ರಷ್ಯಾದಲ್ಲಿ ರಾಜನಾಥ ಸಿಂಗ್ : ಅತ್ಯಾಧುನಿಕ ಶಸ್ತ್ರಾಸ್ತ್ರ ಖರೀದಿ ಕುರಿತು ಚರ್ಚೆ

ಈ ಸುದ್ದಿಯನ್ನು ಶೇರ್ ಮಾಡಿ

ಮಾಸ್ಕೋ, ಜೂ.23- ಪೂರ್ವ ಲಡಾಕ್‍ನ ಗಾಲ್ವಾನ್ ಕಣಿವೆಯಲ್ಲಿ ಗಡಿ ನೀತಿ ನಿಯಮಗಳನ್ನು ಉಲ್ಲಂಘಿಸಿ ಚೀನೀ ಯೋಧರು ನಡೆಸಿದ ಕ್ರೌರ್ಯದಿಂದ ಭಾರತದ 20 ಯೋಧರು ಹತರಾದ ನೋವಿನ ಸಂಗತಿಯನ್ನು ನವದೆಹಲಿ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪ್ರಸ್ತಾಪಿಸಿ ಚೀನಾದ ಬಣ್ಣ ಬಯಲು ಮಾಡಲು ಸಜ್ಜಾಗಿದೆ.

ರಾಜಧಾನಿ ಮಾಸ್ಕೋದಲ್ಲಿ ರಷ್ಯಾ-ಭಾರತ-ಚೀನಾ ಈ ಮೂರು ರಾಷ್ಟ್ರಗಳ ಮಹತ್ವದ ಶೃಂಗಸಭೆ ನಡೆಯಲಿದ್ದು , ಪೂರ್ವ ಲಡಾಕ್‍ನ ವಾಸ್ತವ ಗಡಿ ರೇಖೆಯಲ್ಲಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‍ಎ) ಸೈನಿಕರ ಉದ್ಧಟತನ ಮತ್ತು ಹಿಂಸಾತ್ಮಕ ಸಂಘರ್ಷದ ಬಗ್ಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಲಿದೆ.

ರಕ್ಷಣಾ ಸಚಿವ ರಾಜನಾಥ ಸಿಂಗ್ ನಿನ್ನೆ ಮಾಸ್ಕೋಗೆ ತೆರಳಿದ್ದು, ತ್ರಿ ರಾಷ್ಟ್ರಗಳ ಶೃಂಗಸಭೆಯಲ್ಲಿ ಭಾಗವಹಿಸಲಿದ್ದು , ಚೀನಾದ ದುರ್ವರ್ತನೆ ಮತ್ತು ಕ್ರೌರ್ಯದ ಬಗ್ಗೆ ಪ್ರಸ್ತಾಪಿಸಿ ತೀವ್ರ ಆಕ್ಷೇಪ ವ್ಯಕ್ತಪಡಿಸಲಿದ್ದಾರೆ. ಪೂರ್ವ ಲಡಾಕ್‍ನಲ್ಲಿ ಉಭಯ ದೇಶಗಳ ಯೋಧರ ನಡುವೆ ಭುಗಿಲೆದ್ದ ಹಿಂಸಾತ್ಮಕ ಸಂಘರ್ಷದ ನಂತರ ಇದೇ ಮೊದಲ ಬಾರಿಗೆ ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚೀನಾದ ಬಣ್ಣವನ್ನು ಬಯಲು ಮಾಡಲು ಲಭಿಸಿರುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲಿದೆ.

ಭಾರತದ ಪರಮ ಮಿತ್ರ ರಾಷ್ಟ್ರವಾಗಿರುವ ರಷ್ಯಾದ ಅತ್ಯುನ್ನತ ನಾಯಕರ ಬಳಿ ಚೀನಾದ ಉದ್ಧಟತನವನ್ನು ರಾಜನಾಥ ಸಿಂಗ್ ಪ್ರಮುಖವಾಗಿ ಪ್ರಸ್ತಾಪಿಸಿ ಭಾರತದ ಪರ ಬೆಂಬಲ ಕೋರಲಿದ್ದಾರೆ.

ಅತ್ಯಾಧುನಿಕ ಶಸ್ತ್ರಾಸ್ತ್ರ ಖರೀದಿ ಚರ್ಚೆ: ಇದೇ ಸಂದರ್ಭದಲ್ಲಿ ರಾಜನಾಥ್ ಸಿಂಗ್ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಉಪ ಮುಖ್ಯಮಂತ್ರಿ ಯೂರಿ ಬೋರಿಸೇವ್ , ರಕ್ಷಣಾ ಸಚಿವ ಸರ್‍ಗೈ ಶಿಯೋಗೂ ಹಾಗೂ ಇತರ ಉನ್ನತ ನಾಯಕರನ್ನು ಭೇಟಿ ಮಾಡಲಿದ್ದಾರೆ. ಈ ಭೇಟಿಗಳ ವೇಳೆ ರಷ್ಯಾದಿಂದ ಅತ್ಯಾಧುನಿಕ ಯುದ್ಧಾಸ್ತ್ರಗಳನ್ನು ತ್ವರಿತವಾಗಿ ಖರೀದಿಸುವ ಸಂಬಂಧ ಮಹತ್ವದ ಚರ್ಚೆ ನಡೆಸುವರು.

