ತ್ರಿಮೂರ್ತಿಗಳನ್ನು ಕಳೆದುಕೊಂಡು ಅನಾಥವಾದ ಚಂದನವನ
ಬೆಂಗಳೂರು,ನ.25- ತೀವ್ರ ಹೃದಯಘಾತದಿಂದ ನಿನ್ನೆ ರಾತ್ರಿ ನಿಧನರಾದ ಅಂಬರೀಶ್ ಕೊನೆಯುಸಿರೆಳೆಯುವುದರೊಂದಿಗೆ ಕನ್ನಡ ಚಿತ್ರರಂಗದ ಮೂವರು ಧ್ರುವತಾರೆಗಳು ಇಲ್ಲದಂತಾಗಿದೆ. ಕನ್ನಡ ಚಿತ್ರರಂಗದ ಅನಘ್ರ್ಯ ರತ್ನ, ಅಭಿಮಾನಿಗಳ ಪಾಲಿನ ನೆಚ್ಚಿನ ಅಣ್ಣ ವರನಟ ಡಾ.ರಾಜ್ಕುಮಾರ್, ಸಾಹಸಿಂಹ ವಿಷ್ಣುವರ್ಧನ್ ಹಾಗೂ ರೆಬಲ್ ಸ್ಟಾರ್ ಖ್ಯಾತಿಯ ಅಂಬರೀಶ್ ಅವರನ್ನು ತ್ರಿಮೂರ್ತಿಗಳೆಂದೇ ಚಿತ್ರಲೋಕದಲ್ಲಿ ಕರೆಯಲಾಗುತ್ತಿತ್ತು.
ಸುಮಾರು ಹಲವು ದಶಕಗಳಿಂದಲೂ ಈ ಮೂವರನ್ನು ಅಣ್ಣತಮ್ಮಿಂದಿರೆಂದೇ ಅಭಿಮಾನಿಗಳು ಕರೆಯುತ್ತಿದ್ದರು. ಚಿತ್ರರಂಗದಲ್ಲಿ ಏನೇ ಸಣ್ಣಪುಟ್ಟ ವ್ಯತ್ಯಾಸಗಳಾದರೂ ಮುಂದೆ ನಿಂತು ಅದನ್ನು ಪರಿಹರಿಸುತ್ತಿದುದ್ದೇ ಈ ಮೂವರು. ನಾಡು-ನುಡಿ, ನೆಲ-ಜಲ ಸೇರಿದಂತೆ ಕನ್ನಡದ ವಿಷಯದಲ್ಲಿ ಏನೇ ಅನ್ಯಾಯವಾದರೂ ಮುಂಚೂಣಿಯಲ್ಲಿದ್ದು ಹೋರಾಟಕ್ಕಿಳಿಯತ್ತಿದ್ದರು.
ಬೆಳಗಾವಿ ಜಿಲ್ಲೆಯಿಂದ ಗೋಕಾಕ್ ತಾಲ್ಲೂಕನ್ನು ನೆರೆಯ ಮಹಾರಾಷ್ಟ್ರಕ್ಕೆ ಸೇರಿಸಬೇಕೆಂಬ ಕೂಗು ಎದ್ದಾಗ ಇಡೀ ಕನ್ನಡಿಗರ ಆಸ್ಮಿತೆಯನ್ನು ಬಡಿದೆಬ್ಬಿಸಿದೇ ಡಾ.ರಾಜ್ಕುಮಾರ್, ವಿಷ್ಣುವರ್ಧನ್ ಹಾಗೂ ಅಂಬರೀಶ್. ಈ ಮೂವರು ನಾಯಕರು ಹೋರಾಟಕ್ಕೆ ಧುಮುಕುತ್ತಿದುದ್ದೇ ಕರ್ನಾಟಕ ಮೂಲೆ ಮೂಲೆಗಳಿಂದಲೂ ಲಕ್ಷೋಪಾದಿಯಲ್ಲಿ ಹೋರಾಟಕ್ಕಿಳಿದು ಗೋಕಾಕ್ನ್ನು ರಾಜ್ಯದಲ್ಲೇ ಉಳಿಯುವಂತೆ ಮಾಡಿದ್ದಲ್ಲಿ ಇವರ ಹೋರಾಟ ಅನನ್ಯವಾದುದು.
ರಾಜಧಾನಿ ಬೆಂಗಳೂರು ಸೇರಿದಂತೆ ಮತ್ತಿತರ ಕಡೆ ಪರಭಾಷಿಕರ ಹಾವಳಿ ಹೆಚ್ಚಾದಾಗ ಅದನ್ನು ಜಾಣ್ಮೆಯಿಂದಲೇ ನಿಭಾಯಿಸಿದ ಕೀರ್ತಿಯೂ ಇವರಿಗೆ ಸಲ್ಲುತ್ತದೆ. ಹೀಗೆ ಕನ್ನಡ ಚಿತ್ರರಂಗದ ಬೆಳವಣಿಗೆಗಳಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡುವ ಮೂಲಕ ತಾಯ್ನಾಡಿನ ಋಣವನ್ನು ಸಲ್ಲಿಸಿದ್ದಾರೆ. ಡಾ.ರಾಜ್ಕುಮಾರ್, ವಿಷ್ಣುವರ್ಧನ್ ಹಾಗೂ ಅಂಬರೀಶ್ ನಿಧನರಾಗಿರುವುದರಿಂದ ಕನ್ನಡ ಚಿತ್ರರಂಗ ತಬ್ಬಲಿಯಾಗಿದೆ.