ರಾಜಕೀಯಕ್ಕೆ ಬರುವ ಬಗ್ಗೆ ಶೀಘ್ರ ತೀರ್ಮಾನ : ರಜನಿಕಾಂತ್

ಈ ಸುದ್ದಿಯನ್ನು ಶೇರ್ ಮಾಡಿ

ಚೆನ್ನೈ,ನ.30-ರಾಜಕೀಯಕ್ಕೆ ಬರುವ ಬಗ್ಗೆ ಶೀಘ್ರ ತೀರ್ಮಾನ ಕೈಗೊಳ್ಳುವುದಾಗಿ ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ. ಚೆನ್ನೈನ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದ `ರಜನಿ ಮಕ್ಕಳ್ ಮಾಂಡ್ರಮ್’ ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡ ನಂತರ ರಜನಿಕಾಂತ್ ಈ ಭರವಸೆ ನೀಡಿದರು.

ಚಿತ್ರರಂಗದಲ್ಲಿ ಮುಂದುವರೆಯಬೇಕೋ ಅಥವಾ ರಾಜಕೀಯ ಪಕ್ಷ ಸ್ಥಾಪಿಸಿ ರಾಜಕೀಯ ಪ್ರವೇಶಿಸಬೇಕೋ ಎಂಬ ಬಗ್ಗೆ ಚರ್ಚಿಸಲು ಮಾಂಡ್ರಮ್ ಪಕ್ಷದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇನೆ. ಕಾರ್ಯಕರ್ತರು ತಮ್ಮ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಎಲ್ಲರ ಅಭಿಪ್ರಾಯಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಶೀಘ್ರ ತೀರ್ಮಾನಕೈಗೊಳ್ಳುತ್ತೇನೆ ಎಂದು ರಜನಿ ತಿಳಿಸಿದರು.

2021 ಮೇ ತಿಂಗಳಿನಲ್ಲಿ ತಮಿಳು ನಾಡು ವಿಧಾನಸಭೆಗೆ ಚುನಾವಣೆ ನಡೆಯುತ್ತಿರುವುದರಿಂದ ರಜನಿಕಾಂತ್ ರಾಜಕೀಯ ಪ್ರವೇಶಿಸುತ್ತಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ರಜನಿ ಅವರು ಬಿಜೆಪಿ ಪಕ್ಷದೊಂದಿಗೆ ಗುರುತಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಬಿಂಬಿಸಲಾಗುತ್ತಿತ್ತು. ಆದರೆ, ತಮಿಳುನಾಡಿಗೆ ಆಗಮಿಸಿದ ಅಮಿತ್ ಷಾ ಅವರು ರಜನಿ ಅವರನ್ನು ಭೇಟಿ ಮಾಡದೆ ಹಿಂತಿರುಗಿದ್ದ ಹಿನ್ನಲೆಯ ಅಭಿಮಾನಿಗಳಲ್ಲಿ ಗೊಂದಲ ಏರ್ಪಟ್ಟಿತ್ತು.

ಈ ಎಲ್ಲ ಬೆಳವಣಿಗೆ ಬೆನ್ನಲ್ಲೇ ಮಾಂಡ್ರಮ್ ಪಕ್ಷದ ಸಭೆ ನಡೆಸಿರುವ ರಜನಿ ತಮ್ಮ ನಿರ್ಧಾರವನ್ನು ಗೌಪ್ಯವಾಗಿಟ್ಟು, ತಮ್ಮ ಅಭಿಮಾನಿಗಳಿಗೆ ತಮ್ಮ ಸಿನಿಮಾ ಶೈಲಿಯಲ್ಲೇ ಒಣಕಂ ಹೇಳಿ ಹೋಗಿರುವುದರಿಂದ ಅವರ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

Facebook Comments