ರಾಜಸ್ತಾನ ರಾಜಕೀಯ ಹೈಡ್ರಾಮಾ, ಶಾಸಕರ ವಿರುದ್ಧ ಶೋಕಾಸ್ ನೋಟಿಸ್

ಈ ಸುದ್ದಿಯನ್ನು ಶೇರ್ ಮಾಡಿ

ಜೈಪುರ (ರಾಜಸ್ತಾನ), ಜು.14- ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ಬಹಿರಂಗವಾಗಿಯೇ ತೊಡೆತಟ್ಟಿರುವ ಉಪಮುಖ್ಯಮಂತ್ರಿ ಸಚಿನ್ ಪೈಲೆಟ್ ಹಾಗೂ ಅವರ ಆಪ್ತ ಬಣ ಇಂದು ನಡೆದ ಎರಡನೆ ಬಾರಿಯ ಶಾಸಕಾಂಗ ಸಭೆಗೆ ಮತ್ತೊಮ್ಮೆ ಗೈರು ಹಾಜರಾಗಿದ್ದಾರೆ. ಈ ಮೂಲಕ ತನ್ನ ಬಂಡಾಯದ ಕಾವನ್ನು ಇನ್ನಷ್ಟು ಹೆಚ್ಚಿಸಿದ್ದಾರೆ.

ಹೀಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಿರುವ ಹೈ ಕಮಾಂಡ್ ಸಚಿನ್ ಪೈಲೆಟ್ ಹಾಗೂ ಇತರೆ ಶಾಸಕರ ವಿರುದ್ಧ ಶಿಸ್ತುಕ್ರಮ ಜರುಗಿಸುವ ಸಂಬಂಧ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ. ಇದು ಅಶೋಕ್ ಗೆಹ್ಲೋಟ್ ಮತ್ತು ಪೈಲೆಟ್ ನಡುವೆ ಇನ್ನಷ್ಟು ಕಂದಕ ಸೃಷ್ಟಿಸಿದೆ.

ರಾಜಸ್ತಾನದ ರಾಜಧಾನಿ ಜೈಪುರ ಹೊರವಲಯದಲ್ಲಿರುವ ಹೋಟೇಲ್‍ನಲ್ಲಿಂದು ಎರಡನೆ ಬಾರಿ ಶಾಸಕಾಂಗ ಸಭೆ ಕರೆಯಲಾಗಿತ್ತು. ಸಭೆ ಪ್ರಾರಂಭವಾಗಿತ್ತಿದ್ದಂತೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅವಿನಾಶ್ ಪಾಂಡೆ ಅವರು ಪೈಲಟ್ ಅವರಿಗೆ ಸಭೆಗೆ ಹಾಜರಾಗುವಂತೆ ಮತ್ತೊಂದು ಮನವಿ ಸಲ್ಲಿಸಿದ್ದರು. ನಿನ್ನೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಮನೆಯಲ್ಲಿ ನಡೆದ ಮೊದಲ ಸಿಎಲ್‍ಪಿ ಸಭೆಯಲ್ಲಿಯೂ ಸಚಿನ್ ಪೈಲಟ್ ಭಾಗವಹಿಸಿರಲಿಲ್ಲ.

ಇತರ ಹದಿನೆಂಟು ಕಾಂಗ್ರೆಸ್ ಶಾಸಕರು ಕೂಡಾ ಸಭೆಯಲ್ಲಿ ಭಾಗವಹಿಸಲಿಲ್ಲ ಎಂದು ಮೂಲಗಳು ತಿಳಿಸಿವೆ. ಆದರೆ, ಇತರ ಪಕ್ಷಗಳ ಸ್ವತಂತ್ರ ಶಾಸಕರು ಭಾಗವಹಿಸಿ, ಗೆಹ್ಲೋಟ್‍ಗೆ ಬೆಂಬಲ ವ್ಯಕ್ತಪಡಿಸಿದರು.

ಇಂದು ನಡೆದ ಸಭೆಯು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರೂ ಆಗಿರುವ ಪೈಲಟ್‍ಗೆ ಎರಡನೆ ಅವಕಾಶ ನೀಡಲಾಗಿತ್ತು ಎಂದು ಹೇಳಲಾಗಿದೆ. ಆದರೆ, ಪೈಲಟ್ ಹಾಗೂ ಅವರ ಆಪ್ತ ಶಾಸಕರು ಸಭೆಯಲ್ಲಿ ಭಾಗವಹಿಸಲಿಲ್ಲ.

