ಉಗ್ರ ಬಣಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪಾಕ್‍ಗೆ ರಾಜನಾಥ್ ಸಲಹೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜ.28-ಉಗ್ರವಾದವು ಪಾಕಿಸ್ತಾನದ ರಾಷ್ಟ್ರೀಯ ನೀತಿಯಾಗಿದೆ ಎಂದು ವಾಗ್ದಾಳಿ ನಡೆಸಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಭಯೋತ್ಪಾದಕರು ಮತ್ತು ಭಯೋತ್ಪಾದನೆ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಇಸ್ಲಾಮಾಬಾದ್‍ಗೆ ಸಲಹೆ ಮಾಡಿದ್ದಾರೆ. ದೆಹಲಿಯಲ್ಲಿ ನಡೆದ 12ನೇ ದಕ್ಷಿಣ ಏಷ್ಯಾ ಸಮಾವೇಶದಲ್ಲಿ ಮಾತನಾಡಿದ ಅವರು, ಪಾಕಿಸ್ತಾನವು ತನ್ನ ಸಮಸ್ಯೆಗಳನ್ನು ಶಾಂತಿಯುತವಾಗಿ ಪರಸ್ಪರ ಚರ್ಚೆ ಮೂಲಕ ಬಗೆಹರಿಸಿಕೊಳ್ಳುವ ಬದಲು ಉಗ್ರವಾದವನ್ನು ಅನುಸರಿಸುತ್ತಿದೆ.

ಏಕೆಂದರೆ ಭಯೋತ್ಪಾದನೆ ಎಂಬುದು ಆ ದೇಶದ ರಾಷ್ಟ್ರೀಯ ನೀತಿಯಾಗಿದೆ ಎಂದು ಕಟುವಾಗಿ ಟೀಕಿಸಿದರು. ಉಗ್ರಗಾಮಿ ಬಣಗಳು ಮತ್ತು ಅವುಗಳಿಗೆ ಹಣಕಾಸು ಮತ್ತಿತರ ಸೌಲಭ್ಯಗಳನ್ನು ಪೂರೈಸುತ್ತಿರುವ ಸಂಪರ್ಕ ಜಾಲವನ್ನು ಕತ್ತರಿಸುವುದು ಪ್ರಸ್ತತ ಸನ್ನಿವೇಶದಲ್ಲಿ ಬಹುಮುಖ್ಯವಾಗಿದೆ ಎಂದು ರಕ್ಷಣಾ ಸಚಿವರು ಈ ಸಂದರ್ಭದಲ್ಲಿ ಉಲ್ಲೇಖಿಸಿದರು.

ಪಕ್ಕದಲ್ಲಿರುವ ಒಂದು ದೇಶ( ಪಾಕಿಸ್ತಾನ)ವನ್ನು ಬಿಟ್ಟು ಉಳಿದೆಲ್ಲ ರಾಷ್ಟ್ರಗಳೊಂದಿಗೆ ಏಷ್ಯಾ ಖಂಡದ ಪ್ರಾದೇಶಿಕ ಭದ್ರತೆ ಮತ್ತು ಸುರಕ್ಷತೆಗಾಗಿ ಭಾರತವು ಸಮಗ್ರ ಯೋಜನೆಯನ್ನು ರೂಪಿಸುತ್ತಿದೆ ಎಂದು ರಾಜನಾಥ್ ತಿಳಿಸಿದರು.

ಪಕ್ಕದ ರಾಷ್ಟ್ರ ನವದೆಹಲಿ (ಪಾರ್ಲಿಮೆಂಟ್ ದಾಳಿ), ಮುಂಬೈ, ಪಠಾಣ್ ಕೋಟ್, ಉರಿ ಮತ್ತು ಪುಲ್ವಾಮಗಳಲ್ಲಿ ನಡೆಸಿದ ಭಯೋತ್ಪಾದನೆ ದಾಳಿ ಬಗ್ಗೆ ಇಡೀ ವಿಶ್ವಕ್ಕೆ ಗೊತ್ತಿದೆ. ಇಂಥ ವಿಧ್ವಂಸಕ ಕೃತ್ಯಗಳು ಮತ್ತೆ ಮರುಕಳಿಸದಂತೆ ತಡೆಗಟ್ಟಲು ದಕ್ಷಿಣ ಏಷ್ಯಾ ರಾಷ್ಟ್ರಗಳು ಕೈ ಜೋಡಿಸಿ ಭಯೋತ್ಪಾದನೆ ಮತ್ತು ಉಗ್ರಗಾಮಿಗಳನ್ನು ಮಟ್ಟ ಹಾಕಲು ದೃಢ ಸಂಕಲ್ಪ ಮಾಡಬೇಕಿದೆ ಎಂದು ಅವರು ಸಲಹೆ ಮಾಡಿದರು.

Facebook Comments