ಪಂಚರಾಜ್ಯ ಫೈಟ್ : ಚುನಾವಣೋತ್ತರ ಸಮೀಕ್ಷೆಗಳು ಏನು ಹೇಳುತ್ತವೆ..? ಇಲ್ಲಿದೆ ಕಂಪ್ಲೀಟ್ ಕವರೇಜ್

ಈ ಸುದ್ದಿಯನ್ನು ಶೇರ್ ಮಾಡಿ

Exit-Poll--01

ನವದೆಹಲಿ. ಡಿ. 07 : ಮಂಬರುವ ಲೋಕಸಭಾ ಚುನಾವಣೆಗೆ ಸೆಮಿಫೈನಲ್ ಎಂದೇ ಹೇಳಲಾಗಿರುವ ಪಂಚ ರಾಜ್ಯಗಳ ವಿಧಾನಸಭಾ ಚುನಾವಣಾಯ ಮತದಾನ ಮುಕ್ತಯವಾಗಿದ್ದು,‌ಚುನಾವಣೋತ್ತರ ಸಮೀಕ್ಷೆಯಲ್ಲಿ ಭಾರೀ ಹಣಾಹಣಿ ಏರ್ಪಟ್ಟಿದೆ. ಶುಕ್ರವಾರ ರಾಜಸ್ಥಾನ ಹಾಗೂ ತೆಲಂಗಾಣ ರಾಜ್ಯಗಳ ವಿಧಾನಸಭಾ ಚುನಾವಣೆಯ ಮತದಾನ ಮುಗಿಯುತ್ತಿದ್ದಂತೆ ವಿವಿಧ ಖಾಸಗಿ ಸುದ್ದಿ ವಾಹಿನಿಗಳು ನಡೆಸಿರುವ ಸಮೀಕ್ಷೆಯಲ್ಲಿ ಮತದಾರನ ನಾಡಿಮಿಡಿತ ಹೊರಬಿದ್ದಿದೆ.

ಕ್ರಿಕೆಟ್‌ ಪಂದ್ಯಾವಳಿಗಿಂತಲೂ ಹೆಚ್ಚು ಕುತೂಹಲ ಮೂಡಿಸಿರುವ ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನೆಕ್‌ ಟು ನೆಕ್‌ ಫೈಟ್‌ ಕಂಡುಬಂದಿದೆ. ಮಧ್ಯಪ್ರದೇಶದಲ್ಲಿ ಅತಂತ್ರ ಸ್ಥಿತಿನಿರ್ಮಾಣವಾಗುವ ಮುನ್ಸೂಚನೆ ಇದೆ. ಛತ್ತೀಸ್‌ಗಢದಲ್ಲಿ ಬಿಜೆಪಿ, ಕಾಂಗ್ರೆಸ್‌ ರಾಜಸ್ಥಾನದಲ್ಲಿ ಜಯಭೇರಿ ಬಾರಿಸುವ ನಿರೀಕ್ಷೆ ಇದೆ. ತೆಲಂಗಾಣದಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ ಕ್ಲೀನ್‌ ಸ್ವೀಪ್‌ ಮಾಡಲಿದೆ.  ಚುನಾವಣಾ ಸಮೀಕ್ಷಾ ಸಂಸ್ಥೆಗಳು ಹಾಗೂ ಮಾಧ್ಯಮ ಸಂಸ್ಥೆಗಳು ಏಕಾಂಗಿಯಾಗಿ ಹಾಗೂ ಜಂಟಿಯಾಗಿ ನಡೆಸಿರುವ ಮತಗಟ್ಟೆ ಸಮೀಕ್ಷೆಯು ಪ್ರಮುಖ ರಾಷ್ಟ್ರೀಯ ಪಕ್ಷಗಳು ಹಾಗೂ ಪ್ರಾದೇಶಿಕ ಪಕ್ಷಗಳ ಹಣೆ ಬರಹವನ್ನು ಬರೆಯುವ ಪ್ರಯತ್ನ ಮಾಡಿವೆ.