ಜು.13ರ ಸೋಮವಾರ ಒಂದು ಸುತ್ತಿನ ಸಿಎಲ್‍ಪಿ ಸಭೆ ನಡೆದಿತ್ತು. ಸಭೆ ಬಳಿಕ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್‍ಗೆ ಬೆಂಬಲ ಸೂಚಿಸಿದ್ದ ಶಾಸಕರನ್ನು ರೆಸಾರ್ಟ್‍ಗೆ ಶಿಫ್ಟ್ ಮಾಡಲಾಗಿತ್ತು. ಅಲ್ಲದೆ, ಸಚಿನ್ ಪೈಲಟ್ ಅವರ ಮನವೊಲಿಸಲು ನಿನ್ನೆ ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿಯಿಂದ ತೆಗೆದು ಹಾಕಲಾಗಿದ್ದ ಅವರ ಪೋಸ್ಟರ್‍ಗಳನ್ನು ಮತ್ತೆ ಅಳವಡಿಸಿ, ಅವರನ್ನ ಸಿಎಲ್‍ಪಿ ಸಭೆಗೆ ಹಾಜರಾಗುವಂತೆ ಆಹ್ವಾನ ನೀಡಲಾಗಿತ್ತು.

ಎರಡನೆ ಸಲ ಸಭೆ ನಡೆಸುವ ಮೂಲಕ ಸಭೆಗೆ ಆಗಮನಿಸುವಂತೆ ಪೈಲಟ್ ಬಣದ ಶಾಸಕರಿಗೆ ಕಾಂಗ್ರೆಸ್ ವರಿಷ್ಠರು ಆಹ್ವಾನ ನೀಡಿದ್ದರು. ಎರಡನೆ ಸಲದ ಆಹ್ವಾನವನ್ನೂ ಅವರು ತಿರಸ್ಕರಿಸಿದರೆ ಮುಂದಿನ ಹಾದಿ ಕಠಿಣವಾಗಲಿದೆ ಎಂದೂ ಅವರು ಎಚ್ಚರಿಸಿದ್ದರು.

ಏತನ್ಮಧ್ಯೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎಐಸಿಸಿ ಜನರಲ್ ಸೆಕ್ರಟರಿ ಪ್ರಿಯಾಂಕಾ ಗಾಂಧಿ ವಾದ್ರಾ, ಹಿರಿಯ ನಾಯಕರಾದ ಅಹ್ಮದ್ ಪಟೇಲ್, ಪಿ.ಚಿದಂಬರಂ, ಕೆ.ಸಿ.ವೇಣುಗೋಪಾಲ್ ಅವರು ಪೈಲಟ್ ಜತೆಗೆ ಸಂಪರ್ಕ ಸಾಧಿಸಿದ್ದಾರೆ. ಅವರು ಪೈಲಟ್ ಅವರ ಅಸಮಾಧಾನವನ್ನು ಕಡಿಮೆಗೊಳಿಸುವ ಪ್ರಯತ್ನದಲ್ಲಿದ್ದಾರೆ.

ನಾಳೆ ಅವರು ಪಕ್ಷ ತ್ಯಜಿಸಿದರೆ, ನಾವ್ಯಾರೂ ಅವರನ್ನು ಸಂಪರ್ಕಿಸಿಲ್ಲ ಎಂದು ಆರೋಪಿಸಬಾರದಲ್ಲ ಎಂದು ಹಿರಿಯ ನಾಯಕರೊಬ್ಬರು ಹೇಳಿದ್ದಾಗಿ ವರದಿಯಾಗಿದೆ. ಸದ್ಯದ ಪರಿಸ್ಥಿತಿ ಗಮನಿಸಿದರೆ ಸಚಿನ್ ಪೈಲಟ್ ಮತ್ತು ಅವರ ಬೆಂಬಲಿಗರನ್ನು ಕಾಂಗ್ರೆಸ್ ನಡೆಸಿಕೊಳ್ಳುತ್ತಿರುವ ರೀತಿ ನೋಡುತ್ತಿದ್ದೇವೆ.

ಅದು ಅವರ ಆಂತರಿಕ ವಿಚಾರವಾದ್ದರಿಂದ ನಾವೇನೂ ಪ್ರತಿಕ್ರಿಯಿಸುವುದಿಲ್ಲ. ಅಷ್ಟೇ ಅಲ್ಲ, ವಿಶ್ವಾಸಮತ ಎದುರಿಸಿ ಎಂದು ನಾವು ಸರ್ಕಾರವನ್ನು ಒತ್ತಾಯಿಸುವುದಿಲ್ಲ ಎಂದು ಬಿಜೆಪಿ ನಾಯಕ ಸತೀಶ್ ಪೂನಿಯಾ ಹೇಳಿದ್ದಾರೆ.

