೈದ್ರಾಬಾದ್‍ನ್ನು ಇನ್ನಿಲ್ಲದಂತೆ ಕಾಡಿರುವ ಮಳೆರಾಯ ಇದೀಗ ಸಿಲಿಕಾನ್ ಸಿಟಿ ಬೆಂಗಳೂರನ್ನು ಬೆಚ್ಚಿ ಬೀಳಿಸುವಂತೆ ಮಾಡಿದ್ದಾನೆ. ನಿನ್ನೆ ಮಧ್ಯರಾತ್ರಿ ಸುರಿದ ಧಾರಾಕಾರ ಮಳೆಗೆ ಇಡೀ ನಗರ ತತ್ತರಿಸಿಹೋಗಿದೆ.

ತಗ್ಗುಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದ್ದರೆ, ಬಹುತೇಕ ರಸ್ತೆಗಳು ಕೆರೆಗಳಂತಾಗಿ ಪರಿಣಮಿಸಿತ್ತು. ವಾಹನ ಸವಾರರು ಮನೆಗಳಿಗೆ ತೆರಳಲು ರಾತ್ರಿಯಿಡಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೆಲ ಪ್ರದೇಶಗಳಲ್ಲಿ ಹಲವಾರು ಮರಗಳು ಧರೆಗುರುಳಿ ಬಿದ್ದಿದ್ದವು. ಮೇಲ್ಸೆತುವೆಗಳಲ್ಲಿ ಆಳುದ್ದ ನೀರು ನಿಂತಿತ್ತು. ರಾತ್ರಿಯಿಡಿ ಸುರಿದ ಮಳೆಗೆ ಮಲ್ಲತಹಳ್ಳಿ ಸಮೀಪದ ಕದಂಬ ಬಡಾವಣೆ ಸಂಪೂರ್ಣ ಜಲಾವೃತಗೊಂಡಿತ್ತು.

ಬಡಾವಣೆಯ ಬಹುತೇಕ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಅಲ್ಲಿನ ನಿವಾಸಿಗಳು ರಾತ್ರಿಯಿಡಿ ಜಾಗರಣೆ ನಡೆಸುವಂತಾಯಿತು. ಮನೆಗಳಿಗೆ ನೀರು ನುಗ್ಗಿ ಆವಾಂತರ ಸೃಷ್ಟಿಸಿದ್ದರೂ ಬಿಬಿಎಂಪಿ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಪರಿಹಾರ ಕಾರ್ಯಾಚರಣೆ ಕೈಗೊಳ್ಳದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಯಿತು.

ಇನ್ನು ಮೈಸೂರು ರಸ್ತೆಯಲ್ಲಿ ನೀರು ಉಕ್ಕಿ ಹರಿಯುತ್ತಿದ್ದ ಪರಿಣಾಮ ವಾಹನ ಸವಾರರಿಗೆ ರಸ್ತೆ ಕಾಣದೆ ಪರದಾಡಿದರು.ಅಕ್ಕಪಕ್ಕದ ರಾಜಕಾಲುವೆಗಳು ತುಂಬಿದ ಪರಿಣಾಮ ಮೋರಿ ನೀರೆಲ್ಲಾ ರಸ್ತೆಗೆ ಹರಿದು ಆವಾಂತರ ಸೃಷ್ಟಿಯಾಯಿತು. ರಾಜರಾಜೇಶ್ವರಿ ನಗರದ ಆರ್ಚ್ ರಸ್ತೆ ನೀರಿನಿಂದ ಮುಳುಗಿ ಹೋಗಿತ್ತು. ಸಂಚಾರಿ ಪೆÇಲೀಸರು ರಸ್ತೆ ಮೇಲಿನ ನೀರನ್ನು ಹೊರ ಹಾಕುವಲ್ಲಿ ಹೈರಾಣಾಗಿ ಹೋದರು.

ಮಾರುಕಟ್ಟೆ, ಶಾಂತಿನಗರ, ಆರ್.ಆರ್.ನಗರ, ಕೋರಮಂಗಲ, ಮೆಜೆಸ್ಟಿಕ್, ವಿಜಯನಗರ, ಜಯನಗರ, ರಾಜಾಜಿನಗರ ಮತ್ತಿತರ ಪ್ರದೇಶಗಳಲ್ಲೂ ಭಾರಿ ಮಳೆಯಾಗಿದೆ.ಇಂದು ಬೆಳಿಗ್ಗೆಯೂ ಮಳೆ ಮುಂದುವರೆದ ಹಿನ್ನಲೆಯಲ್ಲಿ ಕೆಲಸ ಕಾರ್ಯಗಳಿಗೆ ತೆರಳಲು ನಾಗರೀಕರು ಪರದಾಡಿದರು. ಜಯನಗರ ಸುತ್ತಮುತ್ತಲ ಪ್ರದೇಶಗಳಲ್ಲಿ ಹಲವಾರು ಮರಗಳು ಧರೆಗುರುಳಿ ಬಿದ್ದಿದ್ದವು. ವಾಯಭಾರ ಕುಸಿತದ ಹಿನ್ನಲೆಯಲ್ಲಿ ನಗರದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸುವ ಅಗತ್ಯವಿದೆ.

Facebook Comments