ರಾಜಸ್ಥಾನದಲ್ಲಿ ಎಂದಿನಂತೆ ಈ ಬಾರಿ ಕಾಂಗ್ರೆಸ್ ಗೆಲ್ಲಲಿದೆ ಎಂದು ಬಹುತೇಕ ಎಲ್ಲ ಸಮೀಕ್ಷೆಗಳೂ ಹೇಳುತ್ತಿವೆ. ಆದರೆ, ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಳ್ಳುವ, ಅಧಿಕಾರ ಕಳೆದುಕೊಳ್ಳುವ ಮಿಶ್ರ ಫಲಿತಾಂಶಗಳು ಮತಗಟ್ಟೆ ಸಮೀಕ್ಷೆಗಳು ಹೇಳುತ್ತಿವೆಯಾದರೂ, ಕಾಂಗ್ರೆಸ್ ತೀವ್ರ ಪೈಪೋಟಿ ನೀಡುವ ಸಾಧ್ಯತೆಯನ್ನೂ ಯಾವುದೇ ಸಮೀಕ್ಷೆಗಳೂ ಅಲ್ಲಗಳೆದಂತೆ ತೋರುತ್ತಿಲ್ಲ. ಇನ್ನೂ ಕೆಲವು ಸಮೀಕ್ಷೆಗಳು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ಗೂ ಅಧಿಕಾರ ಸಿಗುವ ಸಾಧ್ಯತೆಗಳನ್ನು ಬಿಂಬಿಸುತ್ತಿವೆ. ಕೆಲವು ಸಮೀಕ್ಷೆಗಳೂ ಅಂತಂತ್ರದ ಸಾಧ್ಯತೆಯ ಬಗ್ಗೆಯೂ ಮುನ್ಸೂಚನೆ ನೀಡಿವೆ.

ಇನ್ನು ತೆಲಂಗಾಣದಲ್ಲಿ ತೆಲಂಗಾಣ ರಾಷ್ಟ್ರೀಯ ಸಮಿತಿ ಅಧಿಕಾರ ಉಳಿಸಿಕೊಳ್ಳುವ ಸಾಧ್ಯತೆಗಳಿವೆಯಾದರೂ, ಟಿಡಿಪಿ- ಕಾಂಗ್ರೆಸ್ ಮೈತ್ರಿಕೂಟಕ್ಕೆ ಮುನ್ನಡೆ ಸಿಗುವ ಮುನ್ಸೂಚನೆ ಇದೆ. ಸದ್ಯ ಬಿಜೆಪಿ ಅಧಿಕಾರದಲ್ಲಿರುವ ಛತ್ತೀಸ್ಗಢದ ಮತಗಟ್ಟೆ ಸಮೀಕ್ಷೆ ಸ್ಪಷ್ಟವಾಗಿಲ್ಲ. ಬಹುತೇಕ ಸಮೀಕ್ಷೆಗಳು ಕಾಂಗ್ರೆಸ್ಗೆ ಅಧಿಕಾರ ಸಿಗುವ ಸಾಧ್ಯತೆಯನ್ನು ತಿಳಿಸುತ್ತಿವೆ. ಅಲ್ಲಿ ಪಕ್ಷ ತೊರೆದಿರುವ ಪ್ರಮುಖ ನಾಯಕ ಅಜಿತ್ ಜೋಗಿ ಅವರಿಂದ ಕಾಂಗ್ರೆಸ್ಗೆ ಯಾವುದೇ ತೊಂದರೆಯಾದಂತೆ ಕಾಣಿಸುತ್ತಿಲ್ಲ. ಈ ನಡುವೆ ಬಿಜೆಪಿ ಕೂಡ ತೀವ್ರ ಸೆಣಸಾಟದಲ್ಲಿ ಅಧಿಕಾರ ಹಿಡಿಯ ಬೇಕಾದ ಸಾಧ್ಯತೆಗಳನ್ನೂ ಈ ಸಮೀಕ್ಷೆಗಳು ಬಿಂಬಿಸುತ್ತಿವೆ.  ಒಟ್ಟು 230 ಸ್ಥಾನಗಳಿರುವ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ 110ರಿಂದ 126, ಬಿಜೆಪಿ 90ರಿಂದ 106 ಮತ್ತು ಇತರರು 6ರಿಂದ 22 ಸ್ಥಾನ ಪಡೆಯಲಿದ್ದಾರೆ ಎಂದು ಸಿ-ವೋಟರ್‌ ಸಮೀಕ್ಷೆ ತಿಳಿಸಿದೆ.

