ರಾಜಸ್ಥಾನ : ಬಿಜೆಪಿ ಅವಿಶ್ವಾಸ ನಿರ್ಣಯದ ತಂತ್ರಕ್ಕೆ ಕಾಂಗ್ರೆಸ್ ಪ್ರತಿ ತಂತ್ರ

ಈ ಸುದ್ದಿಯನ್ನು ಶೇರ್ ಮಾಡಿ

ಜೈಪುರ,ಆ.14- ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಲ್ಹೋಟ್ ನೇತೃತ್ವದ ಕಾಂಗ್ರೆಸ್ ವಿರುದ್ಧ ವಿಧಾನಸಭೆ ವಿಶೇಷ ಅವೇಶನದಲ್ಲಿ ಇಂದು ಮಧ್ಯಾಹ್ನ ಅವಿಶ್ವಾಸ ನಿರ್ಣಯ ಮಂಡಿಸಲು ಬಿಜೆಪಿ ಸಜ್ಜಾಗಿದ್ದರೆ, ಇದಕ್ಕೆ ಪ್ರತಿಯಾಗಿ ಆಡಳಿತ ಪಕ್ಷ ಕಾರ್ಯತಂತ್ರ ರೂಪಿಸಿದೆ.

ಪದಚ್ಯುತ ಮುಖ್ಯಮಂತ್ರಿ ಸಚಿನ್ ಪೈಲೆಟ್ ಮತ್ತು ಅವರ ಬೆಂಬಲಿತ 18 ಶಾಸಕರ ಬಂಡಾಯದಿಂದ ಬಿಕ್ಕಟ್ಟಿನಲ್ಲಿದ್ದ ಅಶೋಕ್ ಗೆಲ್ಹೋಟ್ ಭಿನ್ನಮತ ಶಮನವಾಗಿರುವುದರಿಂದ ನಿರಾಳವಾಗಿದ್ದರು.

ಆದರೆ ಕಾಂಗ್ರೆಸ್ ಪಕ್ಷದಲ್ಲಿ ಶಾಸಕರ ನಡುವೆ ದ್ವಂದ್ವ ನಿಲುವು ಇದ್ದು ಕೆಲ ಶಾಸಕರು ಈಗಲೂ ಸರ್ಕಾರದ ವಿರುದ್ಧ ಭಿನ್ನಮತ ಹೊಂದಿದ್ದಾರೆ ಎಂದು ಆರೋಪಿಸಿ ಅವಿಶ್ವಾಸ ನಿರ್ಣಯ ಮಂಡಿಸಲು ಬಿಜೆಪಿ ನಿರ್ಧರಿಸಿದೆ.

ಇದಕ್ಕೆ ಪ್ರತಿಯಾಗಿ ನಿನ್ನೆ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ವಿಶ್ವಾಸ ಮತಯಾಚನೆ ನಿರ್ಣಯ ಮಂಡಿಸಿ ಬಹುಮತ ಸಾಬೀತುಪಡಿಸಲು ಪಕ್ಷವು ತೀರ್ಮಾನ ಕೈಗೊಂಡಿದೆ.

ಇಂದು ಬೆಳಗ್ಗೆ 11 ಗಂಟೆಗೆ ವಿಧಾನಸಭೆ ವಿಶೇಷ ಅವೇಶನ ಆರಂಭವಾಗಿ ಅಗಲಿದ ಗಣ್ಯರಿಗೆ ಶ್ರದ್ದಾಂಜಲಿ ಸಲ್ಲಿಸಿದ ನಂತರ ವಿಧಾನಸಭಾಧ್ಯಕ್ಷ ಸಿ.ಪಿ.ಜೋಷಿ ಕಲಾಪವನ್ನು ಮಧ್ಯಾಹ್ನ 1 ಗಂಟೆಗೆ ಮುಂದೂಡಿದರು.

ಜೈಪುರದಲ್ಲಿ ಭಾರೀ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡಿವೆ. ಹೋಟೆಲ್‍ನಲ್ಲಿರುವ ಕಾಂಗ್ರೆಸ್ ಶಾಸಕರು ವಿಧಾನಸೌಧ ತಲುಪಲು ಅನಾನುಕೂಲವಾಗುತ್ತಿದೆ. ಹೀಗಾಗಿ ಕಲಾಪವನ್ನು ಮುಂದೂಡಬೇಕೆಂದು ಕಾಂಗ್ರೆಸ್ ಮನವಿ ಮಾಡಿತು.

ಈ ಹಿನ್ನೆಲೆಯಲ್ಲಿ ವಿಧಾನಸಭೆ ಅಧ್ಯಕ್ಷರು ಕಲಾಪವನ್ನು ಮಧ್ಯಾಹ್ನ 1 ಗಂಟೆಗೆ ಮುಂದೂಡಿದರು. ಮಧ್ಯಾಹ್ನದ ನಂತರ ನಡೆಯುವ ವಿಶೇಷ ಅವೇಶನ ಭಾರೀ ಕುತೂಹಲ ಕೆರಳಿಸಿದೆ.

ಪ್ರಸ್ತುತ 200 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ 107 ಸ್ಥಾನಗಳನ್ನು ಹೊಂದಿದ್ದು, ಬಹುಜನ ಸಮಾಜಪಕ್ಷ ಮತ್ತು ಕೆಲವು ಪಕ್ಷೇತರರು ಕಾಂಗ್ರೆಸ್‍ಗೆ ಬೆಂಬಲ ನೀಡಿದ್ದಾರೆ. ಬಿಜೆಪಿ 72 ಸ್ಥಾನಗಳನ್ನು ಹೊಂದಿದೆ.

ಕೊರೊನಾ ವೈರಸ್ ಹಾವಳಿಯಿಂದಾಗಿ ವಿಧಾನಸಭೆಯಲ್ಲಿ ಅವೇಶನಕ್ಕಾಗಿ ವಿಶೇಷ ವ್ಯವಸ್ಥೆ ಮಾಡಲಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ಆಸನಗಳನ್ನು ಸಜ್ಜುಗೊಳಿಸಲಾಗಿದೆ.

# ಗೆಲ್ಹೋಟ್ ಗೆಲುವು ಖಚಿತ:
ಈ ಮಧ್ಯೆ ಇಂದು ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಮುಖಂಡರು, ಮುಖ್ಯಮಂತ್ರಿ ಅಶೋಕ್ ಗೆಲ್ಹೋಟ್ ಅವರು ವಿಶ್ವಾಸ ಮತ ಸಾಬೀತುಪಡಿಸುತ್ತಾರೆ. ನಮಗೆ ಸಂಖ್ಯಾಬಲವಿದೆ. ಸರ್ಕಾರ ಕೆಡವಲು ಯತ್ನಿಸಿದ್ದ ಬಿಜೆಪಿಗೆ ಮುಖಭಂಗವಾಗಲಿದೆ ಎಂದು ತಿಳಿಸಿದ್ದಾರೆ.

Facebook Comments

Sri Raghav

Admin