ಬ್ರೇಕಿಂಗ್ : ಸೂಪರ್ ಸ್ಟಾರ್ ರಜಿನಿಗೆ 51ನೇ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ..!

ಈ ಸುದ್ದಿಯನ್ನು ಶೇರ್ ಮಾಡಿ

ಚನ್ನೈ,ಏ.1- ಭಾರತದ ಚಿತ್ರರಂಗದ ಅತ್ಯುನ್ನತ ಗೌರವವಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು 2019ನೇ ಸಾಲಿಗೆ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಘೋಷಣೆ ಮಾಡಲಾಗಿದೆ.ಕನ್ನಡ, ತಮಿಳು, ತೆಲಗು, ಮಲೆಯಾಳಂ, ಹಿಂದಿ, ಮರಾಠಿ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ರಜನಿಕಾಂತ್ ಜಗತ್‍ವಿಕ್ಯಾತರಾಗಿದ್ದಾರೆ. ಭಾರತದಲ್ಲಷ್ಟೇ ಅಲ್ಲ ಚೀನಾ, ಜಪಾನ್, ರಷ್ಯಾ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಭಾಷಾಂತರಿತ ರಜನಿಕಾಂತ್ ಚಿತ್ರಗಳಿಗೆ ಜನಮನ್ನಣೆ ಸಿಕ್ಕಿದೆ.

ಕೇಂದ್ರ ವಾರ್ತಾ ಮತ್ತು ಪ್ರಸಾರಾಂಗ ಸಚಿವ ಪ್ರಕಾಶ್ ಜಾವಡೇಕರ್ ಅವರು ಇಂದು ಪ್ರಶಸ್ತಿಯನ್ನು ಘೋಷಣೆ ಮಾಡಿದ್ದು, ರಜನಿಕಾಂತ್ ಅವರಿಗೆ 51ನೇ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡುತ್ತಿರುವುದಾಗಿ ಹೇಳಿದರು.
ಚಿತ್ರರಂಗದ ನಟ, ನಿರ್ಮಾಪಕ, ಚಿತ್ರಕಥೆಗಾರ ರಜನಿಕಾಂತ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಿಸುತ್ತಿರುವುದಕ್ಕೆ ತಮಗೆ ಸಂತೋಷವಾಗಿದೆ ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.

ಈ ಮೊದಲು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕøತರಾದ ಆಶಾಬೋಸ್ಲೆ, ನಿರ್ದೇಶಕ ಶುಭಾಶ್‍ಗಾಯ್, ಮಲೆಯಾಳಂನ ಸೂಪರ್ ಸ್ಟಾರ್ ಮೋಹನ್‍ಲಾಲ್, ಹಿರಿಯ ನಟ ಬಿಸ್ವಜಿತ್ ಚಟರ್ಜಿ, ಗಾಯಕ ಶಂಕರ್ ಮಹದೇವನ್ ಅವರುಗಳನ್ನೊಳಗೊಂಡ ಆಯ್ಕೆ ಸಮಿತಿ ರಜನಿಕಾಂತ್ ಅವರ ಹೆಸರನ್ನು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಶಿಫಾರಸು ಮಾಡಿತ್ತು.
ಕೊನೆಗೆ ಕೇಂದ್ರ ಸರ್ಕಾರ ಇಂದು ಪ್ರಶಸ್ತಿಯನ್ನು ಘೋಷಣೆ ಮಾಡಿದೆ. ಪ್ರಶಸ್ತಿ ಸ್ವರ್ಣ ಕಮಲ, 10 ಲಕ್ಷ ರೂ. ನಗದನ್ನು ಒಳಗೊಂಡಿದೆ.