# ಟೈಮ್ಸ್‌ ನೌ : ಸಿಎನ್‌ಎಕ್ಸ್‌ ಸಮೀಕ್ಷೆಯ ಪ್ರಕಾರ ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಳ್ಳಲಿದೆ ಎನ್ನಲಾಗುತ್ತಿದೆ. ಬಿಜೆಪಿ 126, ಕಾಂಗ್ರೆಸ್89, ಬಿಎಸ್‌ಪಿ 6 ಮತ್ತು ಇತರರು 9 ಸ್ಥಾನಗಳನ್ನು ಪಡೆಯಲಿದ್ದಾರೆ ಎಂದು ಟೈಮ್ಸ್‌ ನೌ – ಸಿಎನ್‌ಎಕ್ಸ್‌ ಸಮೀಕ್ಷೆ ಹೇಳಿದೆ.

# ಇಂಡಿಯಾ ಟುಡೆ : ಆಕ್ಸಿಸ್‌ ಮೈ ಇಂಡಿಯಾ ಸಮೀಕ್ಷೆ ಪ್ರಕಾರ ಮಧ್ಯಪ್ರದೇಶದಲ್ಲಿ ಬಿಜೆಪಿ 102ರಿಂದ 120, ಕಾಂಗ್ರಸ್‌ 104ರಿಂದ 122, ಬಿಎಸ್‌ಪಿ 1ರಿಂದ 3, ಇತರರು 3ರಿಂದ 8 ಸ್ಥಾನಗಳನ್ನು ಪಡೆಯಲಿದ್ದಾರೆ. ಮಧ್ಯಪ್ರದೇಶದಲ್ಲಿ ಸರಕಾರ ರಚನೆಗೆ ಅಗತ್ಯವಿರುವ ಸಂಖ್ಯಾಬಲ 116 ಸ್ಥಾನಗಳು. ರಾಜಸ್ತಾನದ ಒಟ್ಟು 200 ಸ್ಥಾನಗಳಲ್ಲಿ ಕಾಂಗ್ರೆಸ್‌ 105, ಬಿಜೆಪಿ 85, ಬಿಎಸ್‌ಪಿ 2 ಮತ್ತು ಇತರರು 7 ಸ್ಥಾನ ಪಡೆಯಲಿದ್ದಾರೆ ಎಂದು ಟೈಮ್ಸ್‌ ನೌ – ಸಿಎನ್‌ಎಕ್ಸ್‌ ಸಮೀಕ್ಷೆ ತಿಳಿಸಿದೆ. ಇಂಡಿಯಾ ಟುಡೆ – ಆಕ್ಸಿಸ್‌ ಮೈ ಇಂಡಿಯಾ ಸಮೀಕ್ಷೆ ಪ್ರಕಾರ ಕಾಂಗ್ರೆಸ್‌ ಇಲ್ಲಿ 119ರಿಂದ 141, ಬಿಜೆಪಿ 55ರಿಂದ 72 ಹಾಗೂ ಇತರರು 4ರಿಂದ 11 ಸ್ಥಾನಗಳನ್ನು ಪಡೆಯಲಿದ್ದಾರೆ.  ಛತ್ತೀಸ್‌ಗಡದ 90 ಸ್ಥಾನಗಳಲ್ಲಿ ಬಿಜೆಪಿ 46, ಕಾಂಗ್ರೆಸ್‌ 35, ಬಿಎಸ್‌ಪಿ 7 ಮತ್ತು ಇತರರು 2 ಸ್ಥಾನಗಳನ್ನು ಪಡೆಯಲಿದ್ದಾರೆ ಎಂದು ಟೈಮ್ಸ್‌ ನೌ – ಸಿಎನ್‌ಎಕ್ಸ್‌ ಸಮೀಕ್ಷೆ ಹೇಳಿದೆ. ಆದರೆ, ಇಂಡಿಯಾ ಟುಡೆ – ಆಕ್ಸಿಸ್‌ ಮೈ ಇಂಡಿಯಾ ಸಮೀಕ್ಷೆಯಲ್ಲಿ ಕಾಂಗ್ರೆಸ್‌ ಮುಂದಿದೆ. ಇಲ್ಲಿ ಕಾಂಗ್ರೆಸ್‌ 55ರಿಂದ 65, ಬಿಜೆಪಿ 21ರಿಂದ 31 ಹಾಗೂ ಇತರರು 4ರಿಂದ 8 ಸ್ಥಾನ ಪಡೆಯಲಿದ್ದಾರೆ ಎನ್ನಲಾಗುತ್ತಿದೆ. ಇಲ್ಲಿ ಸರಕಾರ ರಚನೆಗೆ ಅಗತ್ಯವಿರುವ ಸ್ಥಾನ 46.

