ಮತ್ತೊಂದು ಚಂಡಮಾರುತದ ಭೀತಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.23- ಕಳೆದ ಎರಡು ವಾರಗಳಿಂದ ಆರ್ಭಟಿಸಿ ಜನಜೀವನ ತತ್ತರಿಸುವಂತೆ ಮಾಡಿದ್ದ ಮಳೆ ತಗ್ಗಿದ್ದು, ಸದ್ಯಕ್ಕೆ ಬಿಡುವು ನೀಡಿದಂತಾಗಿದೆ. ಆದರೆ, ಬಂಗಾಳಕೊಲ್ಲಿಯಲ್ಲಿ ಮತ್ತೊಂದು ಚಂಡಮಾರುತ ಉಂಟಾಗುವ ಭೀತಿ ಎದುರಾಗಿದೆ. ವಾರಾಂತ್ಯಕ್ಕೆ ಮತ್ತೊಂದು ಸುತ್ತಿನ ಮಳೆ ಬರುವ ಸಾಧ್ಯತೆಗಳಿವೆ.

ಹವಾಮಾನ ಮುನ್ಸೂಚನೆ ಪ್ರಕಾರ, ಉತ್ತರ ಕರ್ನಾಟಕ ಭಾಗದ ಬಳ್ಳಾರಿ, ರಾಯಚೂರು, ಯಾದಗಿರಿ, ಹುಬ್ಬಳ್ಳಿ, ಬೆಳಗಾವಿ, ಶಿರಸಿ, ವಿಜಯಪುರ ಮೊದಲಾದ ಕಡೆಗಳಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ. ಉಳಿದಂತೆ ರಾಜ್ಯದ ಒಳನಾಡಿನಲ್ಲಿ ಒಣಹವೆ ಮುಂದುವರಿಯಲಿದ್ದು, ಬಿಸಿಲಿನ ತಾಪ ಹೆಚ್ಚಾಗಿರುತ್ತದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿವೃತ್ತ ವಿಶೇಷ ನಿರ್ದೇಶಕ ವಿ.ಎಸ್.ಪ್ರಕಾಶ್ ತಿಳಿಸಿದರು.

ಬಂಗಾಳಕೊಲ್ಲಿಯಲ್ಲಿ ಉಂಟಾಗಿದ್ದ ವಾಯುಭಾರ ಕುಸಿತ ದುರ್ಬಲಗೊಂಡಿರುವುದರಿಂದ ಮಳೆ ತಗ್ಗಿದೆ. ನ.26ರ ವರೆಗೂ ಮಳೆ ಬರುವ ಲಕ್ಷಣಗಳು ಗೋಚರಿಸುತ್ತಿಲ್ಲ. ಇಂದು ಮತ್ತು ನಾಳೆ ಒಂದೆರಡು ಕಡೆ ಮಳೆಯಾಗಬಹುದು. ಆದರೆ, ಗುರುವಾರ ಮತ್ತು ಶುಕ್ರವಾರ ಮಳೆ ಬರುವ ಯಾವುದೇ ಲಕ್ಷಣ ಗಳು ಕಾಣಿಸುತ್ತಿಲ್ಲ ಎಂದರು.

ಬಂಗಾಳಕೊಲ್ಲಿಯಲ್ಲಿ ಮತ್ತೊಂದು ಮೇಲ್ಮೈ ಸುಳಿಗಾಳಿ ಉಂಟಾಗಿದ್ದು, ನ.26ರ ನಂತರ ವಾಯುಭಾರ ಕುಸಿತವಾಗಿ ಮಾರ್ಪಡಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಆನಂತರ ಅದು ಚಂಡಮಾರುತವಾಗಿ ಪ್ರಬಲ ಸ್ವರೂಪ ತಳೆಯಲಿದೆ ಎಂದು ಹೇಳಲಾಗುತ್ತಿದೆಯಾದರೂ ಇನ್ನೂ ಅದರ ನಿರ್ದಿಷ್ಟ ಚಲನೆ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ ಎಂದರು.

