ರಾಜ್ಯದಲ್ಲಿ ಇನ್ನೊಂದು ವಾರ ಉತ್ತಮ ಮಳೆ ಸಾಧ್ಯತೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.7-ರಾಜ್ಯದಲ್ಲಿ ಇನ್ನೊಂದು ವಾರ ಕಾಲ ಉತ್ತಮ ಮಳೆಯಾಗುವ ಮುನ್ಸೂಚನೆಗಳಿವೆ. ಮೇಲ್ಮೈ ಸುಳಿಗಾಳಿ ಉಂಟಾಗಿರುವುದರಿಂದ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮೋಡ ಕವಿದ ವಾತಾವರಣ ಕಂಡುಬರುತ್ತಿದ್ದು, ನಿನ್ನೆ ಸಂಜೆ ಹಾಗೂ ರಾತ್ರಿ ಹಲವು ಕಡೆಗಳಲ್ಲಿ ಸಾಧಾರಣದಿಂದ ಉತ್ತಮ ಮಳೆಯಾದ ವರದಿಯಾಗಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎ.ಶ್ರೀನಿವಾಸರೆಡ್ಡಿ ತಿಳಿಸಿದ್ದಾರೆ.

ಈ ಸಂಜೆಯೊಂದಿಗೆ ಮಾತನಾಡಿದ ಅವರು, ಜೂ.9ರ ನಂತರ ರಾಜ್ಯದಲ್ಲಿ ಮಳೆ ಪ್ರಮಾಣ ಹೆಚ್ಚಾಗಲಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಲಿದ್ದು, ದಕ್ಷಿಣ ಒಳನಾಡಿನಲ್ಲಿ ಮಳೆ ಪ್ರಮಾಣ ಹೆಚ್ಚಾಗಲಿದೆ.

ಹಾಗೆಯೇ ಕರಾವಳಿ ಭಾಗದಲ್ಲೂ ಮಳೆ ಮತ್ತಷ್ಟು ಹೆಚ್ಚಾಗಲಿದೆ.ನಿಸರ್ಗ ಚಂಡಮಾರುತದ ಪರಿಣಾಮದಿಂದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಮಳೆಯಾಗಿತ್ತು.

ಈಗಾಗಲೇ ನೈಋತ್ಯ ಮುಂಗಾರು ಆರಂಭವಾಗಿರುವುದರಿಂದ ರಾಜ್ಯದ ಒಳನಾಡಿನಲ್ಲೂ ಚದುರಿದಂತೆ ಅಲ್ಲಲ್ಲಿ ಉತ್ತಮ ಮಳೆಯಾಗುತ್ತಿದೆ. ಇನ್ನೆರಡು ದಿನಗಳ ನಂತರ ಉತ್ತರ ಒಳನಾಡಿನಲ್ಲೂ ಮಳೆ ಹೆಚ್ಚಾಗಲಿದೆ ಎಂದು ಅವರು ಹೇಳಿದರು.

ಸ್ಥಳೀಯ ಹವಾ ಮುನ್ಸೂಚನೆ ಪ್ರಕಾರ, ಭಾಗಶಃ ಮೋಡ ಕವಿದ ವಾತಾವರಣವಿದ್ದು, ಸಂಜೆ ಹಾಗೂ ರಾತ್ರಿ ವೇಳೆ ಹಗುರದಿಂದ ಸಾಧಾರಣ ಪ್ರಮಾಣದ ಮಳೆಯಾಗುವ ಸಾಧ್ಯತೆಗಳಿವೆ ಎಂದು ಅವರು ತಿಳಿಸಿದರು.

Facebook Comments