ತೆಲಂಗಾಣದ ಒಟ್ಟು 119 ಸ್ಥಾನಗಳ ಪೈಕಿ ಟಿಆರ್‌ಎಸ್‌ 66, ಕಾಂಗ್ರೆಸ್‌ 37, ಬಿಜೆಪಿ 11 ಹಾಗೂ ಇತರರು 9 ಸ್ಥಾನಗಳಲ್ಲಿ ಗೆಲ್ಲುವ ಸಾಧ್ಯತೆ ಇದೆ ಎಂದು ಟೈಮ್ಸ್‌ ನೌ – ಸಿಎನ್‌ಎಕ್ಸ್‌ ಸಮೀಕ್ಷೆ ತಿಳಿಸಿದೆ. ಟಿಆರ್‌ಎಸ್‌ 79ರಿಂದ 91, ಕಾಂಗ್ರೆಸ್‌ – ಟಿಡಿಪಿ ಮೈತ್ರಿಕೂಟ 21ರಿಂದ 33 ಹಾಗೂ ಬಿಜೆಪಿ 1ರಿಂದ 3 ಸ್ಥಾನಗಳನ್ನು ಗೆಲ್ಲಲಿದೆ ಎಂದು ಇಂಡಿಯಾ ಟುಡೆ – ಆಕ್ಸಿಸ್‌ ಮೈ ಇಂಡಿಯಾ ಸಮೀಕ್ಷೆ ಹೇಳಿದೆ. ಇಲ್ಲಿ ಸರಕಾರ ರಚನೆಗೆ 60 ಸ್ಥಾನಗಳನ್ನು ಪಡೆಯಬೇಕಿದೆ.  ಮಿಝೋರಾಂನ ಒಟ್ಟು 40 ಸ್ಥಾನಗಳ ಪೈಕಿ ಕಾಂಗ್ರೆಸ್ 16 ಎಂಎನ್‌ಎಫ್‌ 18 ಬಿಜೆಪಿ 0 ಇತರರು 6 ಸ್ಥಾನಗಳನ್ನು ಪಡೆಯುವ ಸಾಧ್ಯತೆ ಇದೆ ಎಂದು ಸಿ-ವೋಟರ್ ಸಮೀಕ್ಷೆ ಹೇಳಿದೆ. ಮಿಝೋರಾಂನ ಚುನಾವಣೋತ್ತರ ಸಮೀಕ್ಷೆ ಪ್ರಕಾರ ಬಿಜೆಪಿ ಇಲ್ಲಿ ಖಾತೆ ತೆರೆಯುವುದೇ ಅನುಮಾನ.