ಆದರೆ ಯಾವುದೇ ಆಹ್ವಾನಕ್ಕೆ ಬಗ್ಗದೆ ಸಚಿನ್ ಪೈಲಟ್ ಸಿಎಲ್‍ಪಿ ಸಭೆಗೆ ಗೈರಾಗುವ ಮೂಲಕ ಪಟ್ಟು ಸಡಿಲಿಸುವ ಮಾತೇ ಇಲ್ಲ ಎನ್ನುವ ನೇರ ಸಂದೇಶ ಗೆಹ್ಲೋಟ್ ಗ್ಯಾಂಗ್‍ಗೆ ರವಾನಿಸಿದ್ದಾರೆ.

ಇದು ರಾಜಸ್ತಾನ ಕಾಂಗ್ರೆಸ್‍ನ ಕೋಪಕ್ಕೆ ಕಾರಣವಾಗಿದ್ದು, ಪೈಲೆಟ್ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗಿದೆ ಎಂದು ತಿಳಿದುಬಂದಿದೆ. ಸದ್ಯ ಸಚಿನ್ ಪೈಲಟ್ ತನ್ನ ಬೆಂಬಲಿಗರೊಂದಿಗೆ ಮನೆಸಾರ್ ಹೋಟೆಲ್‍ನಲ್ಲಿದ್ದು, ಸಭೆಗೆ ಆಗಮಿಸುವುದಿಲ್ಲ ಎಂದು ತಿಳಿಸಿದ್ದಾಗಿ ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ ಸಚಿನ್ ಪೈಲಟ್ ಹಾಗೂ ಅವರ ಬೆಂಬಲಿಗರು ಬಿಜೆಪಿಗೆ ಸೇರಲ್ಲ ಎಂದು ತಿಳಿದುಬಂದಿದೆ. ಬೆಂಬಲಿಗರಿಗೆ ಸಚಿನ್ ಪೈಲೆಟ್ ಮುಖ್ಯಮಂತ್ರಿಯಾಗಬೇಕು ಎನ್ನುವ ಆಶಯ ಇದೆಯಂತೆ.

ಈ ಹಿನ್ನೆಲೆ ತಾವು ಹೋಟೆಲ್‍ನಲ್ಲಿ ಬೀಡುಬಿಟ್ಟಿರುವುದಾಗಿ ತಿಳಿಸಿದ್ದಾರೆ. ಈ ರೀತಿಯ ಬಂಡಾಯದ ಮೂಲಕ ಹೈಕಮಾಂಡ್‍ಗೆ ಒತ್ತಡ ಹಾಕುವ ತಂತ್ರ ಎನ್ನುವ ಮಾತುಗಳು ಕೇಳಿಬರುತ್ತಿದೆ.

ಸಚಿನ್ ಪೈಲಟ್ ಬಂಡಾಯದ ನಂತರ ನಿನ್ನೆ ಜೈಪುರದಲ್ಲಿ ಕಾಂಗ್ರೆಸ್ ಶಾಸಕರ ಸಭೆ ನಡೆಸಲಾಗಿತ್ತು. ಈ ಸಭೆಯಲ್ಲಿ ಪಾಲ್ಗೊಂಡಿದ್ದ 102 ಶಾಸಕರು ಸರ್ಕಾರಕ್ಕೆ ತಮ್ಮ ಬೆಂಬಲ ಸೂಚಿಸಿ ಸಹಿ ಹಾಕಿದ್ದಾರೆ.

ಅಲ್ಲಿಂದ ಎಲ್ಲರನ್ನೂ ರೆಸಾರ್ಟ್‍ಗೆ ಶಿಫ್ಟ್ ಮಾಡಲಾಗಿದೆ. ಆದರೆ, ದೆಹಲಿಯಲ್ಲಿ ಬೀಡು ಬಿಟ್ಟಿರುವ ಸಚಿನ್ ಪೈಲಟ್ ಬಣದ ಶಾಸಕರು ಸಿಎಂ ಬದಲಾಗಲೇ ಬೇಕು ಎಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗುತ್ತಿದೆ.

ಅಶೋಕ್ ಗೆಹ್ಲೋಟ್ ತಲೆದಂಡಕ್ಕೆ ಪೈಲಟ್ ಬಣ ಪಟ್ಟು: ಜೈಪುರದಲ್ಲಿ ನಿನ್ನೆ ನಡೆದ ಸಿಎಲ್‍ಪಿ ಸಭೆಯಲ್ಲಿ ಬಂಡಾಯಗಾರ ಸಚಿನ್ ಪೈಲಟ್‍ಗೆ ಎಚ್ಚರಿಕೆಯ ಸಂದೇಶ ರವಾನಿಸಲಾಗಿತ್ತು. ಯಾವುದೇ ಕಾರಣಕ್ಕೂ ಪಕ್ಷ ವಿರೋಧಿ ಚಟುವಟಿಕೆಗಳನ್ನು ಸಹಿಸುವುದಿಲ್ಲ.

