ರಾಜಸ್ಥಾನದ ರಾಜಕೀಯ ನಾಟಕದಲ್ಲಿ ಬಿಗ್ ಟ್ವಿಸ್ಟ್..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜು.15- ರಾಜಸ್ಥಾನದ ರಾಜಕೀಯ ಹೈಡ್ರಾಮ ಮಹತ್ವದ ತಿರುವು ಪಡೆದಿದ್ದು, ಬಂಡಾಯದ ಬಾವುಟ ಹಿಡಿದಿರುವ ಪದಚ್ಯುತ ಸಚ್ಚಿನ್ ಪೈಲೆಟ್ ಮತ್ತು ಅವರ ಬೆಂಬಲಿರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ನೋಟಿಸ್ ಜಾರಿ ಮಾಡಲಾಗಿದೆ.

ರಾಜಸ್ಥಾನ ವಿಧಾನಸಭೆಯ ಕಾಂಗ್ರೆಸ್ ಮುಖ್ಯಸಚೇತಕ ಮಹೇಶ್ ಜೋಷಿ ದೂರು ಆಧರಿಸಿ ವಿಧಾನಸಭೆಯ ಅಧ್ಯಕ್ಷ ಸಿ.ಪಿ.ಜೋಷಿ ನಿನ್ನೆ ರಾತ್ರಿ ಸಚ್ಚಿನ್ ಪೈಲೆಟ್ ಮತ್ತು ಅವರ ಬೆಂಬಲಿಗರಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ನೋಟಿಸ್‍ಗೆ ಉತ್ತರ ನೀಡಲು ಮೂರು ದಿನಗಳ ಕಾಲಾವಕಾಶ ನೀಡಲಾಗಿದೆ. ಜುಲೈ 17ರೊಳಗೆ ಉತ್ತರ ನೀಡದೆ ಇದ್ದರೆ ಏಕಮುಖ ನಿರ್ಧಾರ ತೆಗೆದುಕೊಳ್ಳುವ ಎಚ್ಚರಿಕೆ ನೀಡಿದ್ದಾರೆ.

ಮುಖ್ಯಮಂತ್ರಿ ಅಶೋಕ ಗೆಲ್ಹೋಟ್ ಅವರ ನಾಯಕತ್ವದ ವಿರುದ್ಧ ಬಹಿರಂಗ ಸಮರ ಸಾರಿದ್ದ ಸಚ್ಚಿನ್ ಪೈಲೆಟ್‍ರನ್ನು ನಿನ್ನೆ ಉಪಮುಖ್ಯಮಂತ್ರಿ ಸ್ಥಾನದಿಂದ ಮತ್ತು ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ಪದಚ್ಯುತಗೊಳಿಸಲಾಯಿತು.

ಈ ನಡುವೆ ಮುಖ್ಯಮಂತ್ರಿ ಅಶೋಕ್ ಗೆಲ್ಹೋಟ್ ಬೆಂಬಲಿಗರ ಮನೆ ಮೇಲೆ ಆದಾಯ ತೆರಿಗೆ ದಾಳಿ ನಡೆದಿತ್ತು. ಸಚ್ಚಿನ್ ಪೈಲೆಟ್ ಬಿಜೆಪಿ ನಾಯಕರನ್ನು ಭೇಟಿ ಮಾಡಿದ್ದರು.

ಮಾತುಕತೆಯನ್ನು ಬಾಕಿ ಇರಿಸಿ ಕಾಂಗ್ರೆಸ್ ಹೈಕಮಾಂಡ್ ಕ್ರಮ ಕೈಗೊಳ್ಳುತ್ತಿದ್ದಂತೆ ಸಚ್ಚಿನ್ ಪೈಲೆಟ್ ವರಸೆ ಬದಲಿಸಿದ್ದು, ನಾನು ಬಿಜೆಪಿಗೆ ಹೋಗುವುದಿಲ್ಲ. ಕಾಂಗ್ರೆಸ್ ಪಕ್ಷವನ್ನು ಸದೃಢಗೊಳಿಸಿ ಮತ್ತೆ ಅಧಿಕಾರಕ್ಕೆ ತರುತ್ತೇನೆ ಎಂದು ಹೇಳಿಕೆ ನೀಡಿದ್ದರು.

ಆದರೆ ಸಚ್ಚಿನ್ ಪೈಲೆಟ್ ಮತ್ತು ಅವರ ಬೆಂಬಲಿಗರ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್ ವೇದಿಕೆ ಸಿದ್ದ ಪಡಿಸುತ್ತಿದೆ. ಎರಡು ಬಾರಿ ಕರೆದಿದ್ದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಭಾಗವಹಿಸದೆ ಇರುವುದನ್ನೇ ಮುಖ್ಯವಾಗಿಟ್ಟುಕೊಂಡು ಸಚ್ಚಿನ್ ಪೈಲೆಟ್ ಮತ್ತು 18 ಮಂದಿ ಶಾಸಕರಿಗೆ ಪಕ್ಷಾಂತರ ನಿಷೇಧ ಕಾಯ್ದೆಯಡಿ ನೋಟಿಸ್ ಜಾರಿ ಮಾಡಲಾಗಿದೆ. ಈ ಮೂಲಕ ರಾಜಸ್ಥಾನದ ರಾಜಕೀಯ ಬೆಳವಣಿಗೆಗಳು ಮಹತ್ವದ ಘಟ್ಟ ತಲುಪಿದೆ.

ಈ ನಡುವೆಯೂ ಸುದ್ದಿಗಾರರೊಂದಿಗೆ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಅವಿನಾಶ್ ಪಾಂಡೆ, ಸಚ್ಚಿನ್ ಪೈಲೆಟ್‍ಗೆ ಈಗಲೂ ಕಾಲ ಮಿಂಚಿಲ್ಲ. ತಮ್ಮ ತಪ್ಪನ್ನು ಒಪ್ಪಿಕೊಳ್ಳಲಿ. ಮಾತುಕತೆಗೆ ಕಾಂಗ್ರೆಸ್ ಪಕ್ಷದ ಬಾಗಿಲು ಸದಾ ತೆರೆದಿದೆ ಎಂದು ಆಹ್ವಾನ ನೀಡಿದ್ದಾರ.

ಸಚ್ಚಿನ್ ಪೈಲೆಟ್ ಏನು ದಡ್ಡರಲ್ಲ, ದೇವರು ಅವರಿಗೆ ಒಳ್ಳೆಯ ಬುದ್ದಿವಂತಿಕ ಕೊಟ್ಟಿದ್ದಾನೆ. ಸರ್ಕಾರವನ್ನು ಅಸ್ತಿರಗೊಳಿಸುವ ಪ್ರಯತ್ನಕ್ಕೆ ಅವರು ಕೈ ಹಾಕದಿರುವುದೇ ಕ್ಷೇಮ ಎಂದು ಹೇಳಿದ್ದಾರೆ.

Facebook Comments

Sri Raghav

Admin