# ಮತ್ತೆ ಬಿಜೆಪಿ ಅಧಿಕಾರಕ್ಕೆ
ಟೈಮ್ಸ್ ನೌ ಮತ್ತು ಸಿಎನ್ಎಕ್ಸ್ ವಾಹಿನಿಗಳ ಮತದಾನೋತ್ತರ ಸಮೀಕ್ಷೆಗಳ ಪ್ರಕಾರ ರಾಜ್ಯದಲ್ಲಿ ಶಿವರಾಜ್ ಸಿಂಗ್ ಚೌಹಾನ್ ಇತಿಹಾಸ ನಿರ್ಮಿಸಲಿದ್ದು, ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎನ್ನಲಾಗಿದೆ.  ಈ ವಾಹಿನಿಗಳ ಮತದಾನೋತ್ತರ ಸಮೀಕ್ಷೆ ವರದಿಗಳ ಪ್ರಕಾರ ಬಿಜೆಪಿ 126, ಕಾಂಗ್ರೆಸ್ 89, ಬಿಎಸ್ಪಿ 6 ಮತ್ತು ಇತರೆ 9 ಸ್ಥಾನಗಳನ್ನು ಗಳಿಸಲಿವೆ.   ಅಂತೆಯೇ, ಆಜ್ ತಕ್ ಮತ್ತು ಎಕ್ಸಿಸ್ ಎಕ್ಸಿಟ್ ಪೋಲ್ ಸಮೀಕ್ಷೆ ಪ್ರಕಾರ ಯಾವ ಪಕ್ಷಕ್ಕೂ ಬಹುಮತ ದೊರೆಯುವುದಿಲ್ಲ ಎನ್ನಲಾಗಿದೆ. ಬಿಜೆಪಿ 111, ಕಾಂಗ್ರೆಸ್ 113 ಹಾಗೂ ಇತರ ಪಕ್ಷಗಳು 6 ಸ್ಥಾನಗಳನ್ನು ಗಳಿಸಲಿವೆ ಎನ್ನಲಾಗಿದೆ.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಶೇ.75ಕ್ಕೂ ಅಧಿಕ ಮತದಾರರು ತಮ್ಮ ಅಮೂಲ್ಯವಾದ ಮತ ಚಲಾಯಿಸಿದ್ದಾರೆ. 230 ವಿಧಾನಸಭೆ ಕ್ಷೇತ್ರಗಳಲ್ಲಿ 227ರಲ್ಲಿ ಶೇ.75ರಷ್ಟು ಮತದಾನವಾಗಿದೆ. 2013ರಲ್ಲಿ ನಡೆದ ಚುನಾವಣೆಯಲ್ಲಿ ಶೇ.72.13 ಮತದಾನವಾಗಿತ್ತು. ಆದರೆ ಈ ಬಾರಿ ಶೇ.3ರಷ್ಟು ಹೆಚ್ಚುವರಿ ಮತದಾನವಾಗಿದೆ. ಆದರೆ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಸ್ಪರ್ಧೆ ನಡೆಯಲಿದ್ದು, ಬಹುಜನ ಸಮಾಜ ಪಕ್ಷ ಮತ್ತು ಸಮಾಜವಾದಿ ಪಕ್ಷ ಕೂಡ ಚುನಾವಣಾ ಕಣದಲ್ಲಿವೆ. ಚುನಾವಣೋತ್ತರ ಸಮೀಕ್ಷೆ ವರದಿ ಏನೇ ಇರಲಿ, ಎಲ್ಲ ಪಕ್ಷಗಳ ಹಣೆಬರಹ ಡಿಸೆಂಬರ್ 11 ರಂದು ಬಹಿರಂಗವಾಗಲಿದೆ.