ಪಕ್ಷ ವಿರೋಧಿ ಚಟುವಟಿಕೆ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಣಯ ಮಾಡುವ ಮೂಲಕ ಸಚಿನ್ ಪೈಲಟ್‍ಗೆ ಪರೋಕ್ಷ ಎಚ್ಚರಿಕೆ ನೀಡಲಾಗಿತ್ತು.

ಅಲ್ಲದೆ, ಸಭೆಯ ನಂತರವೇ ಎಲ್ಲಾ ಶಾಸಕರನ್ನೂ ಜೈಪುರದ ಫೇಮರೆಂಟ್ ಹೋಟೆಟ್‍ಗೆ ಶಿಫ್ಟ್ ಮಾಡಲಾಗಿತ್ತು. ಆದರೆ, ನಿನ್ನೆ ನಡೆದ ಶಾಸಕರ ಸಭೆಯಲ್ಲಿ ಸಚಿನ್ ಪೈಲಟ್ ಬೆಂಬಲಿತ ಶಾಸಕರು ಪಾಲ್ಗೊಂಡಿರಲಿಲ್ಲ. ಇಂದು ಜೈಪುರದ ಖಾಸಗಿ ಹೋಟೆಲ್‍ನಲ್ಲಿ ಕಾಂಗ್ರೆಸ್ ನಾಯಕರು ಇಂದು ಮತ್ತೊಂದು ಸುತ್ತಿನ ಶಾಸಕರ ಸಭೆಯನ್ನು ಆಯೋಜಿಸಲಾಗಿದೆ.

ಆದರೆ, ಈ ಸಭೆಗೂ ಸಚಿನ್ ಪೈಲಟ್ ಬೆಂಬಲಿತ ಶಾಸಕರು ಗೈರಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಅಲ್ಲದೆ, ಸಿಎಂ ಬದಲಾಗಲೇಬೇಕು ಎಂಬ ತಮ್ಮ ನಿಲುವಿನ ಪಟ್ಟು ಸಡಿಲಿಸುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ.
ಕಾಂಗ್ರೆಸ್ ನಾಯಕರು ಶಾಸಕರ ಸಭೆ ಮುಗಿಯುತ್ತಿದ್ದಂತೆ ಎಲ್ಲಾ ಶಾಸಕರನ್ನೂ ರೆಸಾರ್ಟ್‍ಗೆ ಶಿಫ್ಟ್ ಮಾಡಿದ್ದಾರೆ.

ಮತ್ತೊಂದೆಡೆ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ತಾವು ಬಿಜೆಪಿ ಜೊತೆಗೆ ಸೇರುವುದಿಲ್ಲ ಎಂದರೂ ಅವರ ನಡೆ ಇನ್ನೂ ನಿಗೂಢವಾಗಿಯೇ ಇದೆ. ಅಲ್ಲದೆ, ಈ ನಡುವೆ ಸಚಿನ್ ಪೈಲಟ್ ತಮ್ಮ ಬೆಂಬಲಿತ ಶಾಸಕರ ಜೊತೆಗೆ ಪಕ್ಷದಿಂದ ಹೊರ ನಡೆದು ಹೊಸ ಪಕ್ಷ ಸ್ಥಾಪಿಸಲಿದ್ದಾರೆ ಎಂದೂ ಹೇಳಲಾಗುತ್ತಿದೆ.

ಕಾಂಗ್ರೆಸ್ ಪಕ್ಷದ ಒಳಗೆ ಇಂತಹ ಬಿರುಸಿನ ರಾಜಕೀಯ ಚಟುವಟಿಕೆ ನಡೆಯುತ್ತಿದ್ದಂತೆ, ಅತ್ತ ಕಾಂಗ್ರೆಸ್ ಬಿಕ್ಕಟ್ಟಿನಲ್ಲಿ ಬಿಜೆಪಿಯೂ ಲಾಭ ಹುಡುಕಲು ಮುಂದಾಗಿದೆ. ಹೀಗಾಗಿ ರಾಜಸ್ಥಾನದಲ್ಲಿ ಮತ್ತೆ ಆಪರೇಷನ್ ಕಮಲ ಮುನ್ನೆಲೆಗೆ ಬರುತ್ತದೆಯೇ? ಎಂಬ ಅನುಮಾನ ಎಲ್ಲರನ್ನೂ ಕಾಡಿದೆ. ಈ ಎಲ್ಲಾ ಆಗುಹೋಗುಗಳನ್ನು ಗಮನಿಸಿದರೆ ರಾಜಸ್ಥಾನದ ರಾಜಕೀಯ ಬಿಕ್ಕಟ್ಟು ಸದ್ಯಕ್ಕಂತು ಮುಗಿಯುವ ಯಾವುದೇ ಲಕ್ಷಣ ಗೋಚರಿಸುತ್ತಿಲ್ಲ

Facebook Comments

Sri Raghav

Admin