ರಷ್ಯಾ-ಭಾರತ ನಡುವೆ ಈಗಾಗಲೇ 5.2 ಶತಕೋಟಿ ಡಾಲರ್ ವೆಚ್ಚದಲ್ಲಿ ಫೈಟರ್ ಜೆಟ್‍ಗಳು , ಜಲಾಂತರ್ಗಾಮಿಗಳು ಮತ್ತು ಸಮರ ಟ್ಯಾಂಕ್‍ಗಳು ಇತ್ಯಾದಿ ಶಸ್ತ್ರಾಸ್ತ್ರಗಳ ಖರೀದಿಗೆ ಒಪ್ಪಂದವಾಗಿದ್ದು , ಈ ಒಡಂಬಡಿಕೆಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸುವ ಸಂಬಂಧ ರಾಜನಾಥ್ ರಷ್ಯಾ ಮೇಲೆ ಒತ್ತಡ ಹೇರಲಿದ್ದಾರೆ.

ಎಸ್-400 ಕ್ಷಿಪಣಿಗಳು , ಸು-30ಎಂಕೆಐ ಯುದ್ಧ ವಿಮಾನಗಳು, ಮಿಗ್-29 ಫೈಟರ್ ಜೆಟ್‍ಗಳನ್ನು ಭಾರತೀಯ ವಾಯು ಪಡೆಗೆ ತ್ವರಿತವಾಗಿ ಸೇರಿಸಿಕೊಳ್ಳಲು ಸಿಂಗ್ ಮಹತ್ವದ ಸಮಾಲೋಚನೆ ನಡೆಸಿದ್ದಾರೆ. ಅಲ್ಲದೆ ಭಾರತೀಯ ನೌಕಾ ದಳಕ್ಕೆ ಅಗತ್ಯವಾಗಿರುವ ಸಬ್ ಮರೀನ್‍ಗಳು, ವೈರಿಗಳ ಯುದ್ಧ ನೌಕೆಗಳು ಮತ್ತು ಜಲಾಂತರ್ಗಾಮಿಗಳನ್ನು ಹೊಡೆದುರುಳಿಸುವ ಟಾರ್ಪೆಡೆಗಳನ್ನು ಕೊಳ್ಳಲು ಈಗಾಗಲೇ ಒಪ್ಪಂದಕ್ಕೆ ಸಹಿ ಹಾಕಿದ್ದು , ಇವುಗಳನ್ನು ಶೀಘ್ರವೇ ಭಾರತಕ್ಕೆ ರವಾನಿಸುವಂತೆ ರಷ್ಯಾ ಸರ್ಕಾರವನ್ನು ರಕ್ಷಣಾ ಸಚಿವರು ಕೋರಲಿದ್ದಾರೆ.

ಅಲ್ಲದೆ ಭಾರತೀಯ ಭೂ ಸೇನಾ ಪಡೆಗೆ ಟಿ-90 ಯುದ್ಧ ಟ್ಯಾಂಕ್‍ಗಳು ಮತ್ತು ಭಾರೀ ಗಾತ್ರದ ಪಿರಂಗಿಗಳು ಸೇರಿದಂತೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಅತಿ ಶೀಘ್ರದಲ್ಲೇ ಹೊಂದುವ ಸಂಬಂಧ ಮಾತುಕತೆ ನಡೆಯಲಿದೆ. ನಾಳೆ ಮಾಸ್ಕೋದಲ್ಲಿ ಎರಡನೆ ವಿಶ್ವ ಯುದ್ಧದ 75ನೆ ವಿಜಯೋತ್ಸವದ ಮಹಾ ಪರೇಡ್‍ನಲ್ಲೂ ರಕ್ಷಣಾ ಸಚಿವರು ಭಾಗವಹಿಸಲಿದ್ದಾರೆ.

ಈ ಮಹಾ ಸಂಗ್ರಾಮದಲ್ಲಿ ರಷ್ಯಾಗೆ ಭಾರತ ಮತ್ತು ಮಿತ್ರ ರಾಷ್ಟ್ರಗಳು ನೀಡಿದ ಸಹಕಾರವನ್ನು ಈ ವಿಕ್ಟರಿ ಪೆರೇಡ್‍ನಲ್ಲಿ ರಷ್ಯಾ ಸ್ಮರಿಸಲಿದ್ದು , ರಾಜನಾಥ ಸಿಂಗ್ ಮತ್ತು ಕೇಂದ್ರ ಸರ್ಕಾರದ ಉನ್ನತಾಧಿಕಾರಿಗಳು ಈ ಸಮಾರಂಭವನ್ನು ಸಾಕ್ಷೀಕರಿಸಲಿದ್ದಾರೆ.

Facebook Comments