ಚತ್ತೀಸ್‌ಘಡ್‌ನ 90 ಕ್ಷೇತ್ರಗಳಲ್ಲಿ ಬಿಜೆಪಿ 46 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎನ್ನುತ್ತಿದೆ ಸಮೀಕ್ಷೆ. ಕಾಂಗ್ರೆಸ್‌ 35 ಸ್ಥಾನ ಗೆಲ್ಲಲಿದ್ದರೆ, ಬಿಎಸ್‌ಪಿ ಪಕ್ಷವು 7 ಸ್ಥಾನ ಗಳಿಸುತ್ತದೆಯಂತೆ. ಇತರರು ಅಥವಾ ಪಕ್ಷೆತರರು 2 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಚತ್ತೀಸ್‌ಘಡ್‌ನಲ್ಲಿ 90 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಸರ್ಕಾರ ರಚಿಸಲು 46 ಕ್ಷೇತ್ರಗಳಲ್ಲಿ ಬಹುಮತ ಸಾಧಿಸಬೇಕಾಗಿದೆ. ಸಮೀಕ್ಷೆ ಪ್ರಕಾರ ಸರಿಯಾಗಿ ಬಹುಮತವನ್ನು ಬಿಜೆಪಿ ಪಡೆಯುತ್ತಿದೆಯಾದರೂ ಒಂದು ಸ್ಥಾನ ಕಡಿಮೆಯಾದರೂ ಸಹ ಮೈತ್ರಿ ಸರ್ಕಾರ ರಚನೆ ಆಗುತ್ತದೆ.  ಕಳೆದ ಚತ್ತೀಸ್‌ಘಡ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು 49 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು, ಕಾಂಗ್ರೆಸ್ ಪಕ್ಷ 39 ಕ್ಷೇತ್ರಗಳಲ್ಲಿ ಗೆದ್ದಿದ್ದರೆ, ಬಿಎಸ್‌ಪಿ 1 ಹಾಗೂ ಪಕ್ಷೇತರ ಒಂದು ಸ್ಥಾನಗಳಲ್ಲಿ ಚುನಾವಣೆ ಗೆದ್ದಿದ್ದರು.  ಕಾಂಗ್ರೆಸ್‌ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರಾಹುಲ್‌ ಗಾಂಧಿಗೆ ಹಾಗೂ ಪ್ರಧಾನಿ ನರೇಂದ್ರ ಮೋದಿಗೆ ಈ ಚುನಾವಣೆ ಅಗ್ನಿಪರೀಕ್ಷೆಯಾಗಿತ್ತು.  ಈ ಐದು ರಾಜ್ಯಗಳ ಚುನಾವಣಾ ಫಲಿತಾಂಶ ಡಿಸೆಂಬರ್‌ 11ರಂದು ಹೊರಬೀಳಲಿದೆ.

# ಮಧ್ಯಪ್ರದೇಶದ :  ಒಟ್ಟು ಸ್ಥಾನಗಳು : 230 ಬಹುಮತಕ್ಕೆ: 119
> ಸಿಎನ್ಎಕ್ಸ್ ಸಮೀಕ್ಷೆ: ಬಿಜೆಪಿ: 126 ಕಾಂಗ್ರೆಸ್: 89 ಇತರೆ: 119
> ನೇತಾ ಸಮೀಕ್ಷೆ: ಬಿಜೆಪಿ: 106 ಕಾಂಗ್ರೆಸ್: 112 ಇತರೆ: 12
> ಆಕ್ಸಿಸ್ ಸಮೀಕ್ಷೆ: ಬಿಜೆಪಿ: 102-120 ಕಾಂಗ್ರೆಸ್: 104-122 ಬಿಎಸ್ಪಿ: 1-3  ಇತರೆ: 3-8
> ಸಿವೋಟರ್ ಸಮೀಕ್ಷೆ: ಬಿಜೆಪಿ: 90-106 ಕಾಂಗ್ರೆಸ್: 110-126 ಇತರೆ: 6-22
> ಸಿಎಸ್ಡಿಎಸ್: ಬಿಜೆಪಿ: 94 ಕಾಂಗ್ರೆಸ್: 126

