ಬ್ರೇಕಿಂಗ್ : ರಾಜಕಾಲುವೆ ಒತ್ತುವರಿ ಮಾಡಿಕೊಂಡವರಿಗೆ ಸದ್ಯದಲ್ಲೇ ಕಾದಿದೆ ಬಿಗ್ ಶಾಕ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.26- ರಾಜಕಾಲುವೆ ಒತ್ತುವರಿದಾದರರ ಮೇಲೆ ಸಮರ ಸಾರಿರುವ ರಾಜ್ಯ ಸರ್ಕಾರ ಬೇಕಾಬಿಟ್ಟಿಯಾಗಿ ಮನೆ ಕಟ್ಟಿಸಿಕೊಂಡಿರುವವರಿಗೆ ತೆರವುಗೊಳಿಸಲು ಸದ್ಯದಲ್ಲೇ ನೋಟಿಸ್ ಜಾರಿ ಮಾಡಲಿದೆ.ಮೂರು ದಿನಗಳ ಹಿಂದೆ ನಗರದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಅನೇಕ ಕಡೆ ಪ್ರವಾಹ ಉಂಟಾಗಿ ಮನೆಗಳು ಕುಸಿತ ಹಾಗೂ ಗೃಹೋಪಯೋಗಿ ವಸ್ತುಗಳು ನೀರುಪಾಲಾಗಿ ಕೆಲವು ಕಡೆ ವಾಹನಗಳು ಕೂಡ ಜಖಂಗೊಂಡಿದ್ದವು.

ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಮನೆ, ವಾಣಿಜ್ಯ ಸಂಕೀರ್ಣ, ಖಾಸಗಿ ಕಟ್ಟಡಗಳನ್ನು ನಿರ್ಮಿಸಿರುವುದರಿಂದ ಮಳೆ ನೀರು ವಸತಿ ಪ್ರದೇಶಗಳಿಗೆ ನುಗ್ಗಲು ಕಾರಣವಾಗಿದೆ ಎಂಬುದು ಸರ್ಕಾರಕ್ಕೆ ಮನವರಿಕೆಯಾಗಿದೆ.ಈ ಹಿನ್ನೆಲೆಯಲ್ಲಿ ಎಲ್ಲೆಲ್ಲಿ ರಾಜಕಾಲುವೆಯನ್ನು ಕಾನೂನು ಬಾಹೀರವಾಗಿ ಒತ್ತುವರಿ ಮಾಡಿಕೊಂಡಿದ್ದಾರೋ ಶೀಘ್ರದಲ್ಲೇ ತೆರವುಗೊಳಿಸಲು ನೋಟಿಸ್ ಜಾರಿ ಮಾಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚಿಸಿದ್ದಾರೆ.

ಪ್ರಾಥಮಿಕ ಅಂದಾಜಿನ ಪ್ರಕಾರ ಹೊಸಕೆರೆಹಳ್ಳಿಯಲ್ಲಿ ಸುಮಾರು 300ಕ್ಕೂ ಹೆಚ್ಚು ಕುಟುಂಬಗಳು ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿದ್ದಾರೆ ಎಂದು ಅಂದಾಜಿಸಲಾಗಿದೆ.

ನಿನ್ನೆ ಕಂದಾಯ ಸಚಿವ ಆರ್.ಅಶೋಕ್ ನೂರು ಕುಟುಂಬದವರಿಗೆ ತಲಾ 25 ಸಾವಿರ ಪರಿಹಾರ ನೀಡಿದ್ದಾರೆ. ಇವರೆಲ್ಲರೂ ಕೂಡ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿದ್ದಾರೆ ಎಂಬ ಮಾಹಿತಿ ಬಿಬಿಎಂಪಿ ಲಭ್ಯವಾಗಿದೆ.

ಶನಿವಾರ ಮಳೆ ಹಾನಿಗೊಳಗಾದ ಪ್ರದೇಶಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೇಟಿ ಕೊಟ್ಟಿದ್ದರು. ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡಿರುವವರನ್ನು ತೆರವುಗೊಳಿಸಿದರೆ ಮಾತ್ರ ಇದಕ್ಕೆ ಸಾಕ್ಷತ ಪರಿಹಾರ ಸಿಗುತ್ತದೆ ಎಂದು ಹೇಳಿದ್ದರು.

