ಬೆಂಗಳೂರಲ್ಲಿ ಮಳೆ ಸೃಷ್ಟಿಸಿದ ಅವಾಂತರ, ವಾಹನಗಳು ಜಖಂ, ಮರಗಳು ಬುಡಮೇಲು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.7- ನಿನ್ನೆ ರಾತ್ರಿ ಸುರಿದ ಭಾರೀ ಮಳೆ ನಗರದಲ್ಲಿ ಸಾಕಷ್ಟು ಅವಾಂತರಗಳನ್ನು ಸೃಷ್ಟಿಸಿದೆ. ನಗರದ ವಿವಿಧ ಬಡಾವಣೆ ಗಳಲ್ಲಿ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದ್ದು, ವಾಹನಗಳು ಜಖಂಗೊಂಡರೆ, ಕೆಲವೆಡೆ ವಿದ್ಯುತ್ ಇಲ್ಲದೆ ಸಾರ್ವಜನಿಕರು ರಾತ್ರಿಯಿಡೀ ಪರದಾಡಬೇಕಾಯಿತು.

ಬೆಸ್ಕಾಂನ ದಕ್ಷಿಣ ಮತ್ತು ಪಶ್ಚಿಮ ಭಾಗದಲ್ಲಿ 95 ವಿದ್ಯುತ್ ಕಂಬಗಳು ಮುರಿದಿವೆ. ನಗರದ ಹಲವು ಬಡಾವಣೆಗಳಲ್ಲಿ ನೂರಾರು ಮರಗಳು ಧರೆಗುರುಳಿವೆ. ಶಾಂತಿನಗರ, ಸೀತಾಸರ್ಕಲ್, ವಿದ್ಯಾಪೀಠ, ಶ್ರೀನಿವಾಸನಗರ, ಮೈಸೂರ್‍ಬ್ಯಾಂಕ್ ಕಾಲೋನಿ, ವಿನಾಯಕನಗರ, ಶಂಕರ್‍ನಾಗ್ ವೃತ್ತ, ಪ್ರಮೋದ್‍ಲೇಔಟ್, ಹನುಮಂತನಗರ, ಶ್ರೀನಗರ, ರಾಜರಾಜೇಶ್ವರಿನಗರ, ಪಟ್ಟಣಗೆರೆ, ಬಸವನಗುಡಿ, ಗಾಂಧಿಬಜಾರ್ ಸೇರಿದಂತೆ ಹಲವೆಡೆ ಬೃಹತ್ ಮರಗಳು ಬಿದ್ದಿವೆ.

ರಾಜರಾಜೇಶ್ವರಿನಗರದ ಐಡಿಯಲ್ ಹೋಮ್ಸ್ ಬಡಾವಣೆ ಬಳಿ ಸಾಲು ಸಾಲು ಮರಗಳು ಉರುಳಿದ್ದು, ಕಾರೊಂದು ಜಖಂಗೊಂಡಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆ ಬಳಿಯೂ ಮರವೊಂದು ಉರುಳಿ ಬಿದಿದ್ದು, ವಾಹನ ಚಾಲಕರು ಚಲಿಸಲಾಗದೆ ಪರದಾಡಿದರು.

ಬೆಳಗ್ಗಿನಿಂದಲೇ ಮರ ತೆರವು ಕಾರ್ಯಾಚರಣೆಯಲ್ಲಿ ಬಿಬಿಎಂಪಿ ಸಿಬ್ಬಂದಿ ತೊಡಗಿದ್ದಾರೆ. ಆದರೆ, ಸಾಕಷ್ಟು ಸಿಬ್ಬಂದಿ ಇಲ್ಲದ ಕಾರಣ ಕೆಲವು ಕಡೆ ಮರಗಳನ್ನು ತೆರವುಗೊಳಿಸದ ಕಾರಣ ಟ್ರಾಫಿಕ್‍ಜಾಮ್ ಉಂಟಾಗಿದೆ. ಹಾಗಾಗಿ ಸಾರ್ವಜನಿಕರು ಬಿಬಿಎಂಪಿ ಹಾಗೂ ಬೆಸ್ಕಾಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಸ್ಯಕಾಶಿ ಲಾಲ್‍ಬಾಗ್‍ನಲ್ಲಿ ಹಳೆಯ ತಾಳೆ ಮರ ಡಸ್ಟ್‍ಬಿನ್ ವೊಂದರ ಮೇಲೆ ಬಿದ್ದು ಅದು ಜಖಂಗೊಂಡಿದೆ. ಗವಿಪುರಂನಲ್ಲಿ ರುವ ಶೇಷಗಣಪತಿ ರಸ್ತೆ ಬಳಿ ಭಾರೀ ಗಾತ್ರದ ಮರದ ಕೊಂಬೆ ರಸ್ತೆಯಲ್ಲೇ ಬಿದ್ದಿದ್ದು, ರಸ್ತೆ ದಾಟಲು ವಾಹನ ಸವಾರರು ಹರಸಾಹಸ ಪಡಬೇಕಾಯಿತು. ಆದರೆ, ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲವೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಹನುಮಂತನಗರದ ರಾಮಾಂಜ ನೇಯ ಸ್ವಾಮಿ ದೇವಸ್ಥಾನದ ಬಳಿ ಮೂರ್ನಾಲ್ಕು ಮರಗಳ ಕೊಂಬೆಗಳು ಬಿದ್ದಿವೆ. ಒಂದು ಮರದ ಕೊಂಬೆ ದೇವಸ್ಥಾನದ ಪಕ್ಕದಲ್ಲಿರುವ ಶೌಚಾಲಯದ ಗೋಡೆ ಮೇಲೆ ಬಿದ್ದು ಜಖಂಗೊಂಡಿದೆ. ಇದೇ ದೇವಸ್ಥಾನದ ಎದುರು ಭಾಗದ ಮನೆಯ ಮೇಲೆ ವಿದ್ಯುತ್ ಕಂಬ ಉರುಳಿದ್ದು, ಮನೆಯವರು ಆತಂಕಗೊಂಡಿದ್ದಾರೆ. ಕೂಡಲೇ ಬೆಸ್ಕಾಂನವರು ಬಂದು ವಿದ್ಯುತ್ ಕಂಬ ತೆರವುಗೊಳಿಸಬೇಕೆಂದು ಮನವಿ ಮಾಡಿದ್ದಾರೆ.

