ನಿವಾರ್ ಬೆನ್ನಲ್ಲೇ ಮತ್ತೊಂದು ಚಂಡಮಾರುತ : ರಾಜ್ಯದಲ್ಲಿ ಮತ್ತೆ ಮಳೆ ನಿರೀಕ್ಷೆ..!
ಬೆಂಗಳೂರು, ಡಿ. 1- ನಿವಾರ್ ಚಂಡಮಾರುತದ ಬೆನ್ನಲ್ಲೇ ಬಂಗಾಳಕೊಲ್ಲಿಯಲ್ಲಿ ಮತ್ತೊಂದು ಚಂಡಮಾರುತ ಉಂಟಾಗಿದ್ದು, ಇದರ ಪರಿಣಾಮ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮೋಡಕವಿದ ವಾತಾವರಣ ಕಂಡು ಬಂದಿದ್ದು, ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ. ಚಂಡಮಾರುತದ ಪರಿಣಾಮದಿಂದಾಗಿ ಚಾಮರಾಜನಗರ, ಮೈಸೂರು ಭಾಗದ ಕೆಲವು ಕಡೆ ಮುಂದಿನ ಎರಡು ದಿನಗಳ ಕಾಲ ಸಾಧಾರಣ ಮಳೆಯಾಗುವ ಸಂಭವವಿದೆ.
ಶ್ರೀಲಂಕಾ ಬಳಿ ಚಂಡಮಾರುತ ಕೇಂದ್ರೀಕೃತವಾಗಿದ್ದು, ಅದರ ಪರಿಣಾಮ ರಾಜ್ಯದ ಮೇಲೆ ಹೆಚ್ಚಿನ ರೀತಿ ಉಂಟಾಗುವುದಿಲ್ಲ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿವೃತ ನಿರ್ದೇಶಕ ವಿ.ಎಸ್.ಪ್ರಕಾಶ್ ತಿಳಿಸಿದರು. ಬಂಗಾಳಕೊಲ್ಲಿಯಲ್ಲಿ ಉಂಟಾಗಿದ್ದ ವಾಯುಭಾರ ಕುಸಿತ ಚಂಡಮಾರುತವಾಗಿ ಮಾರ್ಪಾಡಾಗಿದೆ.
ಅದು ಶ್ರೀಲಂಕಾದಲ್ಲಿ ಭೂಸ್ಪರ್ಶವಾಗಲಿದೆ. ಇದರಿಂದ ರಾಜ್ಯದ ಮೇಲೆ ಹೆಚ್ಚಿನ ಪರಿಣಾಮ ಉಂಟಾಗುವುದಿಲ್ಲ . ಆದರೆ , ಮೋಡಕವಿದ ವಾತಾವರಣ ಕಂಡು ಬರಲಿದ್ದು, ಡಿ.3ರವರೆಗೂ ಮುಂದುವರೆಯಲಿದೆ. ದಕ್ಷಿಣ ಒಳನಾಡಿನ ಕೆಲವೆಡೆ ತುಂತುರು ಮಳೆಯಾಗಬಹದು ಅಷ್ಟೇ. ಆದರೆ, ಭಾರೀ ಮಳೆಯಾಗುವ ಮುನ್ಸೂಚನೆಗಳು ಸದ್ಯಕ್ಕೆ ಕಂಡುಬರುತ್ತಿಲ್ಲ ಎಂದು ಅವರು ಹೇಳಿದರು.
ಡಿಸೆಂಬರ್ ಮೊದಲ ವಾರದಲ್ಲಿ ವಾಯುಭಾರ ಕುಸಿತದಿಂದ ಮಳೆಯಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಅದು ಚಂಡಮಾರುತವಾಗಿದೆ. ಚಂಡಮಾರುತ ಸಾಗುವ ಪಥದಲ್ಲಿ ನಮ್ಮ ರಾಜ್ಯ ಬರುವುದಿಲ್ಲ. ಸಾಕಷ್ಟು ದೂರವಿರುವುದರಿಂದ ಹೆಚ್ಚಿನ ಪರಿಣಾಮ ಉಂಟಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.