ರಜಿನಿಯ ದರ್ಬಾರ್ ಚಿತ್ರ ಬಿಡುಗಡೆಗೆ ಕಂಟಕ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.6- ಸೂಪರ್‌ಸ್ಟಾರ್‌ ರಜನೀಕಾಂತ್ ಅಭಿನಯದ ಬಹುನಿರೀಕ್ಷಿತ ದರ್ಬಾರ್ ಚಿತ್ರ ಬಿಡುಗಡೆಗೆ ಕಂಟಕ ಎದುರಾಗಿದೆ. ಒಂದೆಡೆ ಚಿತ್ರ ವಿತರಕರು ಬಾಕಿ ಹಣ ನೀಡಿ ವಿತರಣೆ ಮುಂದಾಗುವಂತೆ ಪಟ್ಟು ಹಿಡಿದಿದ್ದರೆ ಮತ್ತೊಂದೆಡೆ ಕನ್ನಡ ಭಾಷೆಗೆ ಡಬ್ ಮಾಡಿದ ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡುವಂತೆ ಕರ್ನಾಟಕ ಪರ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.

ಕರ್ನಾಟಕದ ವಿತರಕ ವಸುಪ್ರದಾ ಸುಧೀರ್ ಅವರಿಗೆ ದರ್ಬಾರ್ ಚಿತ್ರ ವಿತರಣೆ ಮಾಡುತ್ತಿರುವ ಲೈಕಾ ಪ್ರೊಡಕ್ಷನ್ಸ್‍ನಿಂದ ಮೂರು ಮುಕ್ಕಾಲು ಕೋಟಿ ಹಣ ಬಾಕಿ ಬರಬೇಕಿದೆ. ಹಣ ನೀಡಿದ ನಂತರ ಬಿಡುಗಡೆಗೆ ಅವಕಾಶ ನೀಡುವಂತೆ ವಸುಪ್ರದಾ ಸುಧೀರ್ ಅವರು ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿ ಮಾಡಿದ್ದಾರೆ.

ಇವರ ಮನವಿಗೆ ದನಿಗೂಡಿಸಿರುವ ಕರ್ನಾಟಕ ವಿತರಕರ ಸಂಘ ವಾಣಿಜ್ಯ ಮಂಡಳಿ ಬಳಿ ಬಾಕಿ ಹಣ ಕೊಡಿಸುವಂತೆ ಒತ್ತಾಯಿಸಿದೆ. ವಿಶ್ವಾದ್ಯಂತ ಇದೇ ಗುರುವಾರ ಬಿಡುಗಡೆಗೊಳ್ಳುತ್ತಿರುವ ದರ್ಬಾರ್ ಚಿತ್ರ ಕನ್ನಡದಲ್ಲಿ ಡಬ್ ಮಾಡಿ ನಂತರ ಕರ್ನಾಟಕದಲ್ಲಿ ಬಿಡುಗಡೆ ಮಾಡುವಂತೆ ಒಕ್ಕೂಟ ಆಗ್ರಹಿಸಿದ್ದು, ಈ ಸಂಬಂಧವೂ ಒಕ್ಕೂಟ ಇಂದು ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಒಟ್ಟಾರೆ ಚಿತ್ರ ಬಿಡುಗಡೆಗೂ ಮುನ್ನ ಕಂಟಕ ಎದುರಾಗಿದ್ದು, ಈ ಎಲ್ಲಾ ಕಂಟಕ ಕಳೆದು ಚಿತ್ರ ಬಿಡುಗಡೆಯಾಗಬೇಕಿದೆ. ಬಾಕಿ ಹಣ ನೀಡುವ ಸಂಬಂಧ ಈಗಾಗಲೇ ದಕ್ಷಿಣ ಭಾರತ ವಿತರಕರ ಸಂಘಕ್ಕೂ ದೂರು ನೀಡಿದ್ದು, ಸಮಸ್ಯೆ ಬಗೆಹರಿಯುವ ಭರವಸೆ ಇದೆ ಎಂದು ವಸುಪ್ರದಾ ಸುಧೀರ್ ಹೇಳಿದ್ದಾರೆ.

Facebook Comments