ಇದರ ಬೆನ್ನಲ್ಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಟ್ವಿಟ್ ಮಾಡಿದ್ದು, ಪ್ರೀತಿಯ ವ್ಯಕ್ತಿತ್ವ ಹೊಂದಿರುವ, ಎಲ್ಲಾ ಪ್ರೀಳಿಗೆಗೂ ಅತ್ಯಂತ ನೆಚ್ಚಿನ ನಟರಾಗಿರುವ ರಜನಿಕಾಂತ್ ಅವರ ವೈವಿದ್ಯಮಯ ಪಾತ್ರಗಳ ಮೂಲಕ ಜನಮನ ಸೆಳೆದಿದ್ದಾರೆ. ಅವರಿಗೆ ದಾದಾ ಸಾಬೇಹ್ ಫಾಲ್ಕೆ ಪ್ರಶಸ್ತಿ ಘೋಷಣೆಯಾಗಿರುವುದು ಅತ್ಯಂತ ಸಂತೋಷದ ವಿಷಯವಾಗಿದೆ ಎಂದು ಶುಭಾಶಯ ಹೇಳಿದ್ದಾರೆ.

ದಕ್ಷಿಣ ಭಾರತದಲ್ಲಿ ತಮಿಳಿನ ಎಲ್.ವಿ.ಪ್ರಸಾದ್ ಅವರಿಗೆ 1982ರಲ್ಲಿ, ಶಿವಾಜಿ ಗಣೇಶನ್ ಅವರಿಗೆ 1996ರಲ್ಲಿ, ರಜನಿಕಾಂತ್ ಅವರ ಗುರುಗಳಾದ ಕೆ.ಬಾಲಚಂದ್ರ ಅವರಿಗೆ 2010ರಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆಯಾದರೆ, ಕನ್ನಡದ ಮೇರು ನಟ ಡಾ.ರಾಜ್‍ಕುಮಾರ್ ಅವರಿಗೆ 1995ರಲ್ಲಿ ಫಾಲ್ಕೆ ಪ್ರಶಸ್ತಿ ಪ್ರದಾನವಾಗಿದೆ. ತೆಲಗು ಚಿತ್ರರಂಗದ ಮೂವರಿಗೆ ಏಳು ಮಂದಿ ಫಾಲ್ಕೆ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

2018ರಲ್ಲಿ ಬಾಲಿವುಡ್‍ನ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಲಾಗಿತ್ತು. ಕೊರೊನಾದಿಂದಾಗಿ 2019ರ ಪ್ರಶಸ್ತಿಯನ್ನು ಘೋಷಣೆ ಮಾಡಲಿರಲಿಲ್ಲ. ಈಗ ಅಕೃತವಾಗಿ ಪ್ರಶಸ್ತಿ ಪ್ರಕಟವಾಗಿದೆ. ತಮಿಳುನಾಡಿಗೆ ವಿಧಾನಸಭೆ ಚುನಾವಣೆ ನಡೆಯುವ ಸಂದರ್ಭದಲ್ಲೇ ಪ್ರಶಸ್ತಿ ಘೋಷಣೆಯಾಗಿರುವುದು ಕಾಕತಾಳೀಯವಾಗಿದೆ.

ರಜನಿಕಾಂತ್ ಅವರು 1950ರ ಡಿಸೆಂಬರ್ 12ರಂದು ಬೆಂಗಳೂರಿನಲ್ಲಿ ಜನಿಸಿದರು. ಚಿತ್ರರಂಗಕ್ಕೆ ಕಾಲಿಟ್ಟ ಅವರು ಕ್ರಮೇಣ ತಮಿಳುನಾಡಿನಲ್ಲಿ ಪ್ರಖ್ಯಾತ ನಟರಾಗಿ ಇಂದು ತಲೈವ ಆಗಿದ್ದಾರೆ. ರಜನಿಕಾಂತ್ ಅವರ ಚಿತ್ರ ಬಿಡುಗಡೆ ದಿನ ದಕ್ಷಿಣ ಭಾರತದ ರಾಜ್ಯಗಳಲ್ಲಷ್ಟೇ ಅಲ್ಲ, ಉತ್ತರ ಭಾರತದ ಬಹಳಷ್ಟು ರಾಜ್ಯಗಳಲ್ಲೂ ಹಬ್ಬದ ವಾತಾವರಣ ನಿರ್ಮಾಣವಾಗುತ್ತದೆ.

Facebook Comments

Sri Raghav

Admin