ತೆಲುಗಿನ ಖ್ಯಾತ ನಟ ರಾಜಾಬಾಬು ನಿಧನ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಅ. 25- ಕಳೆದ ಕೆಲವು ದಿನಗಳಿಂದ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ತೆಲುಗು ಚಿತ್ರರಂಗ ಹಾಗೂ ಕಿರುತೆರೆಯ ನಟ ರಾಜಾಬಾಬು (64) ಅವರು ಕಳೆದ ರಾತ್ರಿ ತಮ್ಮ ನಿವಾಸದಲ್ಲಿ ಇಹಲೋಕ ಯಾತ್ರೆ ಮುಗಿಸಿದ್ದಾರೆ.

ರಾಜಾಬಾಬು ಅವರ ಅಂತ್ಯಕ್ರಿಯೆಯು ಇಂದು ನೆರವೇರಿದ್ದು, ಅವರ ನಿಧನಕ್ಕೆ ತೆಲುಗು ಚಿತ್ರರಂಗದ ಖ್ಯಾತ ನಟರಾದ ಮೆಗಾಸ್ಟಾರ್ ಚಿರಂಜೀವಿ, ಅಕ್ಕಿನೇನಿ ನಾಗಾರ್ಜುನ, ವಿಕ್ಟರಿ ವೆಂಕಟೇಶ್, ನಂದಮೂರಿ ಬಾಲಕೃಷ್ಣ ಸೇರಿದಂತೆ ಹಲವು ನಟರು ಹಾಗೂ ತಂತ್ರಜ್ಞರು ಸಂತಾಪ ಸೂಚಿಸಿದ್ದಾರೆ.

ಸೂಪರ್‍ಸ್ಟಾರ್ ಕೃಷ್ಣ ಅಭಿನಯದ ಊರಿಕೆಮನಗಾಡು ಚಿತ್ರದ ಮೂಲಕ ಬೆಳ್ಳಿ ಲೋಕಕ್ಕೆ ಪಾದಾರ್ಪಣೆ ಮಾಡಿದ ರಾಜಾಬಾಬು ಅವರು ಸಮುದ್ರಂ, ಮುರಾರಿ, ಅಡವಾರಿ ಮಾತುಲಕು ಅರ್ಥಲೆ ವೆರುಲೆ, ಸೀತಾರಾಮ ವಾಕಿಟ್ಲೊ ಸಿರಿಮಲ್ಲೆ ಚೆಟ್ಲು, ಬ್ರಹ್ಮೋತ್ಸವಂ ಸೇರಿದಂತೆ 60 ಸಿನಿಮಾಗಳಲ್ಲಿ ನಟಿಸಿದ್ದಾರೆ.

ಕಿರುತೆರೆಯಲ್ಲೂ ಗುರುತಿಸಿ ಕೊಂಡಿದ್ದ ರಾಜಾಬಾಬು ಅವರು ವಸಂತ ಕೋಕಿಲಾ, ಮನಸು ಮಮತಾ, ಸಿ ಲಾ ಸೌ ಸಾವಿತ್ರಿ, ಪ್ರಿಯಾಂಕ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿರುವ ಇವರು ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.

Facebook Comments