ಹಾಗೊಂದು ವೇಳೆ ಚಂಡಮಾರುತ ಉಂಟಾಗಿ ತಮಿಳುನಾಡು, ಆಂಧ್ರ, ಕರಾವಳಿಯನ್ನು ಹಾದುಹೋದರೆ ಮತ್ತೆ ರಾಜ್ಯದಲ್ಲಿ ಮತ್ತೊಂದು ಸುತ್ತಿನ ಮಳೆಯನ್ನು ಎದುರಿಸಬೇಕಾಗುತ್ತದೆ. ಆ ಸಂದರ್ಭದಲ್ಲಿ ಹೆಚ್ಚಿನ ಮಳೆಯಾಗುವ ಆತಂಕ ಎದುರಾಗಲಿದೆ. ವಾಯುಭಾರ ಕುಸಿತವು ಚಂಡಮಾರುತವಾಗಿ ಪರಿವರ್ತನೆಯಾದರೂ ತಮಿಳುನಾಡು, ಆಂಧ್ರ ಪ್ರದೇಶದ ಕರಾವಳಿಯ ಬಹುದೂರದಲ್ಲಿ ಒಡಿಶಾ ಕಡೆ ಚಲಿಸಿದರೆ ಕರ್ನಾಟಕಕ್ಕೆ ಹೆಚ್ಚಿನ ತೊಂದರೆ ಉಂಟಾಗುವುದಿಲ್ಲ. ಅದಕ್ಕೆ ಶುಕ್ರವಾರದವರೆಗೂ ಕಾದು ನೋಡಬೇಕಿದೆ ಎಂದು ಹೇಳಿದರು.

ನವೆಂಬರ್‍ನಲ್ಲಿ ಕಳೆದ 40 ವರ್ಷದ ಸರಾಸರಿ ವಾಡಿಕೆ ಮಳೆಗಿಂತ ಹೆಚ್ಚಿನ ಪ್ರಮಾಣದ ಮಳೆಯಾಗಿದೆ. ವಾಯುಭಾರ ಕುಸಿತವಾಗಿದ್ದರೂ ಚಂಡಮಾರುತದ ರೀತಿಯಲ್ಲಿ ಮಳೆಯಾಗಿ ಆತಂಕ ಸೃಷ್ಟಿಸಿದೆ ಎಂದರು.

ಬೆಂಗಳೂರಿನಲ್ಲೂ ಅತ್ಯಕ ಪ್ರಮಾಣದ ಮಳೆಯಾಗಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆಯಾಗಿ ಅಪಾರ ಪ್ರಮಾಣದ ಬೆಳೆ, ಆಸ್ತಿ-ಪಾಸ್ತಿ ಹಾನಿ ಉಂಟಾಗಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ, ನ.1ರಿಂದ ಈತನಕ ರಾಜ್ಯದಲ್ಲಿ 132.5ಮಿ.ಮೀ.ನಷ್ಟು ಮಳೆ ಯಾಗಿದೆ. ಇದು ವಾಡಿಕೆಗಿಂತ ಶೇ.271ರಷ್ಟು ಹೆಚ್ಚು ಮಳೆಯಾ ದಂತಾಗಿದೆ. ಈ ಅವಯಲ್ಲಿ ರಾಜ್ಯದ ವಾಡಿಕೆ ಮಳೆ ಪ್ರಮಾಣ 35.7ಮಿ.ಮೀ. ಮಾತ್ರ ಇದೆ.

ದಕ್ಷಿಣ ಒಳನಾಡಿನಲ್ಲಿ ವಾಡಿಕೆಯ 44ಮಿ.ಮೀ. ಮಳೆಗೆ 189.8 ಮಿ.ಮೀ.ನಷ್ಟು ಮಳೆಯಾಗಿದ್ದು, ಶೇ.331ರಷ್ಟು ಅಕ ಪ್ರಮಾಣದ ಮಳೆ ಬಿದ್ದಿದೆ. ಉತ್ತರ ಒಳನಾಡಿನಲ್ಲೂ ಶೇ.166ರಷ್ಟು, ಮಲೆನಾಡಿನಲ್ಲಿ ಶೇ.202ರಷ್ಟು ಹಾಗೂ ಕರಾವಳಿಯಲ್ಲಿ 336ರಷ್ಟು ಅಕ ಪ್ರಮಾಣದ ಮಳೆಯಾಗಿದೆ. ಅ.1ರಿಂದ ಈತನಕ ರಾಜ್ಯದಲ್ಲಿ ವಾಡಿಕೆಗಿಂತ ಶೇ.86ರಷ್ಟು ಮಳೆಯಾಗಿದೆ.

ಉತ್ತರ ಒಳನಾಡು ಹೊರತುಪಡಿಸಿದರೆ ಉಳಿದೆಲ್ಲ ಕಡೆಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ ಶೇ.146, ಮಲೆನಾಡಿನಲ್ಲಿ ಶೇ.113, ಕರಾವಳಿಯಲ್ಲಿ ಶೇ.119ರಷ್ಟು ಮಳೆಯಾಗಿದೆ.

Facebook Comments