ಈಗಾಗಲೇ ಬಿಬಿಎಂಪಿ ಆಡಳಿತಾಕಾರಿ ಗೌರವ್‍ಗುಪ್ತ, ಆಯುಕ್ತ ಮಂಜುನಾಥ್ ಪ್ರಸಾದ್, ಕಂದಾಯ ಸಚಿವ ಆರ್.ಅಶೋಕ್ ಸೇರಿದಂತೆ ಹಿರಿಯ ಅಕಾರಿಗಳ ಜತೆ ಸಭೆ ನಡೆಸಿರುವ ಮುಖ್ಯಮಂತ್ರಿಗಳು, ತೆರವುದಾರರನ್ನು ಸ್ಥಳಾಂತರಗೊಳಿಸಲು ನೋಟಿಸ್ ನೀಡುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಮುಖ್ಯಮಂತ್ರಿಯವರ ಸೂಚನೆ ಮೇರೆಗೆ ನರದ ಯಾವ ಯಾವ ಪ್ರದೇಶಗಳಲ್ಲಿ ಈ ರೀತಿ ನಿಯಮಗಳನ್ನು ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡಿರುವವರನ್ನು ಗುರುತಿಸುವ ಕಾರ್ಯ ಈಗಾಗಲೇ ಸದ್ದಿಲ್ಲದೆ ನಡೆದಿದೆ.

ಮುಂದಿನ ವಾರದಿಂದ ಬಿಬಿಎಂಪಿ ನೋಟಿಸ್ ಜಾರಿ ಮಾಡಲಿದ್ದು, ಯಾವುದೇ ಸಂದರ್ಭದಲ್ಲೂ ಕಟ್ಟಡಗಳನ್ನು ತೆರವುಗೊಳಿಸುವ ಸಾಧ್ಯತೆ ಇದೆ. ರಾಜಧಾನಿ ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವವರ ಮೇಲೆ ಕ್ರಮ ಜರುಗಿಸಬೇಕು ಎಂಬುದು ಬಹುವರ್ಷಗಳ ಬೇಡಿಕೆಯಾಗಿದೆ.

ಹೆಬ್ಬಾಳ, ಚಲಘಟ್ಟ, ಕೋರಮಂಗಲ ಮತ್ತು ವೃಷಭಾವತಿ ನಾಲೆಗಳನ್ನು ನಾಡಪ್ರಭು ಕೆಂಪೇಗೌಡರ ಕಾಲದಲ್ಲಿ ನಿರ್ಮಾಣ ಮಾಡಲಾಗಿತ್ತು. ನಗರದ ಚರಂಡಿ ನೀರು ಇದರ ಮೂಲಕ ಹರಿದು ಹೋಗಿ ಒಂದೆಡೆ ಸೇರುವಂತೆ ಮಾಡುವುದು ಇದರ ಉದ್ದೇಶವಾಗಿತ್ತು.

ಆದರೆ, ಕೆಲವು ಬಲಾಡ್ಯರು ಈ ಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಮನೆ, ವಾಣಿಜ್ಯ ಕಟ್ಟಡ, ಶೈಕ್ಷಣಿಕ ಸಂಸ್ಥೆಗಳು, ಗಾರ್ಮೆಂಡ್ಸ್ ಕಾರ್ಖಾನೆ ಸೇರಿದಂತೆ ಮತ್ತಿತರ ಕಡ್ಡಗಳನ್ನು ನಿರ್ಮಿಸಿದ್ದಾರೆ. ಪರಿಣಾಮ ಪ್ರತಿ ಮಳೆಗಾಲ ಸಂದರ್ಭದಲ್ಲಿ ತಗ್ಗು ಪ್ರದೇಶದ ಕಡೆ ಪ್ರವಾಹ ಉಂಟಾಗಿ ಭಾರೀ ಪ್ರಮಾಣದ ಹಾನಿ ಸಂಭವಿಸುತ್ತದೆ.

Facebook Comments

Sri Raghav

Admin