ರಾಜ್ಯದಲ್ಲಿ ಇಂದು ಮತ್ತು ನಾಳೆ ಮಳೆ ಸಂಭವ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.12-ಕಳೆದ ನಾಲ್ಕೈದು ದಿನಗಳಿಂದ ಬಿಡುವು ನೀಡಿದ್ದ ಮಳೆ ಮತ್ತೆ ಆರಂಭವಾಗಲಿದೆ. ಈಶಾನ್ಯ ಹಿಂಗಾರು ಚುರುಕಾಗಿರುವುದರಿಂದ ರಾಜ್ಯದಲ್ಲಿ ಎರಡು ದಿನ ಮಳೆಯಾಗಲಿದೆ.  ಬಂಗಾಳ ಕೊಲ್ಲಿಯಲ್ಲಿ ಮೈಲ್ಮೈ ಸುಳಿಗಾಳಿ ಉಂಟಾಗಿರುವುದರಿಂದ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿದ್ದು, ಇಂದು ಮತ್ತು ನಾಳೆ ಮಳೆಯಾಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿವೃತ್ತ ನಿರ್ದೇಶಕ ಡಾ. ಜಿ.ಎಸ್.ಶ್ರೀನಿವಾಸರೆಡ್ಡಿ ತಿಳಿಸಿದರು.

ಈಶಾನ್ಯ ಕಡೆಯಿಂದ ಆರಂಭವಾಗಿರುವ ಮಾರುತಗಳು ಹೆಚ್ಚು ತೇವಾಂಶದಿಂದ ಕೂಡಿರುವುದರಿಂದ ತಂಪಾದ ವಾತಾವರಣ ಕಂಡು ಬರುತ್ತಿದೆ. ಇದರಿಂದ ಭಾಗಶಃ ಮೋಡ ಕವಿದ ವಾತಾವರಣವಿರಲಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ. ಅಲ್ಲದೆ, ದೀಪಾವಳಿಯ ನಂತರ ಮತ್ತೊಂದು ಸುತ್ತಿನ ಮಳೆ ಬರುವ ಮುನ್ಸೂಚನೆಗಳಿವೆ.ನ.17, 18ರಂದು ಮತ್ತೆರಡು ದಿನ ಮಳೆ ಬರುವ ಲಕ್ಷಣಗಳಿವೆ ಎಂದು ಹೇಳಿದರು.

ನಾಳೆಯವರೆಗೆ ರಾಜ್ಯದ ದಕ್ಷಿಣ ಒಳನಾಡು, ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಕೆಲವೆಡೆ ಹೆಚ್ಚಿನ ಪ್ರಮಾಣದ ಮಳೆಯಾಗಬಹುದು ಎಂದರು. ಮುಂಗಾರು ಹಂಗಾಮಿನ ವಿವಿಧ ಬೆಳೆ ಕೊಯ್ಲನ್ನು ಆರಂಭಿಸಿದ್ದು, ಮಳೆ ಬಂದರೆ ಫಸಲಿಗೆ ಹಾನಿಯಾಗಲಿದೆ ಎಂಬ ಆತಂಕದಲ್ಲಿ ರೈತರಿದ್ದಾರೆ.

ಕೊಯ್ಲಿನ ಸಂದರ್ಭದಲ್ಲಿ ಮಳೆಯಾದರೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುತ್ತದೆ. ಅಂದರೆ, ರಾಗಿ, ಭತ್ತ ಮೊದಲಾದ ಬೆಳೆಗಳ ಫಸಲು ಹಾನಿಗೀಡಾಗಿ ರೈತರಿಗೆ ನಷ್ಟ ಉಂಟಾಗುತ್ತದೆ. ಆದರೆ, ಹಿಂಗಾರು ಹಂಗಾಮಿನ ಬೆಳೆಗಳ ಬಿತ್ತನೆ ಕಾರ್ಯಕ್ಕೆ ಅನುಕೂಲವಾಗಲಿದೆ. ಹೀಗಾಗಿ ಹಿಂಗಾರು ಮಳೆಯಿಂದ ರೈತರಿಗೆ ಹಾನಿ ಹಾಗೂ ಅನುಕೂಲ ಎರಡೂ ಉಂಟಾಗಲಿದೆ.

Facebook Comments