ಹನುಮಂತನಗರ ಹಾಗೂ ಶ್ರೀನಗರದಲ್ಲಿ ನೂರಕ್ಕೂ ಹೆಚ್ಚು ವಿದ್ಯುತ್ ಕಂಬಗಳು, ಮರಗಳು ಉರುಳಿರುವುದರಿಂದ ಸಾರ್ವಜನಿಕರು ಬಹಳ ತೊಂದರೆ ಅನುಭವಿಸಬೇಕಾಯಿತು.

ಗಾಂಧಿ ಬಜಾರ್ ಸುತ್ತಮುತ್ತ ಬಿದ್ದಿರುವ ಮರಗಳನ್ನು ಇನ್ನೂ ತೆರವು ಮಾಡದಿರುವುದಕ್ಕೆ ಸ್ಥಳೀಯರು ಪಾಲಿಕೆ ವಿರುದ್ಧ ಕಿಡಿಕಾರಿದ್ದಾರೆ. ಕಾರಂಜಿ ಆಂಜನೇಯ ಸ್ವಾಮಿ ದೇವಸ್ಥಾನ ರಸ್ತೆಯಲ್ಲಿ ವಿದ್ಯುತ್ ಕಂಬ ಈಗಲೋ ಆಗಲೋ ಬೀಳುವ ಸ್ಥಿತಿಯಲ್ಲಿದ್ದು, ಅಪಾಯವನ್ನು ಆಹ್ವಾನಿಸಿದೆ. ಆದರೆ, ಬೆಸ್ಕಾಂನವರು ವಿದ್ಯುತ್ ಕಂಬವನ್ನು ತೆರವುಗೊಳಿಸಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಬಾಲಕನ ರಕ್ಷಣೆಗೆ ಹರ ಸಾಹಸ: ಗಿರಿನಗರದಲ್ಲಿ ಭಾರೀ ಗಾತ್ರದ ಮರವೊಂದು ಮನೆ ಯೊಂದರ ಮೇಲೆ ಬಿದ್ದ ಪರಿಣಾಮ ಮನೆ ಯಲ್ಲಿ ಬಾಲಕ ಸಿಲುಕಿ ಕೊಂಡಿದ್ದು, ಆತನನ್ನು ಹೊರ ತರಲು ಪಾಲಿಕೆ ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ. ಸುದ್ದಿ ತಿಳಿದ ಮೇಯರ್ ಗಂಗಾಂಬಿಕೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಅಳಿಲುಗಳ ಪರದಾಟ:ಬ್ಯೂಗಲ್‍ರಾಕ್ ಪಾರ್ಕ್ ರಸ್ತೆಯಲ್ಲಿ ರಾತ್ರಿ ಸುರಿದ ಮಳೆಗೆ ಬಹಳಷ್ಟು ಮರದ ಕೊಂಬೆಗಳು ಮುರಿದು ಬಿದ್ದಿದ್ದು, ಮರದಲ್ಲಿ ವಾಸವಿದ್ದ ಅಳಿಲುಗಳು ತಮ್ಮ ಗೂಡುಗಳು ಸಿಗದೆ ಅತ್ತಿತ್ತ ಆತಂಕದಿಂದ ಅಲೆದಾಡುತ್ತಿದುದ್ದು ಎಂಥಹವರ ಮನಕಲಕುವಂತಿತ್ತು. ಬಸವನಗುಡಿ ಪೆಲೀಸ್ ಸ್ಟೇಷನ್ ರಸ್ತೆಯಲ್ಲಿ ಮರ ಬಿದ್ದು ಮೂರು ಕಾರುಗಳು ಜಖಂಗೊಂಡಿವೆ. ಇದೇ ರಸ್ತೆ ಯಲ್ಲಿ ಇಂದು ಮುಂಜಾನೆ ಶಿಥಿಲವಾಗಿದ್ದ ಮತ್ತೊಂದು ಮರ ಮುರಿದು ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಒಟ್ಟಾರೆ ನಿನ್ನೆ ರಾತ್ರಿ ಸುರಿದ ಮಳೆಗೆ ನಗರದ ಬಹುತೇಕ ಬಡಾವಣೆಗಳು ಚಿತ್ ಆಗಿವೆ.

Facebook Comments