“ಬೇರೆ ರಾಜ್ಯಗಳ ಸಾಧನೆಯನ್ನು ನಮ್ಮದೆಂದು ಬಿಂಬಿಸಿಕೊಳ್ಳುವುದಿಲ್ಲ”

ಈ ಸುದ್ದಿಯನ್ನು ಶೇರ್ ಮಾಡಿ

ಜೈಪುರ್, ಸೆ.15-ನಾವು ಬೇರೆ ರಾಜ್ಯಗಳ ಅಭಿವೃದ್ದಿ ಯೋಜನೆಗಳನ್ನು ನಮ್ಮ ರಾಜ್ಯದ ಸಾಧನೆ ಎಂದು ಬಿಂಬಿಸಿಕೊಳ್ಳುವುದಿಲ್ಲ ಎಂದು ರಾಜಸ್ತಾನದ ಇಂಧನ ಸಚಿವ ಬಿ.ಡಿ.ಕಲ್ಲಾ ಉತ್ತರಪ್ರದೇಶ ಸರ್ಕಾರಕ್ಕೆ ಚುರುಕು ಮುಟ್ಟಿಸಿದ್ದಾರೆ. ಉತ್ತರ ಪ್ರದೇಶ ಸರ್ಕಾರ ಕೊಲ್ಕತ್ತಾದ ಸೇತುವೆಯನ್ನು ತಮ್ಮ ರಾಜ್ಯದ ಸಾಧನೆ ಎಂದು ಬಿಂಬಿಸಿಕೊಂಡಿತ್ತು. ಯೋಗಿ ಸರ್ಕಾರದ ಈ ನಿರ್ಧಾರ ವ್ಯಾಪಕ ಟೀಕೆಗೆ ಗುರಿಯಾಗಿತ್ತು.

ಇದರ ಬೆನ್ನಲ್ಲೇ ಯೋಗಿ ಸರ್ಕಾರಕ್ಕೆ ತಿರುಗೇಟು ನೀಡಿರುವ ಕಲ್ಲಾ ಅವರು, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಬೇರೆ ರಾಜ್ಯಗಳ ಸಾಧನೆಯನ್ನು ನಮ್ಮ ಸಾಧನೆ ಎಂದು ಬಿಂಬಿಸಿಕೊಳ್ಳುವ ವ್ಯಕ್ತಿಯಲ್ಲ ಎಂದು ಛೇಡಿಸಿದ್ದಾರೆ. ರಾಜಸ್ಥಾನ ವಿಧಾನಸಭೆಯಲ್ಲಿ ರಾಜ್ಯದ ವಿದ್ಯುತ್ ಪರಿಸ್ಥಿತಿ ಕುರಿತಂತೆ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಪ್ರತಿಪಕ್ಷ ಬಿಜೆಪಿ ಸದಸ್ಯರ ಟೀಕೆಗೆ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ನಮ್ಮ ಸರ್ಕಾರ ಕೋಲ್ಕತ್ತಾದ ಸೇತುವೆಯನ್ನು ಲಕ್ನೋದಲ್ಲಿದೆ ಎಂದು ಬಿಂಬಿಸಿ ಸಾರ್ವಜನಿಕರನ್ನು ದಾರಿ ತಪ್ಪಿಸುವುದಿಲ್ಲ. ಅದೇ ರೀತಿ ಕೇವಲ ಟ್ಟಿಟರ್ ಮತ್ತು ಪೋಸ್ಟರ್‍ಗಳಿಂದ ಸರ್ಕಾರ ನಡೆಸುವುದಿಲ್ಲ ಎಂದು ಟೀಕಿಸಿದ್ದಾರೆ. ರಾಜ್ಯದಲ್ಲಿ ಉದ್ಭವಿಸಿರುವ ವಿದ್ಯುತ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಾವು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದೇವೆ ಎಂದು ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.

Facebook Comments