#  ಛತ್ತೀಸ್ಗಡ : ಒಟ್ಟು ಸ್ಥಾನಗಳು: 90 ಬಹುಮತಕ್ಕೆ: 46
> ಜನ್ ಕೀ ಬಾತ್ ಸಮೀಕ್ಷೆ: ಬಿಜೆಪಿ: 40-48 ಕಾಂಗ್ರೆಸ್: 37-43 ಜೆಸಿಸಿ+ಬಿಎಸ್ ಪಿ: 5-6
> ಸಿಎನ್ಎಕ್ಸ್ ಸಮೀಕ್ಷೆ: ಬಿಜೆಪಿ: 46 ಕಾಂಗ್ರೆಸ್: 35 ಬಿಎಸ್ಪಿ: 7
> ಆಕ್ಸಿಸ್ ಸಮೀಕ್ಷೆ: ಬಿಜೆಪಿ: 21-31 ಕಾಂಗ್ರೆಸ್: 55-65 ಇತರೆ: 4-8
> ನೇತಾ ಸಮೀಕ್ಷೆ: ಬಿಜೆಪಿ: 43 ಕಾಂಗ್ರೆಸ್: 40 ಇತರೆ: 7
> ಸಿವೋಟರ್ ಸಮೀಕ್ಷೆ: ಬಿಜೆಪಿ: 39 ಕಾಂಗ್ರೆಸ್: 46 ಇತರೆ: 5

# ರಾಜಸ್ಥಾನ : ಒಟ್ಟು ಸ್ಥಾನಗಳು: 200 ಬಹುಮತಕ್ಕೆ: 101
> ಆಕ್ಸಿಸ್ ಸಮೀಕ್ಷೆ: ಬಿಜೆಪಿ: 55-72 ಕಾಂಗ್ರೆಸ್: 119-141
> ಸಿಎನ್ಎಕ್ಸ್ ಸಮೀಕ್ಷೆ: ಬಿಜೆಪಿ: 85 ಕಾಂಗ್ರೆಸ್: 105 ಬಿಎಸ್ಪಿ: 2
> ಜನ್ ಕೀ ಬಾತ್ ಸಮೀಕ್ಷೆ: ಬಿಜೆಪಿ: 83-103 ಕಾಂಗ್ರೆಸ್: 81-101 ಇತರೆ: 7-11
> ನೇತಾ ಸಮೀಕ್ಷೆ: ಬಿಜೆಪಿ: 85 ಕಾಂಗ್ರೆಸ್: 105 ಇತರೆ: 2

# ತೆಲಂಗಾಣ : ಒಟ್ಟು ಸ್ಥಾನಗಳು: 119 ಬಹುಮತಕ್ಕೆ: 60
> ಇಂಟೆಲಿಜೆನ್ಸ್ ರಿಪೋರ್ಟ್: ಟಿಆರ್ಎಸ್: 85 ಕಾಂಗ್ರೆಸ್: 22 ಟಿಡಿಪಿ: 3 ಬಿಜೆಪಿ: 1  ಎಂಐಎಂ: 7 ಇತರೆ: 1
> ಆಕ್ಸಿಸ್ ಸಮೀಕ್ಷೆ: ಟಿಆರ್ಎಸ್: 79-91 ಕಾಂಗ್ರೆಸ್+ಟಿಡಿಪಿ: 21-33 ಎಐಎಂಐಎಂ: 4-7 ಬಿಜೆಪಿ: 1-3
> ಸಿಎನ್ಎಕ್ಸ್ ಸಮೀಕ್ಷೆ: ಟಿಆರ್ಎಸ್: 66 ಕಾಂಗ್ರೆಸ್+ಟಿಡಿಪಿ: 37 ಬಿಜೆಪಿ: 7 ಇತರೆ: 9

Facebook Comments

Sri Raghav

Admin