ರಾಜೀವ್ ಗಾಂಧಿ ಫೌಂಡೇಷನ್ ಮತ್ತು ಇಂದಿರಾ ಗಾಂಧಿ ಸ್ಮಾರಕ ಟ್ರಸ್ಟ್ ವಿರುದ್ಧ ತನಿಖೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜು.8- ಮನಿಲ್ಯಾಂಡರಿಂಗ್, ಆದಾಯ ತೆರಿಗೆ ಕಾಯ್ದೆ ಹಾಗೂ ವಿದೇಶಿ ಕೊಡುಗೆಗಳ ಕಾನೂನು ನಿಬಂಧನೆಗಳನ್ನು ಉಲ್ಲಂಘಿಸಿದ ಆರೋಪಕ್ಕೆ ಸಿಲುಕಿರುವ ರಾಜೀವ್ ಗಾಂಧಿ ಫೌಂಡೇಷನ್, ರಾಜೀವ್ ಗಾಂಧಿ ಚಾರಿಟಬಲ್ ಟ್ರಸ್ಟ್ ಮತ್ತು ಇಂದಿರಾ ಗಾಂಧಿ ಸ್ಮಾರಕ ಟ್ರಸ್ಟ್ ವಿರುದ್ಧದ ಆರೋಪಗಳ ತನಿಖೆಗೆ ಕೇಂದ್ರ ಸರ್ಕಾರ ಅಂತರ್ ಸಚಿವಾಲಯ ಸಮಿತಿ ರಚಿಸಿದೆ.

ಕೇಂದ್ರ ಗೃಹ ಇಲಾಖೆಯ ವಕ್ತಾರರು ಇದನ್ನು ಖಚಿತಪಡಿಸಿದ್ದು, ಜಾರಿ ನಿರ್ದೇಶನಾಲಯ ವಿಶೇಷ ನಿರ್ದೇಶಕರು ತನಿಖಾ ಸಮಿತಿಯ ಮುಖ್ಯಸ್ಥರಾಗಿರುತ್ತಾರೆ. ಜೊತೆಗೆ ಸಿಬಿಐ ಕೂಡ ಸಮಿತಿಯ ಭಾಗವಾಗಿರುತ್ತದೆ.  1991ರಲ್ಲಿ ಸ್ಥಾಪನೆಯಾದ ರಾಜೀವ್ ಗಾಂಧಿ ಫೌಂಡೇಷನ್‍ಗೆ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್, ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ, ಯುವ ನಾಯಕಿ ಪ್ರಿಯಾಂಕ ವಾದ್ರಾ, ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಸದಸ್ಯರಾಗಿದ್ದಾರೆ.

ರಾಜೀವ್ ಗಾಂಧಿ ಚಾರಿಟಬಲ್ ಟ್ರಸ್ಟ್‍ಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅಧ್ಯಕ್ಷರಾಗಿದ್ದರೆ, ಇಂದಿರಾಗಾಂಧಿ ಸ್ಮಾರಕ ಟ್ರಸ್ಟ್‍ಗೂ ಇವರೇ ಮೇಲ್ವಿಚಾರಕರಾಗಿದ್ದಾರೆ. ಇತ್ತೀಚೆಗೆ ಭಾರತ ಮತ್ತು ಚೀನಾ ನಡುವೆ ಲಡಾಕ್‍ನಲ್ಲಿ ಘರ್ಷಣೆ ನಡೆದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಈ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿಲ್ಲ ಎಂದು ರಾಹುಲ್ ಗಾಂಧಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಇದಕ್ಕೆ ತಿರುಗೇಟು ನೀಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡ , ರಾಜೀವ್ ಗಾಂಧಿ ಫೌಂಡೇಷನ್, ಇಂದಿರಾಗಾಂಧಿ ಸ್ಮಾರಕ ಟ್ರಸ್ಟ್ ಹಾಗೂ ರಾಜೀವ್ ಗಾಂಧಿ ಚಾರಿಟಬಲ್ ಟ್ರಸ್ಟ್‍ನಲ್ಲಿ ಗಾಂಧಿ ಕುಟುಂಬದವರು ನೂರಾರು ಕೋಟಿ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದರು.

ವಿದೇಶದಿಂದ ಬಂದ ದೇಣಿಗೆ ಹಾಗೂ ಈ ಮೂರು ಟ್ರಸ್ಟ್‍ಗಳಿಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ವಿಪ್ಪತ್ತು ನಿರ್ವಹಣಾ ನಿಧಿಯನ್ನು ಬಳಸಿಕೊಳ್ಳಲಾಗಿದೆ. ಜೊತೆಗೆ ಅನೇಕ ರಾಜ್ಯಗಳ ಒಡೆತನದಲ್ಲಿರುವ ಕಂಪನಿಗಳು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಮತ್ತಿತರರು ಇದರ ಪಾಲುದಾರರಾಗಿದ್ದಾರೆ ಎಂದು ಆರೋಪ ಮಾಡಿದ್ದರು.

ಪ್ರಧಾನಮಂತ್ರಿ ರಾಷ್ಟ್ರೀಯ ವಿಪ್ಪತ್ತು ನಿರ್ವಹಣಾ ನಿಧಿಯನ್ನು ದೇಶದಲ್ಲಿ ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಲು ಬಳಸಲಾಗುತ್ತದೆ ಆದರೆ ಗಾಂಧಿ ಕುಟುಂಬದವರು ಇಲ್ಲೂ ಕೂಡ ನೂರಾರು ಕೋಟಿ ವಂಚನೆ ಎಸಗಿದೆ ಎಂದು ನಡ್ಡ ದೂರಿದ್ದರು.

ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಕೂಡ ರಾಜೀವ್ ಗಾಂಧಿ ಫೌಂಡೇಷನ್ ಒಂದು ರೀತಿ ವ್ಯಾಪಾರ ಮುಕ್ತ ಒಪ್ಪಂದ ಎಂಬಂತೆ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದರು.  ಇದೀಗ ಸರ್ಕಾರ ಈ ಮೂರು ಟ್ರಸ್ಟ್‍ಗಳ ಮೇಲೆ ತನಿಖೆ ನಡೆಸಲು ಆದೇಶಿಸಿದೆ.

Facebook Comments