ಅಯೋಧ್ಯೆ ವಿವಾದದಲ್ಲಿ ಮುಸ್ಲಿಂ ಪರ ವಕಾಲತು ವಹಿಸಿ ವಾದ ಮಂಡಿಸಿದ್ದ ವಕೀಲ ಧವನ್ ವಜಾ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಡಿ.3- ರಾಮಮಂದಿರ-ಬಾಬರಿ ಮಸೀದಿ ಭೂ ವಿವಾದ ಪ್ರಕರಣದಲ್ಲಿ ಸುನ್ನಿ ವಕ್ಫ್ ಮಂಡಳಿ ಮತ್ತು ಇತರ ಮುಸ್ಲಿಂ ಸಂಘಟನೆಗಳ ಪರವಾಗಿ ವಕಾಲತು ವಹಿಸಿ ವಾದ ಮಂಡಿಸಿದ್ದ ಹಿರಿಯ ವಕೀಲ ರಾಜೀವ್ ಧವನ್ (74) ಅವರನ್ನು ಅಯೋಧ್ಯೆ ಪ್ರಕರಣದಿಂದ ವಜಾಗೊಳಿಸಲಾಗಿದೆ.

ಜಮಾಯತ್ ಉಲೇಮಾ-ಇ-ಹಿಂದ್ ಸಂಘಟನೆಯನ್ನು ಪ್ರತಿನಿಧಿಸಿರುವ ವಕೀಲ ಏಜಾಜ್ ಮಕ್ಬುಲ್ ಸುಪ್ರೀಂಕೋರ್ಟ್ ನಿಯಮಾವಳಿಗಳ ಅನ್ವಯ ಪ್ರದತ್ತವಾದ ಅಧಿಕಾರ (ಅಡ್ವೊಕೇಟ್ ಆನ್ ರೆಕಾರ್ಡ್-ಎಒಆರ್) ಬಳಸಿ ಅಯೋಧ್ಯೆ ಮರುಪರಿಶೀಲನಾ ಅರ್ಜಿ ವಿಚಾರಣೆಯಿಂದ ಧವನ್ ಅವರನ್ನು ಹೊರಹಾಕಿದ್ದಾರೆ.

ಎಒಆರ್ ಏಜಾಜ್ ಮಕ್ಬುಲ್ ಅವರು ನನ್ನನ್ನು ಈ ಪ್ರಕರಣದಿಂದ ವಜಾಗೊಳಿಸಿದ್ದಾರೆ. ಈ ನಿರ್ಧಾರಕ್ಕೆ ಯಾವುದೇ ವಿರೋಧ ವ್ಯಕ್ತಪಡಿಸದೆ ಅದಕ್ಕೆ ನಾನು ಸಮ್ಮತಿಸಿ ಅವರಿಗೆ ಪತ್ರವನ್ನೂ ಬರೆದಿದ್ದೇನೆ. ಇನ್ನು ಮುಂದೆ ಈ ಪ್ರಕರಣದಲ್ಲಿ ನಾನು ಇರುವುದಿಲ್ಲ ಎಂದು ಫೇಸ್‍ಬುಕ್ ಪೊಸ್ಟ್‍ನಲ್ಲಿ ದವನ್ ಹೇಳಿದ್ದಾರೆ. ಆದರೆ, ತಮ್ಮ ವಜಾಕ್ಕೆ ನೀಡಿರುವ ಕಾರಣಕ್ಕೆ ಅವರು ಆಕ್ಷೇಪ ವ್ಯಕ್ತಪಡಿಸಿದರು. ಅನಾರೋಗ್ಯ ಕಾರಣದಿಂದ ನನ್ನನ್ನು ವಜಾಗೊಳಿಸಿದ್ದಾರೆ ಎಂದು ತಿಳಿಸಿದ್ದಾರೆ. ಇದು ಶುದ್ಧ ಸುಳ್ಳು ಮತ್ತು ಹಗೆತನದ ಕ್ರಮ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಹಿಂದೂ ಸಂಘಟನೆಗಳ ತೀವ್ರ ವಿರೋಧ ಮತ್ತು ಪ್ರಾಣ ಬೆದರಿಕೆ ಕರೆಗಳ ನಡುವೆಯೂ ರಾಜೀವ್ ಧವನ್ ಮುಸ್ಲಿಂ ಸಂಘಟನೆಗಳ ಪರ ವಕಾಲತು ವಹಿಸಿ ಅಯೋಧ್ಯೆ ಪ್ರಕರಣದ 40 ದಿನಗಳ ವಿಚಾರಣೆಯಲ್ಲಿ ಎರಡು ವಾರಗಳ ಕಾಲ ವಾದ ಮಂಡಿಸಿದ್ದರು.

ಸುಪ್ರೀಂಕೋರ್ಟ್‍ನ ಆಗಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯ್ ನೇತೃತ್ವದ ಪಂಚ ನ್ಯಾಯಾಧೀಶರ ಸಂವಿಧಾನ ಪೀಠ ರಾಜೀವ್ ಧವನ್ ಅವರ ವಾದವನ್ನು ಆಲಿಸಿತ್ತು.
ಅಯೋಧ್ಯೆ ತೀರ್ಪು ಕುರಿತು ನಿನ್ನೆ ಅಖಿಲ ಭಾರತ ಮುಸ್ಲಿಂ ಕಾನೂನು ವೈಯಕ್ತಿಕ ಮಂಡಳಿ ಸೇರಿದಂತೆ ಕೆಲ ಸಂಘಟನೆಗಳು ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದು, ಈ ವಿಚಾರಣೆಯಲ್ಲಿ ರಾಜೀವ್ ಧವನ್ ಇನ್ನು ಮುಂದೆ ಲಭ್ಯವಿಲ್ಲ.

Facebook Comments