ಪೆರಿಯಾರ್ ಹೇಳಿಕೆ: ರಜನಿಕಾಂತ್ ವಿರುದ್ಧ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.24- ವಿಚಾರವಾದಿ ಇ.ವಿ.ರಾಮಸ್ವಾಮಿ ಪೆರಿಯಾರ್ ಕುರಿತ ವಿವಾದಾತ್ಮಕ ಹೇಳಿಕೆಗಾಗಿ ಸೂಪರ್ ಸ್ಟಾರ್ ರಜನಿಕಾಂತ್ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ಇಂದು ವಜಾಗೊಳಿಸಿದೆ. ಇದರಿಂದಾಗಿ ರಜನಿಕಾಂತ್ ಕಾನೂನು ತೊಡಕಿನಿಂದ ಪಾರಾದಂತಾಗಿದೆ. ದ್ರಾವಿಡರ್ ವಿಡುದೆಲೈ ಕಳಗಂ ಸಂಘ ರಜನಿಕಾಂತ್ ವಿರುದ್ದ ಹೈಕೋರ್ಟ್‍ನಲ್ಲಿ ದಾವೆ ಹೂಡಿತ್ತು.

ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ರಾಜಮಾಣಿಕಂ ಅರ್ಜಿದಾರರು ಕಟ್ಲೆಯನ್ನು ವಾಪಸ್ ಪಡೆಯುವುದಾಗಿ ತಿಳಿಸಿದ ನಂತರ ಈ ಪ್ರಕರಣವನ್ನು ವಜಾಗೊಳಿಸಿದರು.
ಇದಕ್ಕೂ ಮುನ್ನ ಸರ್ಕಾರಿ ಅಭಿಯೋಜಕ ಪಿ.ನಟರಾಜನ್ ಅರ್ಜಿದಾರರು ತಮಗೆ ಲಭ್ಯವಿರುವ ಪರ್ಯಾಯ ಪರಿಹಾರೋಪಾಯಗಳನ್ನು ಕೋರದೆ ಈ ಅರ್ಜಿಯನ್ನು ಸಲ್ಲಿಸಿದ್ದಾರೆ. ಹೀಗಾಗಿ ಇದು ವಜಾಗೊಳಿಸುವುದಕ್ಕೆ ಯೋಗ್ಯವಾದುದು ಎಂದು ವಾದಿಸಿದ್ದರು.

ನ್ಯಾಯಮೂರ್ತಿ ರಾಜಮಾಣಿಕಂ ಅರ್ಜಿದಾರರ ಪರ ವಕೀಲರಿಗೆ ಈ ಬಗ್ಗೆ ಪ್ರಶ್ನಿಸಿ ಪ್ರಕರಣವನ್ನು ವಾಪಸ್ ಪಡೆಯುತ್ತೀರಾ ಅಥವಾ ಮುಂದುವರೆಸುವಿರಾ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ದ್ರಾವಿಡರ್ ವಿಡದಲೈ ಪರ ವಕೀಲರು ತಾವು ಪ್ರಕರಣದಿಂದ ಹಿಂದೆ ಸರಿಯುವುದಾಗಿ ತಿಳಿಸಿದರು. ನಂತರ ಇದನ್ನು ದಾಖಲಿಸಿಕೊಂಡು ನ್ಯಾಯಮೂರ್ತಿ ಅರ್ಜಿಯನ್ನು ವಜಾಗೊಳಿಸಿದರು.

ತಮಿಳು ನಿಯತಕಾಲಿಕೆಯ ತುಘಲಕ್ ಪತ್ರಿಕೆಯ 50ನೇ ವಾರ್ಷಿಕೋತ್ಸವ ಮತ್ತು ಓದುಗರ ಸಂಪರ್ಕ ಕಾರ್ಯಕ್ರಮದಲ್ಲಿ ರಜನಿ ಅವರು, ವಿಚಾರವಾದಿ ಪೆರಿಯಾರ್ ಬಗ್ಗೆ ಹೇಳುತ್ತಾ, ಅವರು ನಡೆಸಿದ ರ್ಯಾಲಿಯಲ್ಲಿ ಶ್ರೀ ರಾಮಚಂದ್ರಮೂರ್ತಿ ಮತ್ತು ಸೀತಾದೇವಿ ವಿವಸ್ತ್ರಗಳು ಮತ್ತು ಚಪ್ಪಲಿಹಾರ ವೈಶಿಷ್ಟ್ಯದ ಹಾರದಿಂದ ಅಲಂಕೃತ ಮೆರವಣಿಗೆ ಬಗ್ಗೆ ಉಲ್ಲೇಖಿಸಿ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು.

Facebook Comments